ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಂಧಳಿಪುರದಲ್ಲಿ 24 ಗಂಟೆಯೂ ಆಲಮಟ್ಟಿ ನೀರು

ಹೊಸಪೇಟೆ ನಗರಸಭೆಯ ಕಾರಿಗನೂರು 23ನೇ ವಾರ್ಡ್‌–ಶಾಸಕ ಗವಿಯಪ್ಪ ಪ್ರಯತ್ನಕ್ಕೆ ಸ್ಥಳೀಯರ ಕೃತಜ್ಞತೆ
Published 29 ಮೇ 2024, 4:55 IST
Last Updated 29 ಮೇ 2024, 4:55 IST
ಅಕ್ಷರ ಗಾತ್ರ
ಹೊಸಪೇಟೆಯಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ನೀರಿನ ರಾಜಕೀಯ ನಡೆಸುತ್ತಿದ್ದಾರೆಯೇ ಎಂಬ ಗುಮಾನಿ ಬರುವ ರೀತಿಯ ಬೆಳವಣಿಗೆಗಳು ಮೂರು ದಿನಗಳ ಹಿಂದೆ ನಡೆದವು. ಸಿಂಗ್ ಅವರ ನೀರಿನ ಟ್ಯಾಂಕರ್‌ಗೆ ನೀರು ಕೊಡಬೇಡಿ ಎಂದು ಶಾಸಕರು ಹೇಳಿದ್ದು ವಿವಾದ ಭುಗಿಲೇಳುವಂತೆ ಮಾಡಿತು. ನಗರದ ನೀರನ್ನು ಗ್ರಾಮಾಂತರ ಪ್ರದೇಶಗಳಿಗೆ ಸಾಗಿಸಲಾಗುತ್ತಿದೆ ಎಂಬ ಆರೋಪ ಕಾರಣಕ್ಕೂ ಈ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಬಿಕ್ಕಟ್ಟು ಬಗೆಹರಿಸಲು ನಗರಸಭೆಯ ವಿಶೇಷ ಸಭೆ ಕರೆದು, ಖಾಸಗಿ ಟ್ಯಾಂಕರ್‌ಗಳಿಗೂ ನಗರಸಭೆಯ ನೀರನ್ನು ನೀಡಬೇಕು ಎಂಬ ನಿರ್ಣಯ ಅಂಗೀಕಾರವಾಗಿದೆ.

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ 23ನೇ ವಾರ್ಡ್‌ ಕಾರಿಗನೂರಿನ ಗೋಂಧಳಿಪುರದಲ್ಲಿ ಕುಡಿಯುವ ನೀರಿಗೆ ಭಿಕ್ಷೆ ಬೇಡುವ ಸ್ಥಿತಿ ಈಗ್ಗೆ ಎರಡು ತಿಂಗಳ ಹಿಂದಿನವರೆಗೆ ಇತ್ತು. ಈಗ ವಿದ್ಯುತ್ ಇಲ್ಲದಿದ್ದರೂ 24 ಗಂಟೆಯೂ ಅಲ್ಲಿ ನೀರು ಹರಿಯುತ್ತದೆ. ಗುಡ್ಡದ ಮೇಲಿನ 100ಕ್ಕೂ ಅಧಿಕ ಮನೆಗಳಿಗೆ ನೀರು ಹರಿಸಿದ ಭಗೀರಥ ಯಾರು? ಸ್ಥಳೀಯರ ಬೆರಳು ಖುಷಿಯಲ್ಲಿ ಶಾಸಕ ಎಚ್‌.ಆರ್.ಗವಿಯಪ್ಪ ಅವರತ್ತ ಬೊಟ್ಟು ಮಾಡುತ್ತದೆ.

‘ನಾವು ಗೋಂಧಳಿ ಸಮುದಾಯದವರು, ಇಲ್ಲಿನ ಮಂದಿ ಪ್ಲಾಸ್ಟಿಕ್‌ ಸಾಮಗ್ರಿ ಮಾರುವವರು, ನಮ್ಮದು ಒಂದು ರೀತಿಯಲ್ಲಿ ಅಲೆಮಾರಿ ಬದುಕೇ. ಆದರೆ ಎರಡು ವರ್ಷದ ಹಿಂದೆ ಇಲ್ಲಿ ಸುಮಾರು ನಾಲ್ಕು ಎಕರೆ ಜಾಗ ಖರೀದಿಸಿ ನೂರು ಶೀಟು ಮನೆಗಳನ್ನು ಕಟ್ಟಿಕೊಂಡು ವಾಸವಿದ್ದೇವೆ. ಆದರೆ ನಮಗೆ ನೀರಿನದ್ದೇ ಸಮಸ್ಯೆಯಾಗಿತ್ತು’ ಎಂದು ಸ್ಥಳೀಯರಾದ ಕೃಷ್ಣಪ್ಪ ಹೇಳಿದರು.

‘ಕೊಳವೆ ಬಾವಿ ತೋಡಿಸಿದೆವು, ಕೇವಲ ಒಂದು ಇಂಚು ನೀರು ಸಿಕ್ಕಿತ್ತು, ಬೇಸಿಗೆಯಲ್ಲಿ ಅದೂ ಬತ್ತಿ ಹೋಗುತ್ತಿತ್ತು. ಸುಮಾರು ಎರಡು ಕಿ.ಮೀ ದೂರದ ಎಚ್‌ಎಲ್‌ಸಿ ಕಾಲುವೆಯಲ್ಲಿ ನೀರು ಹರಿಯುವಾಗ ಅಲ್ಲಿಂದ ಕೊಡಗಳಲ್ಲಿ ನೀರು ಹೊತ್ತು ತರುತ್ತಿದ್ದೆವು. ನೀರು ಹರಿಯುವುದು ಬಂದ್‌ ಆದಾಗ ನಾವು ಅಕ್ಕಪಕ್ಕದ ಜಮೀನುಗಳಲ್ಲಿನ ನೀರಿಗೆ ಭಿಕ್ಷೆ ಬೇಡುವುದು ಅನಿವಾರ್ಯವಾಗಿತ್ತು. ಇದೀಗ ಶಾಸಕ ಗವಿಯಪ್ಪ ಅವರು ಸ್ವಂತ ₹2 ಲಕ್ಷ ಖರ್ಚು ಮಾಡಿ, 2 ಕಿ.ಮೀ ದೂರದಲ್ಲಿರುವ ಜಿಂದಾಲ್‌ ಪೈಪ್‌ಲೈನ್‌ನಿಂದ ನಮಗೆ ನೀರಿನ ಪೈಪ್‌ ಹಾಕಿಸಿಕೊಟ್ಟಿದ್ದಾರೆ. ಆಲಮಟ್ಟಿ ನೀರು ನಮಗೆ 24 ಗಂಟೆಯೂ ಲಭಿಸುತ್ತಿದೆ’ ಎಂದು ಅವರು ಹೇಳಿದರು.

‘ನೀರು ಬಹಳ ಚೆನ್ನಾಗಿದೆ, ಬಿಸಿಮಾಡದೆ ಹಾಗೆಯೇ ಕುಡಿಯುತ್ತೇವೆ. ನಮಗೆ ಯಾರಿಗೂ ಯಾವುದೇ ತೊಂದರೆ ಆಗಿಲ್ಲ’ ಎಂದು ದುರುಗಮ್ಮ ಹೇಳಿದರು.

ಆಗಿದ್ದೇನು?: ತುಂಗಭದ್ರಾ ಜಲಾಶಯ ಕೆಲವೇ ಕಿ.ಮೀ ದೂರದಲ್ಲಿದ್ದರೂ ನಗರದ ಕೆಲವು ಭಾಗಗಳಿಗೆ ನೀರು ನೀಡುವುದು ಸಾಧ್ಯವಾಗಿರಲಿಲ್ಲ. ಅದಕ್ಕೆ ತಕ್ಷಣದ ಶಾಶ್ವತ ಪರಿಹಾರ ಕಂಡಿದ್ದು ಜಿಂದಾಲ್‌ ಪೈಪ್‌ಲೈನ್‌ನಲ್ಲಿ. ಶಾಸಕ ಗವಿಯಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ 2 ಕಿ.ಮೀ.ದೂರದಿಂದ ಪೈಪ್‌ ಹಾಕಿಸಿ ನೀರು ತರಿಸಿದ್ದಾರೆ. 

ಡಿಎಂಎಫ್‌ ನಿಧಿಯಲ್ಲಿ ಸಾಮೂಹಿಕ ಶೌಚಾಲಯ ಇಲ್ಲಿ ನಿರ್ಮಾಣವಾಗುತ್ತಿದ್ದು, ಸಮುದಾಯ ಭವನ, ಕಾಂಕ್ರೀಟ್‌ ರಸ್ತೆ, ಶಾಲೆ ನಿರ್ಮಿಸುವ ಯೋಜನೆ ಇದೆ. ನೀರಿಲ್ಲದ ಬರಡಾಗಿದ್ದ ಕಾಲೋನಿಯ ಸಾವಿರಾರು ಮಂದಿ ನೀರ ನೆಮ್ಮದಿ ಕಂಡಿದ್ದಾರೆ.

ಎಚ್‌.ಆರ್‌.ಗವಿಯಪ್ಪ
ಎಚ್‌.ಆರ್‌.ಗವಿಯಪ್ಪ
ಪೈಪ್‌ಲೈನ್‌ ಹಾಕಲು ನಡೆದ ಕಾಮಗಾರಿ  (ಸಂಗ್ರಹ ಚಿತ್ರ)
ಪೈಪ್‌ಲೈನ್‌ ಹಾಕಲು ನಡೆದ ಕಾಮಗಾರಿ  (ಸಂಗ್ರಹ ಚಿತ್ರ)
ಸ್ವಂತ ಹಣವೋ ಸರ್ಕಾರದ್ದೋ ಎಂಬ ಚಿಂತೆ ಮಾಡಿಲ್ಲ ಮೊದಲು ಜನರಿಗೆ ನೀರು ಸಿಗಬೇಕು ಎಂಬುದಷ್ಟೇ ನನ್ನ ಚಿಂತನೆಯಾಗಿದೆ
ಎಚ್‌.ಆರ್‌.ಗವಿಯಪ್ಪ ಶಾಸಕ

ಜಿಂದಾಲ್‌ನ ಸಹಾಯಹಸ್ತ

ಆಲಮಟ್ಟಿ ಜಲಾಶಯದಿಂದ ಜಿಂದಾಲ್‌ ಕಂಪನಿಗೆ 173 ಕಿ.ಮೀ ದೂರದ ಪೈಪ್‌ಲೈನ್‌ ಅಳವಡಿಸಲಾಗಿದ್ದು ತುಂಗಭದ್ರಾ ಜಲಾಶಯದಿಂದಲೂ ಇನ್ನೊಂದು ಪೈಪ್‌ಲೈನ್‌ನಲ್ಲಿ ನೀರು ಪೂರೈಕೆಯಾಗುತ್ತದೆ. ಆಲಮಟ್ಟಿ ಪೈಪ್‌ಲೈನ್‌ನಿಂದ ಹೊಸಪೇಟೆಯ ಕಾರಿಗನೂರಿನ ಗೋಂಧಳಿಪುರ ಇಂಗಳಗಿ ಭಾಗಕ್ಕೆ ನೀರು ಒದಗಿಸುತ್ತಿರುವ ಜಿಂದಾಲ್‌ ತುಂಗಭದ್ರಾ ಜಲಾಶಯದ ಪೈಪ್‌ಲೈನ್‌ನಿಂದ ಕಾರಿಗನೂರು ವಡ್ಡರಹಳ್ಳಿ ಗಾದಿಗನೂರು ಪಿ.ಕೆ.ಹಳ್ಳಿ ಭವನಹಳ್ಳಿ ಸಹಿತ ಬಳ್ಳಾರಿ ರಸ್ತೆಯಲ್ಲಿ ಸಿಗುವ ಸುಮಾರು 10 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT