ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾರದ ತುಂಗಭದ್ರೆಯ ಹಿನ್ನೀರು: ರೈತರಲ್ಲಿ ಮೊಗದಲ್ಲಿ ಮೂಡಿದ ಆತಂಕ

Published 29 ಆಗಸ್ಟ್ 2024, 6:27 IST
Last Updated 29 ಆಗಸ್ಟ್ 2024, 6:27 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾಶಯದ ಹಿನ್ನೀರನ್ನು ತಾಲ್ಲೂಕಿನ ರೈತರ ಜೀವನಾಡಿ ಮಾಲವಿ ಜಲಾಶಯಕ್ಕೆ ಯಂತ್ರದ ಮೂಲಕ ಹರಿಸುವ ಯೋಜನೆ ಸದ್ಯ ಸ್ಥಗಿತಗೊಂಡಿದೆ. ಇದರಿಂದಾಗಿ ಮಾಲವಿ ಜಲಾಶಯ ಭರ್ತಿಯಾಗುವ ಸಂತಸದಲ್ಲಿದ್ದ ರೈತರಿಗೆ ನಿರಾಸೆ ಉಂಟಾಗಿದೆ.

ಸಿಂಗಟಾಲೂರು ಬ್ಯಾರೇಜ್‌ನಿಂದ 22 ಸಾವಿರ ಕ್ಯುಸೆಕ್ ನೀರು ಹರಿದರೆ ಮಾತ್ರ ಮಾಲವಿಗೆ ನೀರು ಬರುತ್ತದೆ. ಸದ್ಯ ಬ್ಯಾರೇಜ್‌ನಿಂದ 11 ಸಾವಿರ ಕ್ಯುಸೆಕ್ ಮಾತ್ರ ಹರಿಯುತ್ತಿದೆ.

ಕಳೆದ ವಾರವಷ್ಟೇ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯದ ಕ್ರಸ್ಟ್ ಗೇಟ್‍ಗಳಿಂದ ಸೋರಿಕೆಯಾಗುತ್ತಿದ್ದ ನೀರು ತಡೆಯುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಒಂದು ತಿಂಗಳಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿ ಹರಿದಿತ್ತು. ಆದರೆ ಈಗ ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ ಮಾತ್ರ ನೀರು ಹರಿದು ಬರುವ ಸ್ಥಿತಿ ಇದೆ.

2 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ ಭರ್ತಿಯಾದರೆ ತಾಲ್ಲೂಕಿನ ಹತ್ತಾರು ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಯುತ್ತದೆ, ರೈತರ ಬದುಕು ಹಸನಾಗುತ್ತದೆ. 15 ಸಾವಿರ ಎಕರೆ ನೀರಾವರಿ ಪ್ರದೇಶವಾಗುತ್ತದೆ, ಸಾವಿರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಎಡ ಮತ್ತು ಬಲ ದಂಡೆ ಕಾಲುವೆಗಳಲ್ಲಿ 162 ಕ್ಯುಸೆಕ್‌ ನೀರು ಹರಿಯುತ್ತದೆ. ಬಲದಂಡೆ ಕಾಲುವೆ 33.60 ಕಿ.ಮೀ., ಎಡದಂಡೆ ಕಾಲುವೆ 16.50 ಕಿ.ಮೀ. ಉದ್ದ ಇದೆ.

ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮಾಲವಿ ಜಲಾಶಕ್ಕೆ ಶಾಶ್ವತ ನೀರು ಹರಿಸುವ ಯೋಜನೆಗೆ ₹165 ಕೋಟಿ ಅನುದಾನ ತರುವಲ್ಲಿ ಶಾಸಕ ಭೀಮನಾಯ್ಕ ಯಶಸ್ವಿಯಾಗಿದ್ದರು.

ಹೂವಿನಹಡಗಲಿ ತಾಲ್ಲೂಕಿನ ರಾಜವಾಳದ ಬಳಿ ಜಾಕ್‍ವೆಲ್ ನಿರ್ಮಿಸಿ, ಅಲ್ಲಿಂದ ತಾಲ್ಲೂಕಿನ ಉಲವತ್ತಿಯವರೆಗೂ ಪೈಪ್‍ಲೈನ್ ಅಳವಡಿಸಲಾಗಿದೆ. ಜಲಾಶಯಕ್ಕೆ ನೀರು ಸರಾಗವಾಗಿ ಹರಿಯುತ್ತದೆ. ಕಾಮಗಾರಿ ಪೂರ್ಣಗೊಂಡು 2022ರಲ್ಲಿ ಉತ್ತಮ ಮಳೆ ಸುರಿಯಿತು, ಜತೆಗೆ ತುಂಗಭದ್ರೆಯಿಂದ ನೀರು ಹರಿಸಿದ್ದರಿಂದ ಜಲಾಶಯ ಕಡಿಮೆ ಅವಧಿಯಲ್ಲಿಯೇ ಭರ್ತಿಯಾಗಿತ್ತು.

‘ಈಗ ಕಳೆದ 1ತಿಂಗಳಿಂದ ಹರಿಯುತ್ತಿದ್ದ ನೀರು ದಿಢೀರ್ ಸ್ಥಗಿತಗೊಂಡಿದೆ, ಸತತವಾಗಿ ಮೂರು ತಿಂಗಳು ಹರಿಸಿದರೆ ಮಾತ್ರ ಜಲಾಶಯ ಭರ್ತಿಯಾಗುತ್ತದೆ, ಈ ಕುರಿತಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಈ ಭಾಗದ ರೈತರ ಮುಖದಲ್ಲಿನ ನಿರಾಸೆಯ ಗೆರೆಗಳನ್ನು ಅಳಿಸಬೇಕಿದೆ’ ಎನ್ನುತ್ತಾರೆ ರೈತ ಮುಖಂಡ ಬಿ.ಸಿದ್ದನಗೌಡ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಜಲಾಶಯದಿಂದ ಪೈಪ್ ಮೂಲಕ ಹರಿಯುತ್ತಿದ್ದ ನೀರು ಸ್ಥಗಿತಗೊಂಡಿದೆ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಜಲಾಶಯದಿಂದ ಪೈಪ್ ಮೂಲಕ ಹರಿಯುತ್ತಿದ್ದ ನೀರು ಸ್ಥಗಿತಗೊಂಡಿದೆ
ತುಂಗಭದ್ರ ನದಿಯಲ್ಲಿ ಒಳಹರಿವು ಕಡಿಮೆಯಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾದಲ್ಲಿ ನೀರು ಹರಿಸುವುದಕ್ಕೆ ಚಾಲನೆ ನೀಡಲಗುವುದು.
–ರಾಘವೇಂದ್ರ ಎಇಇ ಸಿಂಗಟಾಲೂರು ಯೋಜನೆ
ನಿರಂತರವಾಗಿ ತುಂಗಭದ್ರಾ ನದಿಯಿಂದ ನೀರು ಹರಿಸುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೆ ಇರಬೇಕು. ನೀರು ಹರಿಸುವ ಯಂತ್ರಗಳನ್ನು ಸ್ಥಗಿತಗೊಳಿಸದಂತೆ ಸೂಚನೆ ನೀಡಬೇಕು.
–ಕೆ.ರೇವಣಸಿದ್ದಪ್ಪ ರೈತ ಮಾಲವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT