ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ 20 | ಮಹತ್ವ ಪಡೆದ ಭಾರತದ ಘೋಷಣೆ: ಅಮಿತಾಭ್‌ ಕಾಂತ್‌

Published 15 ಜುಲೈ 2023, 15:28 IST
Last Updated 15 ಜುಲೈ 2023, 15:28 IST
ಅಕ್ಷರ ಗಾತ್ರ

ಹೊಸಪೇಟೆ: ಜಿ 20 ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಗಳಲ್ಲಿ ಮೂಡಿಬಂದ ಒಪ್ಪಂದಗಳ ಘೋಷಣೆಗಳಿಗಿಂತಲೂ ಭಾರತದ ಘೋಷಣೆ ಮಹತ್ವಾಕಾಂಕ್ಷಿಯಾಗಿದೆ. ಈ ಘೋಷಣೆಗಳು ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಬದಲಾವಣೆಗೆ ಸಹಕಾರಿಯಾಗಲಿವೆ. ಹಂಪಿಯಲ್ಲಿ ನಡೆದಿರುವ ಮೂರನೇ ಶೆರ್ಪಾ ಸಭೆಯಲ್ಲಿ ಭಾರತದ ಪ್ರಸ್ತಾವಗಳಿಗೆ ಭಾರಿ ಬೆಂಬಲ ದೊರೆತಿದೆ ಎಂದು ಭಾರತೀಯ ನಿಯೋಗದ ಮುಖ್ಯುಸ್ಥ (ಶೆರ್ಪಾ) ಅಮಿತಾಭ್‌ ಕಾಂತ್‌ ಹೇಳಿದರು.

‘ಜಿ 20 ರಾಷ್ಟ್ರಗಳ ಸದಸ್ಯರು ಭಾರತ ರೂಪಿಸಿದ ಕರಡು ಪ್ರತಿಗೆ ರಚನಾತ್ಮಕ ಸಲಹೆ, ಸೂಚನೆ ನೀಡುವುದರೊಂದಿಗೆ ತಾತ್ವಿಕ ಒಪ್ಪಿಗೆ ಸೂಚಿಸಿವೆ. ಭಾರತದ ಕ್ರಿಯಾತ್ಮಕ ಯೋಜನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈಗಾಗಲೇ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಜಿ 20 ಸದಸ್ಯ ರಾಷ್ಟ್ರಗಳಾಗಿವೆ. ಆಫ್ರಿಕಾ ಖಂಡದ ರಾಷ್ಟ್ರಗಳ ಸೇರ್ಪಡೆಯಾಗುವುದರಿಂದ ಜಿ 20ಗೆ ಪ್ರಪಂಚದಲ್ಲಿ ಹೆಚ್ಚಿನ ರಾಷ್ಟ್ರಗಳು ಸೇರ್ಪಡೆಯಾದಂತಾಗಿ ಇದು ಪ್ರಪಂಚದ ದೊಡ್ಡ ಆರ್ಥಿಕ ವೇದಿಕೆಯಾಗಲಿದೆ’ ಎಂದರು.

ಹಲವು ಕಾರ್ಯಸೂಚಿ: ‘ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕತೆಯ ಅಂತರ ಕಡಿಮೆ ಮಾಡುವುದು, ಅಂತರರಾಷ್ಟ್ರೀಯ ಸಾಲ ಮರುಪಾವತಿ, ವಿವಿಧ ರಾಷ್ಟ್ರಗಳ ನಡುವಿನ ಹಣಕಾಸು ಸಂಸ್ಥೆಗಳ ಸ್ಥಾಪನೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮಾನವ ಕಲ್ಯಾಣ, ಅಂತರರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಮೂಲ ಸೌಕರ್ಯದ ಡಿಜಟಲೀಕರಣದ ಜೊತೆಗೆ ಆರ್ಥಿಕ ವ್ಯವಹಾರಗಳನ್ನು ಡಿಜಟಲೀಕರಣಗೊಳಿಸಿ ಆರ್ಥಿಕತೆಯ ಲಾಭ ಎಲ್ಲಾ ಜನರಿಗೂ ತಲುಪುವಂತೆ ಮಾಡಲು ಶ್ರಮಿಸಲಾಗುತ್ತಿದೆ. ಹಸಿವು ಹಾಗೂ ಅಪೌಷ್ಟಿಕತೆಯನ್ನು ಹೋಗಲಾಡಿಸಲು, ಸಾರ್ವತ್ರಿಕ ಸ್ವಾಸ್ಥ್ಯ ರಕ್ಷಣೆ, ಕೋವಿಡ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ, ಗುಣಮಟ್ಟದ ಶಿಕ್ಷಣ ನೀಡುವ ಕುರಿತ ಪ್ರಮುಖ ವಿಷಯಗಳು, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ಕ್ರಮಗಳ ಕುರಿತು ಶೆರ್ಪಾ ಸಭೆಗಳಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ’ ಎಂದು ಅಮಿತಾಭ್‌ ಕಾಂತ್‌ ಮಾಹಿತಿ ನೀಡಿದರು.

‘ತಂತ್ರಜ್ಞಾನದ ವಿನಿಮಯ, ಸಾರ್ವಜನಿಕ ಮೂಲ ಸೌಕರ್ಯಗಳ ಡಿಜಿಟಲೀಕರಣ ಮಾಡುವ ಕ್ರಿಯಾ ಯೋಜನೆಗೆ ಅಂತಿಮ ರೂಪ ನೀಡಲಾಗುತ್ತದೆ. ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿಯೂ ಚರ್ಚಿಸಲಾಗಿದೆ. ಲಿಂಗ ಸಮಾನತೆ, ಭಯೋತ್ಪಾದನೆಯ ವಿರುದ್ಧ ಹೋರಾಟ, ಅಂತರರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಶೆರ್ಪಾ ಮಹತ್ವ ನೀಡಿದೆ’ ಎಂದು ಹೇಳಿದರು.

ಜಿ20ಯಿಂದ ಜಗತ್ತಿಗೆ ಹಂಪಿಯ ಪರಿಚಯ

ಸಾಂಸ್ಕೃತಿಕ ರಾಜಧಾನಿ ಹಂಪಿ ನಮ್ಮೆಲ್ಲರ ಹೆಮ್ಮೆ. ಈ ಅದ್ಭುತ ಪ್ರದೇಶವನ್ನು ನೋಡದಿದ್ದರೆ ಜೀವನದಲ್ಲಿ ಏನೋ ಒಂದು ಕಳೆದುಕೊಂಡಂತಹ ಭಾವನೆ ನಿಶ್ಚಿತ. ಇಲ್ಲಿ ಶೆರ್ಪಾ ಸಭೆ ನಡೆಯುತ್ತಿರುವುದು ಜಗತ್ತಿಗೆ ಹಂಪಿಯನ್ನು ಪರಿಚಯಿಸಿದಂತೆ  ಆಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

‘ಪ್ರವಾಸೋದ್ಯಮ ಇಲಾಖೆಯ ಜೊತೆ ಸೇರಿ ಹಂಪಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಶೆರ್ಪಾ ಸಭೆಯಿಂದಾಗಿ ಜಗತ್ತಿನಲ್ಲಿ ಹಂಪಿ ಹೆಚ್ಚು ಪ್ರಚಲಿತವಾಗಲಿದೆ. ಹಂಪಿಗೆ ಹೆಚ್ಚು ಒತ್ತು ಕೊಡಬೇಕು ಹಾಗೂ ಶೆರ್ಪಾ ಪ್ರತಿನಿಧಿಗಳ ಅನಿಸಿಕೆ ಮತ್ತು ಅಭಿಪ್ರಾಯಗಳು ಮುಂದಿನ ದಿನಗಳಲ್ಲಿ ಹಂಪಿಯ ಅಭಿವೃದ್ದಿಗೆ ಇನ್ನಷ್ಟು ಕಾರಣವಾಗಲಿದೆ’ ಎಂದು ಅವರು ಶುಕ್ರವಾರ ರಾತ್ರಿ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT