ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ-20 ಮೂರನೇ ಸಭೆ ಮುಕ್ತಾಯ | ಹಂಪಿ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿ: ಅಮಿತಾಭ್ ಸಂತಸ

Published 15 ಜುಲೈ 2023, 14:28 IST
Last Updated 15 ಜುಲೈ 2023, 14:28 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿಯಲ್ಲಿ ಶನಿವಾರ ಸಂಜೆ ಕೊನೆಗೊಂಡ ಜಿ20 ಮೂರನೇ ಶೆರ್ಪಾ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಭಾರತ ಮುಂದಿಟ್ಟಿರುವ ಬಹುತೇಕ ಎಲ್ಲ ಪ್ರಸ್ತಾವಗಳನ್ನು ಇತರ ದೇಶಗಳು ಒಪ್ಪಿವೆ’ ಎಂದು ಭಾರತೀಯ ನಿಯೋಗದ ಮುಖ್ಯಸ್ಥ ಅಮಿತಾಭ್‌ ಕಾಂತ್ ಹೇಳಿದರು.

‘ಆಫ್ರಿಕಾ ಒಕ್ಕೂಟವನ್ನು ಜಿ20 ಗುಂಪಿಗೆ ಸೇರಿಸುವ ಪ್ರಸ್ತಾವ ಸಹಿತ ಹಲವು ಅಭಿವೃದ್ಧಿ ಕೇಂದ್ರಿತ ಪ್ರಸ್ತಾವಗಳನ್ನು ಭಾರತ ಮುಂದಿಟ್ಟಿತ್ತು. ಅವುಗಳನ್ನು ಇತರ ದೇಶಗಳು ಒಪ್ಪಿದ್ದು, ಸಭೆಯು ನಿರೀಕ್ಷೆಯನ್ನೂ ಮೀರಿ ಯಶಸ್ವಿಯಾಗಿದೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಜಿ20 ಅಧ್ಯಕ್ಷತೆ ವಹಿಸಿರುವ ಭಾರತದಲ್ಲಿ ಈ ಹಿಂದೆ ಹಲವು ಸಭೆಗಳು ನಡೆದಿವೆ. ಆದರೆ ಎಲ್ಲಾ ಕಾರ್ಯಸೂಚಿಗಳನ್ನು ಚರ್ಚಿಸುವುದು ಸಾಧ್ಯವಾಗಿರಲಿಲ್ಲ. ಹಂಪಿಯ ಶೆರ್ಪಾ ಸಭೆಯಲ್ಲಿ ಎಲ್ಲಾ 45 ಕಾರ್ಯಸೂಚಿಗಳ ಬಗ್ಗೆಯೂ  ಚರ್ಚಿಸಿ, ಕರಡು ಸಿದ್ಧಪಡಿಸುವ ಕೆಲಸ ಆಗಿದೆ. ಸೆಪ್ಟೆಂಬರ್‌ 9 ಮತ್ತು 10ರಂದು ದೆಹಲಿಯಲ್ಲಿ ಮುಂದಿನ ಶೆರ್ಪಾ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ಕರಡು ಹಾಗೂ ದೆಹಲಿ ಘೋಷಣೆ ಸಿದ್ಧವಾಗಲಿದೆ’ ಎಂದು ಅವರು ವಿವರಿಸಿದರು.

‘ರಷ್ಯಾ–ಉಕ್ರೇನ್‌ ಯುದ್ಧ ಸಹಿತ ಜಾಗತಿಕ ರಾಜಕೀಯ ವಿಚಾರಗಳನ್ನು ಚರ್ಚಿಸುವ ವೇದಿಕೆ ಇದಾಗಿರಲಿಲ್ಲ. ಅನೌಪಚಾರಿಕ ಚರ್ಚೆಯ ವೇಳೆ ಈ ವಿಷಯಗಳು ಬಂದಿವೆಯೇ ಹೊರತು ನಮ್ಮ ಗುರಿ ಏನಿದ್ದರೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವತ್ತ ಒಗ್ಗೂಡಿ ನಡೆಯುವುದು. ಭಯೋತ್ಪಾದನೆ, ಮಾದಕ ವಸ್ತು ಕಳ್ಳಸಾಗಣೆ ನಿಗ್ರಹದಂತಹ ವಿಷಯಗಳು ಕರಡು ಪ್ರಸ್ತಾವದಲ್ಲಿ ಸೇರಿವೆ. ಆಫ್ರಿಕಾ ಒಕ್ಕೂಟವನ್ನು ಜಿ20 ಗುಂಪಿಗೆ ಸೇರಿಸುವುದರಿಂದ ಹಿಂದುಳಿದ ಹಲವು ದೇಶಗಳ ಅಭಿವೃದ್ಧಿಗೆ ವೇಗ ಸಿಗಲಿದೆ’ ಎಂದರು.

45 ಪ್ರಮುಖ  ಕಾರ್ಯಸೂಚಿಗಳ ಬಗ್ಗೆ ಚರ್ಚೆ, ಕರಡು ರಚನೆ ಹಲವು ದ್ವಿಪಕ್ಷೀಯ ಮಾತುಕತೆಗಳಿಗೂ ವೇದಿಕೆಯಾದ ಶೆರ್ಪಾ ಸಭೆ 125 ಪ್ರತಿನಿಧಿಗಳು ಭಾಗಿ–ಭಾನುವಾರ ನಿರ್ಗಮನ

ಹಂಪಿಯಂತಹ ಸ್ಥಳ ಬೇರೆ ಇಲ್ಲ ‘ಜಗತ್ತಿನಲ್ಲಿ ಹಲವು ಪಾರಂಪರಿಕ ತಾಣಗಳಿವೆ. ಹೆಚ್ಚಿನ ತಾಣಗಳಿಗೆ ನಾನು ಭೇಟಿ ನೀಡಿದ್ದೇನೆ. ಆದರೆ ಹಂಪಿಯಂತಹ ಸ್ಥಳವನ್ನು ನಾನು ಕಂಡಿಲ್ಲ. ರಾತ್ರಿ ಹೊತ್ತಲ್ಲಿ ಹಂಪಿಯ ಸೊಬಗಂತೂ ಅದ್ಭುತ. ಜಿ20 ಸಭೆಗೆ ಬಂದ ಗಣ್ಯರೆಲ್ಲ ಇಲ್ಲಿನ ಭೂ ರಚನೆ ಸ್ಮಾರಕಗಳನ್ನು ಕಂಡು ಬೆರಗಾಗಿದ್ದಾರೆ. ಭಾರತೀಯ ಕಲೆ ಸಂಸ್ಕೃತಿ ಸಂಗೀತ ನೃತ್ಯಗಳಿಂದ ಪ್ರಭಾವಿತರಾಗಿದ್ದಾರೆ’ ಎಂದು ಅಮಿತಾಭ್‌ ಕಾಂತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT