ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಸಚಿವ ಜಮೀರ್ ಕಾರ್ಯವೈಖರಿ ಟೀಕಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್

Published 9 ಫೆಬ್ರುವರಿ 2024, 9:16 IST
Last Updated 9 ಫೆಬ್ರುವರಿ 2024, 9:16 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರ ಕಾರ್ಯವೈಖರಿಯನ್ನ ಮತ್ತೊಮ್ಮೆ ಕಟುವಾಗಿ ಟೀಕಿಸಿರುವ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಿರಾಜ್‌ ಶೇಖ್‌, ಅಂಗನವಾಡಿಗೆ ಆಹಾರ ಪೂರೈಸುವ ವಿಚಾರದಲ್ಲಿ ದೊಡ್ಡ ಅವ್ಯವಹಾರ ನಡೆದಿದ್ದರೂ ನಿರ್ಲಿಪ್ತವಾಗಿರುವುದನ್ನು ಖಂಡಿಸಿದ್ದಾರೆ.

‘ಜಿಲ್ಲೆಯಲ್ಲಿ ನವೆಂಬರ್‌ನಿಂದೀಚೆಗೆ ಅಂಗನವಾಡಿಗೆ ಅಹಾರ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಈ ಬಗ್ಗೆ ಕೇಳಿದರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮಾಹಿತಿಯೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಗಳಲ್ಲಿ ಏನು ಮಾಡುತ್ತಾರೆ ಎಂಬ ಪ್ರಶ್ನೆ ಇದೆ. ಬಡವರ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಸುವ ವ್ಯವಸ್ಥೆಯಲ್ಲೇ ಅವ್ಯವಹಾರ ನಡೆಯುತ್ತಿದ್ದರೂ ಸಚಿವರು ಸುಮ್ಮನಿರುವುದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಮಗ್ರ ತನಿಖೆಗೆ ಆಗ್ರಹ: ‘ಕೆಡಿಪಿ ಸಭೆಯಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಎಲ್ಲ ವಿಚಾರಗಳೂ ಚರ್ಚೆಗೆ ಬರುತ್ತವೆ. ಅಂಗನವಾಡಿ ಆಹಾರ ಪೂರೈಕೆಗಾಗಿ ಪ್ರತಿ ತಾಲ್ಲೂಕಿಗೆ ತಿಂಗಳಿಗೆ ಸರಾಸರಿ ₹1.24 ಕೋಟಿ ಖರ್ಚಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಮಾಡುವ ಖರ್ಚು. ವಿಜಯನಗರ ಜಿಲ್ಲೆಯಲ್ಲಿ ಹೀಗೆ ಸುಮಾರು ₹5 ಕೋಟಿ ಖರ್ಚಾಗುತ್ತದೆ. ಮೂರು ತಿಂಗಳಿಂದ ಸಮರ್ಪಕ ಆಹಾರ ಪೂರೈಕೆ ಆಗಿಲ್ಲ, ಗುತ್ತಿಗೆ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ಕೆಲವರಿಂದ ಸಾಮಗ್ರಿ ಪೂರೈಕೆ ಮಾಡಿಸಲಾಗುತ್ತಿರುವ ಆರೋಪ ಇದೆ. ಇಲ್ಲಿ ದೊಡ್ಡ ಅಕ್ರಮ ನಡೆದಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಆಗ್ರಹಿಸಿದರು.

‘ಸಚಿವರಿಗೆ ಅವರ ಇಲಾಖೆಗಳಾದ ವಸತಿ, ವಕ್ಫ್ ವಿಚಾರದಲ್ಲೂ ಆಸಕ್ತಿ ಇಲ್ಲ. ಹೊಸಪೇಟೆಯಲ್ಲೇ 58 ಕೊಳೆಗೇರಿಗಳಿದ್ದರೂ ಒಂದು ಕೊಳೆಗೇರಿಗೂ ಅವರು ಇದುವರೆಗೆ ಭೇಟಿ ನೀಡಿಲ್ಲ. ನಗರದಲ್ಲಿ 40 ಮಸೀದಿಗಳಿವೆ, ಈ ಪೈಕಿ 23 ಮಸೀದಿಗಳು ವಕ್ಫ್‌ ಮಂಡಳಿಯಲ್ಲಿ ನೋಂದಣಿಯಾಗಿವೆ. ಪ್ರತಿ ವರ್ಷ ನವೀಕರಣ ಆಗಬೇಕಾಗುತ್ತದೆ.  ಇವುಗಳು ಬೈಲಾ ಪ್ರಕಾರ ಕೆಲಸ ಮಾಡುತ್ತಿವೆಯೇ, ಇಲ್ಲವೇ ಎಂಬುದನ್ನೂ ಗಮನಿಸುತ್ತಿಲ್ಲ. ಕೇವಲ ಹಂಪಿ ಉತ್ಸವ, ಸ್ವಾತಂತ್ರ್ಯ, ಗಣರಾಜ್ಯೋತ್ಸವಕ್ಕೆ ಬಂದು ಹೋದರೆ ಸಾಕೇ? ಸರ್ಕಾರದ ಯೋಜನೆಗಳು ಸರಿಯಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹೊಣೆ ಹೊಂದಿರುವ ಸಚಿವರು ಹೀಗೆ ಕಾಲಹರಣ ಮಾಡುವುದನ್ನು ನೋಡಿಕೊಂಡಿರಲು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ಅವರನ್ನು ಎಚ್ಚರಿಸುವ ಸಲುವಾಗಿಯೇ ಮಾಧ್ಯಮಗಳ ಮೂಲಕ ಈ ವಿಷಯ ಪ್ರಸ್ತಾಪಿಸಿದ್ದೇನೆ’ ಎಂದು ಸಿರಾಜ್ ಶೇಖ್‌ ಹೇಳಿದರು.

‘ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದರೆ ಸ್ವಚ್ಛ ಆಡಳಿತ ನೀಡುತ್ತೇವೆ ಎಂದು ನಾನು ಪ್ರಚಾರದ ವೇಳೆ ಜಿಲ್ಲೆಯ ಜನತೆಗೆ ಭರವಸೆ ನೀಡಿದ್ದೆ. ಜನ ನನ್ನನ್ನು ಪ್ರಶ್ನೆ ಮಾಡುತ್ತಾರೆ. ಜನರಿಗೆ ತಪ್ಪು ಸಂದೇಶ ರವಾನೆಯಾಗುವುದಕ್ಕೆ ನಾನು ಅವಕಾಶ ನೀಡಲಾರೆ. ಪಕ್ಷದ ಹಿತದೃಷ್ಟಿಯಿಂದಲೇ ನಾನು ಸಚಿವರ ಕಾರ್ಯವೈಖರಿಯನ್ನು ಟೀಕಿಸಿದ್ದು, ಅವರು ಇನ್ನು ಮುಂದಾದರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡಬೇಕು, ದಾರಿ ತಪ್ಪಿದ, ಇಲ್ಲವೇ ತಪ್ಪಿಸಲು ಯತ್ನಿಸುವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವಂತೆ ತಾಕೀತು ಮಾಡಬೇಕು’ ಎಂದು ಹೇಳಿದರು.

ಸಿರಾಜ್‌ ಶೇಖ್‌ ಅವರು ಫೆಬ್ರುವರಿ 6ರಂದು ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಸಚಿವ ಜಮೀರ್ ಅವರಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹಳ ಹಾನಿ ಉಂಟಾಗುತ್ತಿದೆ, ಪಕ್ಷ ಮತ್ತಷ್ಟು ಛಿದ್ರಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ಉಸ್ತುವಾರಿ ಸಚಿವರನ್ನು ಬದಲಿಸಬೇಕು ಎಂದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT