ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ತುಂಗಭದ್ರಾ ಅಣೆಕಟ್ಟೆಯತ್ತ ಮೂರು ಎಲಿಮೆಂಟ್‌ಗಳ ರವಾನೆ ಇಂದು

1,627.15 ಅಡಿಗೆ ಕುಸಿದ ಮಟ್ಟ; ಜಲಾಶಯ ನೀರು ಸಂಗ್ರಹ 83.74 ಟಿಎಂಸಿ ಅಡಿಗೆ ಇಳಿಕೆ
Published 14 ಆಗಸ್ಟ್ 2024, 4:05 IST
Last Updated 14 ಆಗಸ್ಟ್ 2024, 4:05 IST
ಅಕ್ಷರ ಗಾತ್ರ

ಹೊಸಪೇಟೆ: ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿಗೆ ತಾತ್ಕಾಲಿಕ ಗೇಟ್ ಅಳವಡಿಕೆ ಪ್ರಕ್ರಿಯೆ ಬಿರುಸುಗೊಂಡಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ ಎರಡು ಹಾಗೂ ಸಂಜೆ ವೇಳೆಗೆ ಒಂದು ಗೇಟ್ ಎಲಿಮೆಂಟ್ ಅನ್ನು ಅಣೆಕಟ್ಟೆ ಸಮೀಪಕ್ಕೆ ಸಾಗಿಸುವ ಸಾಧ್ಯತೆ ಇದೆ.

‘ಅಣೆಕಟ್ಟೆ ಪ್ರದೇಶಕ್ಕೆ ಬುಧವಾರ ಯಾರನ್ನೂ ಬಿಡುತ್ತಿಲ್ಲ. ವಿಐಪಿಗಳಿಗೆ ಸಹ ಪ್ರವೇಶ ಇಲ್ಲ. ಗೇಟ್‌ ಅಳವಡಿಕೆ ಕಾಮಗಾರಿ ನಡೆಯುವುದಕ್ಕೆ ಅಡ್ಡಿ ಆಗಬಾರದು ಎಂಬ ಕಾರಣಕ್ಕೆ ಈ ಕಟ್ಟುನಿಟ್ಟಿನಿ ನಿರ್ಬಂಧ ಹೇರಲಾಗಿದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಈ ಮೂಲಕ ಬುಧವಾರವೇ ತಲಾ 4 ಅಡಿ ಎತ್ತರದ, 60 ಅಡಿ ಅಗಲದ ಗೇಟ್‌ನ ಬೃಹತ್ ತೊಲೆಗಳು (ಎಲಿಮೆಂಟ್‌) ಅಣೆಕಟ್ಟೆ ಸಮೀಪಕ್ಕೆ ತರುವ ಸುಳಿವನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಯಾರಿಂದಲೂ ಹೊರಬಿದ್ದಿಲ್ಲ.

23 ಟಿಎಂಸಿ ಅಡಿ ನೀರು ಹೊರಕ್ಕೆ: ಕಳೆದ ನಾಲ್ಕು ದಿನಗಳಿಂದ 19ನೇ ಗೇಟ್ ಸಹಿತ ಒಟ್ಟು 29 ಗೇಟ್‌ಗಳಿಂದ ನಿರಂತರ ನೀರು ನದಿಗೆ ಹರಿಯುತ್ತಿದ್ದು, ಒಟ್ಟು 23 ಟಿಎಂಸಿ ಅಡಿ ನೀರು ನದಿಪಾಲಾಗಿದೆ. ಪ್ರತಿದಿನ ಬಹುತೇಕ 10 ಟಿಎಂಸಿ ಅಡಿಯಷ್ಟು ಪ್ರಮಾಣದಲ್ಲಿ ನೀರು ಹೊರ ಹಾಕುವ ಯೋಜನೆಯನ್ನು ಮಂಡಳಿಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ರೂಪಿಸಿಕೊಂಡಿದ್ದಾರೆ. ಜತೆಗೆ ನದಿ ಪಾತ್ರದ ಜನರಿಗೆ ತೊಂದರೆ ಆಗಬಾರದು ಎಂಬ ಕಾಳಜಿಯನ್ನೂ ಇಟ್ಟುಕೊಂಡಿದ್ದಾರೆ. ಹೀಗಾಗಿ ಬಹುತೇಕ 1.20 ಲಕ್ಷ ಕ್ಯುಸೆಕ್‌ ಮಟ್ಟದಲ್ಲೇ ನೀರು ಹೊರಹಾಕುವ ಪ್ರಮಾಣವನ್ನು ಉಳಿಸಿಕೊಂಡಿದ್ದಾರೆ. ಕ್ರಸ್ಟ್‌ಗೇಟ್‌ ತಜ್ಞ ಕನ್ನಯ್ಯ ನಾಯ್ಡು ಅವರ ಸಲಹೆ, ಸೂಚನೆ ಪ್ರತಿ ಹಂತದಲ್ಲೂ ಲಭಿಸುತ್ತಿದ್ದು, ಅವರು ಇಲ್ಲೇ ಮೊಕ್ಕಾಂ ಹೂಡಿದ್ದಾರೆ.

ಆ.10ರಂದು ಜಲಾಶಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ 105.78 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಅದೇ ದಿನ ರಾತ್ರಿ ಗೇಟ್ ನೀರಲ್ಲಿ ಕೊಚ್ಚಿ ಹೋದ ಬಳಿಕ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದು ಅನಿವಾರ್ಯವಾಯಿತು. ಇದೀಗ ನೀರಿನ ಸಂಗ್ರಹ 83.74 ಟಿಎಂಸಿ ಅಡಿಗೆ ಕುಸಿದಿದೆ. ಅಣೆಕಟ್ಟೆಯ ನೀರಿನ ಮಟ್ಟ ಗರಿಷ್ಠ 1,633ರಿಂದ 1,627.15 ಅಡಿಗೆ ಕುಸಿತವಾಗಿದೆ.

ನೀರಿನ ಮಟ್ಟ 1,624.52 ಅಡಿಗೆ ಕುಸಿದಾಗ ಗೇಟ್‌ನ ಎಲಿಮೆಂಟ್‌ ಅನ್ನು ನೀರು ಹರಿಯುತ್ತಿದ್ದಾಗಲೇ ಅಳವಡಿಸುವ ಪ್ರಯತ್ನ ಮಾಡುವುದಾಗಿ ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ. ಗುರುವಾರ (ಆ.15) ಅದು ಬಹುತೇಕ ನಿಶ್ಚಿತವಾಗಿದೆ. ಅದಕ್ಕಿಂತ ಮೊದಲೇ ಸ್ವಲ್ಪ ಅಧಿಕ ಪ್ರಮಾಣದಲ್ಲಿ ನೀರಿನ ಸಂಗ್ರಹ ಇದ್ದಾಗಲೇ ಎಲಿಮೆಂಟ್ ಅಳವಡಿಕೆಯ ಪ್ರಯತ್ನ ನಡೆಯಬಹುದೇ ಎಂಬ ಕುತೂಹಲ ನೆಲೆಸಿದೆ. ಹೀಗಾಗಿ ಬುಧವಾರ ಸಂಜೆಯ ವೇಳೆ ಅಥವಾ ಗುರುವಾರ ಬೆಳಿಗ್ಗೆ ಇಂತಹ ಪ್ರಯತ್ನ ನಡೆಯುವ ಸಾಧ್ಯತೆ ಇರುವ ಸೂಚನೆ ಲಭಿಸುತ್ತಿದೆ. ಸಾರ್ವಜನಿಕರನ್ನು, ವಿಐಪಿಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಿದ್ದರ ಸೂಚನೆ ಇದು ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT