ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.34 ಕೋಟಿ ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಕೆ

Last Updated 2 ಜುಲೈ 2012, 5:00 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕಿನ ಪುರದಾಳ ಕೆರೆಗೆ ನೀರು ತುಂಬಲು ರೂ.3.34ಕೋಟಿ ವೆಚ್ಚದ ಕ್ರಿಯಾಯೋಜನೆಯ ಪ್ರಸ್ತಾವವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ತಾಲ್ಲೂಕಿನ ಬೋರಗಿ-ಪುರದಾಳ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರ ನ್ನುದ್ದೇಶಿಸಿ ಅವರು ಮಾತನಾಡಿದರು.

ಪುರದಾಳ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಜೂನ್ 11ರಂದು ಪುರದಾಳ ಶ್ರೀಗಳು ಹಾಗೂ ರಾಂಪುರ ಪಿಎ ಆರೂಢಮಠದ ಶ್ರೀಗಳ ನೇತೃತ್ವದಲ್ಲಿ ರೈತರು ನಡೆಸಿದ ಹೋರಾಟಕ್ಕೆ ತಾವು ಸ್ವಾಗತಿಸುತ್ತೇನೆ. ಇದಕ್ಕೆ ತಕ್ಷಣವೇ ಸ್ಪಂದಿಸಿ ಸರ್ಕಾರಕ್ಕೆ ಪ್ರಸ್ತಾವವನ್ನು ಸಲ್ಲಿಸಿರುವೆ. ಆದರೆ ತಾವೆಂದಿಗೂ ದ್ವೇಷ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರೂ. 50 ಲಕ್ಷ ವೆಚ್ಚದಲ್ಲಿ ಬೋರಗಿ-ಗುಬ್ಬೇವಾಡ ರಸ್ತೆ ಪುರದಾಳ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಕೂಡ ಕೈಗೆತ್ತಿಕೊಳ್ಳಲಾಗುವುದು. ಅಲ್ಲದೇ ಸಿಂದಗಿ ಮತಕ್ಷೇತ್ರದ ಬೊಮ್ಮನಜೋಗಿ ಕೆರೆಗೂ ನೀರು ತುಂಬುವ ಬಗ್ಗೆ ಕ್ರಿಯಾ ಯೋಜನೆ ಶೀಘ್ರದಲ್ಲಿಯೇ ಸಿದ್ಧಗೊಳಿಸಲಾಗುವುದು. ಬೋರಗಿ ಗ್ರಾಮಕ್ಕೆ ಅಗತ್ಯವಾಗಿರುವ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರು ಮಾಡಿಸುವ ಬಗ್ಗೆ ಇದೇ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು.

ಪುರದಾಳ ವಿಶ್ವಾರಾಧ್ಯಮಠದ ಶ್ರೀಗಳು ಮಾತನಾಡಿ, ಬೋರಗಿ-ಪುರದಾಳ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಇದೆ. ಶಾಸಕರು ಈ ಬಗ್ಗೆ ಕಾರ್ಯೋನ್ಮುಖರಾಗಬೇಕು. ಅಲ್ಲದೇ ಇವೆರಡೂ ಗ್ರಾಮಗಳಲ್ಲಿ ಸ್ವಚ್ಛತೆ ಇಲ್ಲ. ಹೀಗಾಗಿ ಸುವರ್ಣ ಗ್ರಾಮ ಯೋಜನೆಯಡಿ ಗ್ರಾಮದ ಸ್ವಚ್ಛತಾ ಕಾರ್ಯ ನಡೆಯಲಿ. ಸುಧಾರಣೆಯಲ್ಲಿ ರಾಜಕೀಯ ಸಲ್ಲದು ಎಂದು ಸಲಹೆ ನೀಡಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಎಸ್.ಮಠ ಹಾಗೂ ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿ, ಕೆರೆ ಅಭಿವೃದ್ಧಿ ಕಾರ್ಯ ಶೀಘ್ರವೇ ನಡೆಯಬೇಕು.  ಮೊದಲಿಗೆ ಹೂಳು ತೆಗೆಸುವ ಕಾರ್ಯ, ಜೊತೆಗೆ ಕೆಲವು ರೈತರು ಕೆರೆ ಜಾಗೆಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಕೇಳಿಕೊಂಡರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜೆ.ಎಂ. ಬಾಗವಾನ ಮಾತನಾಡಿ, ಈ ಕೆರೆಗೆ ನೀರು ತುಂಬುವುದರಿಂದ 235 ಹೆಕ್ಟೇರ್ ಜಮೀನು ನೀರಾವರಿ ವ್ಯಾಪ್ತಿಗೊಳಪಡುತ್ತದೆ. ಬನ್ನೆಟ್ಟಿ ಪಿ.ಎ ಗ್ರಾಮದ ಬಳಿ ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆ 41ಕಿ.ಮೀ. ಯಿಂದ 5.5 ಕಿ.ಮೀ ದೂರದ ಪುರದಾಳ ಕೆರೆಗೆ ಪೈಪ್‌ಲೈನ್ ಮುಖಾಂತರ ನೀರು ತುಂಬುವ ಕಾರ್ಯ ಮಾಡಲಾಗುವುದು ಎಂದರು.

ಎ.ಪಿ.ಎಂ.ಸಿ ಉಪಾಧ್ಯಕ್ಷ ಶರಣು ಧರಿ, ತಾಪಂ ಉಪಾಧ್ಯಕ್ಷ ಸಿದ್ದನಗೌಡ ಹರನಾಳ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಎಂ.ಎನ್. ಕಿರಣರಾಜ್, ಬಿಜೆಪಿ ಧುರೀಣ ಸಿದ್ದು ಬುಳ್ಳಾ, ಜೀತೂ ರಜಪೂತ, ಅಶೋಕ ಬಿಜಾಪೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT