ಬುಧವಾರ, ಜುಲೈ 6, 2022
23 °C

ಪ್ರಜಾವಾಣಿ ವರದಿ ಫಲಶೃತಿ: ಕ್ರೀಡಾಂಗಣ ಪ್ರವೇಶ ಶುಲ್ಕ ಶೇ 50ರಷ್ಟು ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಬಿ.ಆರ್‌.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌, ವಾಲಿಬಾಲ್‌ ಕೋರ್ಟ್‌, ಬಾಸ್ಕೆಟ್‌ ಬಾಲ್‌ ಕೋರ್ಟ್‌ ಹಾಗೂ ಕನಕದಾಸ ಬಡಾವಣೆಯಲ್ಲಿರುವ ಈಜುಗೊಳ ಪ್ರವೇಶಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿಗದಿ ಪಡಿಸಿದ್ದ ‘ದುಬಾರಿ ಶುಲ್ಕ’ವನ್ನು ಕಡಿತಗೊಳಿಸಲಾಗಿದೆ.

‘ಕ್ರೀಡಾಂಗಣ ಪ್ರವೇಶ ದುಬಾರಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಮಂಗಳವಾರ ಪ್ರಕಟವಾದ ವಿಶೇಷ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅವರು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಜಿ.ಲೋಣಿ ಅವರೊಂದಿಗೆ ಚರ್ಚಿಸಿ, ಕ್ರೀಡಾಪಟುಗಳಿಗೆ ಮತ್ತು ವಿವಿಧ ಪರೀಕ್ಷಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿಗದಿತ ಶುಲ್ಕದಲ್ಲಿ ಶೇ 50ರಷ್ಟು ಕಡಿತಗೊಳಿಸುವಂತೆ ಸೂಚಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುನೀಲ್‌ಕುಮಾರ್‌, ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವರದಿಯನ್ನು ಗಮನಿಸಿದೆ. ಸೇನೆ, ಪೊಲೀಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ದೈಹಿಕ ಪರೀಕ್ಷೆಗೆ ಅಭ್ಯಾಸ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಾಗೂ ಕ್ರೀಡಾಪಟುಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈಗಿರುವ ಶುಲ್ಕದಲ್ಲಿ ಶೇ 50ರಷ್ಟು ಕಡಿತ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಜಯಪುರ ಜಿಲ್ಲಾ ಕ್ರೀಡಾಂಗಣ ಪ್ರವೇಶ ಇನ್ನು ದುಬಾರಿ!

ಕೋವಿಡ್‌ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಶುಲ್ಕ ಕಡಿತ ಮಾಡಲಾಗಿದ್ದು, ಇದು ಕೇವಲ ವಿವಿಧ ಪರೀಕ್ಷಾರ್ಥಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಮಾತ್ರ ಅನ್ವಯವಾಗಲಿದೆ. ಸಾರ್ವಜನಿಕರಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾಡಳಿತ ಶುಲ್ಕ ಕಡಿತ ಮಾಡಿರುವುದರಿಂದ ಕ್ರೀಡಾಪಟುಗಳು ಹಾಗೂ ಪರೀಕ್ಷಾರ್ಥಿಗಳು ‘ಪ್ರಜಾವಾಣಿ’ಗೆ ಕರೆ ಮಾಡಿ, ಧನ್ಯವಾದ ಅರ್ಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು