ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿಯಲ್ಲಿ 33 ಬಾಲ್ಯ ವಿವಾಹ ತಡೆ: ಚವ್ಹಾಣ

ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ
Last Updated 4 ಆಗಸ್ಟ್ 2021, 14:09 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೆ 43 ಬಾಲ್ಯವಿವಾಹಗಳು ನಡೆದಿದ್ದು, ಅದರಲ್ಲಿ 33 ಅನ್ನು ತಡೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ವಾಣ ತಿಳಿಸಿದರು.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹ ಮಾಡಿದವರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಇದುವರೆಗೆ ಒಂದು ಎಫ್.ಐ.ಆರ್ ದಾಖಲಾಗಿದೆ ಎಂದರು.

ಬಾಲ್ಯ ವಿವಾಹ ತಡೆಯುವ ಜವಾಬ್ದಾರಿ ಕೇವಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯದಲ್ಲ. ಶಿಕ್ಷಣ ಇಲಾಖೆ ಹಾಗೂ ಉಳಿದ ಇಲಾಖೆಗಳಿಗೂ ಜವಾಬ್ದಾರಿ ಇದೆ ಎಂದು ಹೇಳಿದರು.

ಒಂದು ಮಗು ನಿರಂತರವಾಗಿ 7 ದಿನಗಳಿಗಿಂತ ಹೆಚ್ಚಿಗೆ ಶಾಲೆಗೆ ಗೈರಾದಲ್ಲಿ ಶಿಕ್ಷಕರು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಹೇಳಿದರು.

ಶಾಲೆಯಲ್ಲಿ ಕಡ್ಡಾಯವಾಗಿ ಬಾಲ್ಯ ವಿವಾಹದ ಕುರಿತು ಅರಿವು ಹಾಗೂ ಜಾಗೃತಿಯನ್ನು ಮೂಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪಾತ್ರ ಮಹತ್ವದಾಗಿದ್ದು, ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಡಿ.ಡಿ.ಪಿ.ಐ ಅವರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಸೂಚಿಸಿದರು.

22 ಪ್ರಕರಣ:ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಏಪ್ರಿಲ್‌ನಿಂದ ಜುಲೈ ಅಂತ್ಯದ ವರೆಗೆ 22 ಪ್ರಕರಣಗಳು ದಾಖಲಾಗಿದೆ ಎಂದು ಕೆ.ಕೆ. ಚವ್ಹಾಣ ತಿಳಿಸಿದರು.

ಕೌಟುಂಬಿಕ ಹಿಂಸೆ:ಕೌಟುಂಬಿಕ ಹಿಂಸೆಗೆ ಸಂಬಂಧಿಸಿದಂತೆ2021-22ನೇ ಸಾಲಿನ ಜುಲೈ ಅಂತ್ಯದವೆರೆಗೆ 168 ಪ್ರಕರಣಗಳು ದಾಖಲಾಗಿವೆ. ಇಂಡಿಯಲ್ಲಿ 31, ಸಿಂದಗಿ 96, ಬಸವನ ಬಾಗೇವಾಡಿ 34, ವಿಜಯಪುರ ಗ್ರಾಮೀಣ 5 ಹಾಗೂ ನಗರ 2 ಪ್ರಕರಣಗಳು ದಾಖಲಾಗಿದ್ದು, ಎದುರಾಳಿಗೆ ನೋಟಿಸ್ ಜಾರಿಮಾಡಲಾಗಿದೆ ಎಂದು ತಿಳಿಸಿದರು.

‘ಭೇಟಿ ಬಚಾವೋ ಭೇಟಿ ಪಢಾವೋ ಯೋಜನೆಯಡಿ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ, ಹೆಣ್ಣು ಮಗುವಿನ ಹುಟ್ಟು ಹಬ್ಬ, ಬೇಬಿ ಶೋ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸನ್ಮಾನ, ಶೇ 100 ರಷ್ಟು ಹೆಣ್ಣು ಮಕ್ಕಳ ಹಾಜರಾತಿ ಇರುವ ಶಾಲೆಗಳಿಗೆ ಪ್ರೋತ್ಸಾಹಧನ, ಕಾರ್ಯಾಗಾರ, ತರಬೇತಿ ನೀಡಲಾಗಿದೆ ಎಂದರು.

ರಾಷ್ಟ್ರೀಯ ಪೋಷಣ್ ಅಭಿಯಾನದ ಪೋಷಣ್‌ ಟ್ರ್ಯಾಕ್‌ ಆ್ಯಪ್‌ ಅನ್ನು 2313 ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್‌ನಲ್ಲಿ ಅಳವಡಿಸಲಾಗಿದೆ. ಈ ಆ್ಯಪ್‌ನಲ್ಲಿ ನೋಂದಣಿ ಕಾರ್ಯ ನಡೆದಿದ್ದು, 2,89,796 ಫಲಾನುಭವಿಗಳಲ್ಲಿ 2,83,837 ಫಲಾನುಭವಿಗಳ ನೋಂದಣಿಯಾಗಿದೆ. ಇನ್ನುಳಿದ 5959 ಫಲಾನುಭವಿಗಳ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪೌಷ್ಠಿಕ ಕೈತೋಟ ನಿರ್ಮಾಣಕ್ಕಾಗಿ ಕಂಪೌಂಡ್‌ ಹೊಂದಿರುವ ಒಟ್ಟು 225 ಗುರುತಿಸಲಾಗಿದ್ದು, ಅವುಗಳಲ್ಲಿ 163 ಅಂಗನವಾಡಿಗಳಲ್ಲಿ ಪೌಷ್ಠಿಕ ಕೈತೋಟಗಳಲ್ಲಿ ಬಗೆಬಗೆಯ ತರಕಾರಿ, ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಇದನ್ನು ಗರ್ಭಿಣಿ ಮತ್ತು ಬಾಣಂತಿಯರ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಒಟ್ಟು 2313 ಅಂಗನವಾಡಿ ಕೇಂದ್ರಗಳ ಪೈಕಿ ನೀರಿನ ಸಂಪರ್ಕವಿಲ್ಲದೆ ಇರುವ 1347 ಗ್ರಾಮೀಣ ಭಾಗದ ಕೇಂದ್ರಗಳನ್ನು ಗುರುತಿಸಿ, ಅವುಗಳಲ್ಲಿ 543 ಕೇಂದ್ರಗಳಿಗೆ ಜಲ ಜೀವನ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ಒದಗಿಸಲಾಗಿದೆ. ಉಳಿದ 804 ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ ಇದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ನಡೆದಿರುವ ಬಗ್ಗೆ ಸ್ಥಳೀಯ ಶಿಕ್ಷಕರಿಗೆ ಮಾಹಿತಿ ಇರುತ್ತದೆ. ಆದರೆ, ಯಾರು ನಿಲ್ಲಿಸಲು ಪ್ರಯತ್ನಿಸುತ್ತಿಲ್ಲ

– ಕೆ.ಕೆ.ಚವ್ವಾಣ,ಉಪನಿರ್ದೇಶಕ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT