ಮಂಗಳವಾರ, ಅಕ್ಟೋಬರ್ 19, 2021
23 °C
ಸರ್ಕಾರ, ಜನಪ್ರತಿನಿಧಿಗಳ ನಿರಾಸಕ್ತಿಯಿಂದ ವಿಜಯಪುರದಲ್ಲಿ ಬೆಳೆಯದ ಕೈಗಾರಿಕಾ ಕ್ಷೇತ್ರ

ವಿಜಯಪುರ: ಮೂಲ ಸೌಲಭ್ಯ ಹೇರಳ; ಕೈಗಾರಿಕೆಗಳ ಅಭಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಭೂಮಿ, ನೀರು, ವಿದ್ಯುತ್‌, ಸಾರಿಗೆ ಹಾಗೂ ಮಾನವ ಸಂಪನ್ಮೂಲ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳು ಹೇರಳವಾಗಿವೆ. ಆದರೂ ಸಹ ನೆರೆಯ ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಜಿಲ್ಲೆಗಳಿಗೆ ಹೋಲಿಸಿದರೆ ಕೈಗಾರಿಕಾ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿರುವ ರಾಜ್ಯದ ಜಿಲ್ಲೆಗಳ ಸಾಲಿನಲ್ಲಿ ವಿಜಯಪುರ 15ನೇ ಸ್ಥಾನದಲ್ಲಿ ಇದೆ.

ಹೌದು, ಲಿಂಬೆ, ದ್ರಾಕ್ಷಿ, ದಾಳಿಂಬೆ, ತೊಗರಿಯಂತರ ಆಹಾರೋತ್ಪನ್ನಗಳಿಗೆ ಪ್ರಸಿದ್ಧವಾದ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ವಾತಾವರಣ ಇದ್ದರೂ ಕೈಗಾರಿಕೋದ್ಯಮಿಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಗೆ ಬೃಹತ್‌ ಕೈಗಾರಿಕೆಗಳನ್ನು ತರುವಲ್ಲಿ ಸರ್ಕಾರ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆ, ನಿರಾಸಕ್ತಿ ಎದ್ದು ಕಾಣುತ್ತಿದೆ. ಜೊತೆಗೆ ಜಿಲ್ಲೆಯಲ್ಲಿ ಕೌಶಲ ಆಧರಿತ ಮಾನವ ಸಂಪನ್ಮೂಲದ ಕೊರತೆಯೂ ಸಾಕಷ್ಟಿದೆ.

ಒಂದು ದಶಕದ ಈಚೆಗೆ  ರಸ್ತೆ, ನೀರು, ವಿದ್ಯುತ್‌ ಮತ್ತಿತರರ ಮೂಲಸೌಲಭ್ಯಗಳನ್ನು ವಿಜಯಪುರ ಜಿಲ್ಲೆ ಕಾಣತೊಡಗಿದೆ. ದಶಕದ ಹಿಂದೆ ಜಿಲ್ಲೆ ಬಡತನವನ್ನು ಹಾಸು ಹೊದ್ದಿತ್ತು. ಗುಳೇ ಹೋಗುವವರ ನಾಡೆಂದೇ ಹೊರ ಪ್ರಪಂಚಕ್ಕೆ ಬಿಂಬಿತವಾಗಿತ್ತು. ಮೂಲಸೌಲಭ್ಯಗಳು ಮರೀಚಿಕೆಯಾಗಿತ್ತು. ಪರಿಣಾಮ ಈ ಭಾಗಕ್ಕೆ ಬಂಡವಾಳ ಹೂಡಿಕೆದಾರರು ಬರಲು ಆಸಕ್ತಿ ತೋರಲಿಲ್ಲ. ಹೂಡಿಕೆದಾರರನ್ನು ಕರೆತರುವ ಪ್ರಯತ್ನವನ್ನು ಸರ್ಕಾರವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಮಾಡಲಿಲ್ಲ. ಅಲ್ಲದೇ, ಜಿಲ್ಲೆಯಲ್ಲಿ ನೆಲೆ ಕಂಡುಕೊಂಡಿದ್ದ ಜಿನ್ನಿಂಗ್‌, ಕಾಟನ್‌ ಮಿಲ್‌ಗಳು, ಎಣ್ಣೆ ಮಿಲ್‌ಗಳು ಆಧುನಿಕರಣದ ಭರಾಟೆಗೆ ಸಿಲುಕಿ ಬಾಗಿಲು ಮುಚ್ಚಿದವು. ಕೈಗಾರಿಕೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣದ ಕೊರತೆ ಪರಿಣಾಮ ಈ ಕ್ಷೇತ್ರದಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗಿಲ್ಲ ಎನ್ನುತ್ತಾರೆ ವಿಜಯಪುರ ಜಿಲ್ಲಾ ವಾಣಿಜ್ಯ ಹಾಗೂ ಉದ್ಯಮೆದಾರರ ಸಂಘದ ಅಧ್ಯಕ್ಷ ಬಿ.ಎಸ್‌.ಗುಡ್ಡೋಡಗಿ.

ಕೈಗಾರಿಕಾ ವಸಾಹತುಗಳು: ವಿಜಯಪುರ ನಗರದ ಮಹಾಲ್ ಭಾಗಾಯತ್‌, ಆಲಿಯಾಬಾದ್‌ ಬ್ಲಾಕ್‌–1 ಮತ್ತು ಬ್ಲಾಕ್‌–2 ಹಾಗೂ ಹೊಸದಾಗಿ ನಿರ್ಮಾಣವಾಗಿರುವ ಮುಳವಾಡ ಕೈಗಾರಿಕಾ ವಸಾಹತು ಪ್ರಮುಖವಾಗಿವೆ. ಇದರ ಜೊತೆಗೆ ಸಿಂದಗಿಯಲ್ಲಿ ಕೆಎಎಸ್‌ಎಸ್ಐಡಿ ಕೈಗಾರಿಕಾ ವಸಾಹತು ಇದೆ.

ಮಹಾಲ್‌ ಭಾಗಾಯತ್‌, ಆಲಿಯಾದಾದ್‌ ಮತ್ತು ಮುಳವಾಡ ಕೈಗಾರಿಕಾ ವಸಾಹತುವಿನಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ನೀರು, ವಿದ್ಯುತ್‌, ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಆಟೋಮೊಬೈಲ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌, ಕೆಮಿಕಲ್ಸ್, ಅಹಾರ ಸಂಸ್ಕರಣ ಘಟಕಗಳು, ಚರ್ಮ, ಕಾಗದ ಮತ್ತು ಮುದ್ರಣ, ರಬ್ಬರ್‌, ಟೆಕ್ಸ್‌ಟೈಲ್ಸ್‌, ಮರ ಹಾಗೂ ಇತರೆ ಸೇವಾ ಚಟುವಟಿಕೆಗಳು ಹೇರಳ ಸಂಖ್ಯೆಯಲ್ಲಿ ಇವೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ. ಸ್ಟಾಫ್‌ವೇರ್‌ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳಿಗೆ ಜಿಲ್ಲೆಯಲ್ಲಿ ಇನ್ನೂ ಆಶ್ರಯ ಸಿಕ್ಕಿಲ್ಲ.

ಹೇರಳ ವಿದ್ಯುತ್‌ ಉತ್ಪಾದನೆ: ವಿಜಯಪುರ ಜಿಲ್ಲೆಯಲ್ಲಿ 1600 ಮೆಗಾ ವಾಟ್‌ ವಿಂಡ್‌ ಪವರ್‌, 1200 ಮೆಗಾವಾಟ್‌ ಸೌರವಿದ್ಯುತ್‌, 290 ಮೆಗಾವಾಟ್‌ ಜಲ ವಿದ್ಯುತ್‌(ಆಲಮಟ್ಟಿ) ಹಾಗೂ ಕೂಡಗಿ ಎನ್‌ಟಿಪಿಸಿಯಲ್ಲಿ 3200 ಮೆಗಾ ವಾಟ್ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲೇ ಅತೀ ಹೆಚ್ಚು ವಿದ್ಯುತ್‌ ಉತ್ಪಾದನೆಯಾಗುತ್ತಿರುವ ಜಿಲ್ಲೆ ಎಂಬ ಖ್ಯಾತಿ ವಿಜಯಪುರಕ್ಕಿದೆ. 

11 ಸಕ್ಕರೆ ಕಾರ್ಖಾನೆ: ಜಿಲ್ಲೆಯಲ್ಲಿ ಹನ್ನೊಂದು ಸಕ್ಕರೆ ಕಾರ್ಖಾನೆಗಳಿದ್ದು, ಅದರಲ್ಲಿ ಒಂಬತ್ತು ಮಾತ್ರ ಸದ್ಯ ಕಾರ್ಯಾಚರಣೆಯಲ್ಲಿವೆ. ಸುಮಾರು 2775 ಜನರಿಗೆ ಉದ್ಯೋಗ ಕಲ್ಪಿಸಿವೆ. ಅದೇ ರೀತಿ ಜಿಲ್ಲೆಯಲ್ಲಿ ಮಧ್ಯಮ ಪ್ರಮಾಣದ ಮೂರು ಕೈಗಾರಿಕೆಗಳಿವೆ. ಸುಮಾರು 4500 ಕಾರ್ಮಿಕರಿಗೆ ಉದ್ಯೋಗಾವಕಾಶ ಕಲ್ಪಿಸಿವೆ. 16,861 ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಇದ್ದು, 79,212 ಜನರಿಗೆ ಉದ್ಯೋಗ ಕಲ್ಪಿಸಿವೆ ಎನ್ನುತ್ತಾರೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಬಿರಾದಾರ.

ವಿಜಯಪುರದ ಹಡಗಲಿ ಸಮೀಪ ಸೋಮೇಶ್ವರ ಸಕ್ಕರೆ ಕಾರ್ಖಾನೆ ಹಾಗೂ ಸಿಂದಗಿ ತಾಲ್ಲೂಕಿನಲ್ಲಿ ಸಂಗಮನಾಥ ಸಕ್ಕರೆ ಕಾರ್ಖಾನೆ ಒಂದೆರಡು ವರ್ಷದಲ್ಲಿ  ಆರಂಭವಾಗಲಿವೆ ಎನ್ನುತ್ತಾರೆ ಅವರು. 

ಮುದ್ದೇಬಿಹಾಳದಲ್ಲಿ ಈಗಾಗಲೇ ರೂ 182 ಕೋಟಿ ಮೊತ್ತದಲ್ಲಿ ಈಥೇನಾಲ್‌ ಘಟಕವೊಂದು ಆರಂಭದ ಹಂತದಲ್ಲಿದೆ. ಅಲ್ಲದೇ, ಮತ್ತೊಂದು ಈಥೇನಾಲ್‌ ಘಟಕ ಆರಂಭ ಪ್ರಕ್ರಿಯೆ ಹಂತದಲ್ಲಿದೆ ಎನ್ನುತ್ತಾರೆ ಅವರು.

ವಿಜಯಪುರ ನಗರದಲ್ಲಿ ಇದೀಗ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವು ಭವಿಷದ್ಯದಲ್ಲಿ ಜಿಲ್ಲೆಗೆ ಕೈಗಾರಿಕೋದ್ಯಮಿಗಳು, ಬಂಡವಾಳ ಶಾಹಿಗಳು, ಹೂಡಿಕೆದಾರರನ್ನು ಸೆಳೆಯುವ ಆಶಾಭಾವ ಮೂಡಿದೆ.

ವಿಜಯಪುರಕ್ಕೆ ಬೇಕಿದೆ ಮಿನಿ ಐಟಿ ಪಾರ್ಕ್‌
ವಿಜಯಪುರ ಜಿಲ್ಲೆಯ ಸುಮಾರು 10 ಸಾವಿರಕ್ಕೂ ಅಧಿಕ ಜನ ಬೆಂಗಳೂರು, ಹೈದರಾಬಾದ್‌, ಪುಣಿ ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ಐಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ವಿಜಯಪುರ ಜಿಲ್ಲೆಯಲ್ಲಿ ಸಾಫ್ಟ್‌ವೇರ್‌ ಕ್ಷೇತ್ರ ಇನ್ನೂ ನೆಲೆ ಕಂಡಿಲ್ಲ. ಹೀಗಾಗಿ ಜಿಲ್ಲೆಯ ಪ್ರತಿಭಾವಂತರು ದೂರದ ನಗರ, ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ, ವಿಜಯಪುರದಲ್ಲಿ ಆರಂಭಿಕ ಹಂತವಾಗಿ ಮಿನಿ ಐಟಿ ಪಾರ್ಕ್‌ ಆರಂಭಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎನ್ನುತ್ತಾರೆ ವಿಜಯಪುರ ನಗರದ ಶ್ರೀ ಕಂಪ್ಯೂಟರ್ಸ್‌ ಮಾಲೀಕ ಅಜಿತ್ ಕುಲಕರ್ಣಿ.

ವಿಜಯಪುರದಲ್ಲಿ ಐಟಿ ಪಾರ್ಕ್‌ ಆರಂಭ ಸಂಬಂಧ ಈ ಹಿಂದಿನ ಸರ್ಕಾರಗಳಲ್ಲಿ ಐಟಿ–ಬಿಟಿ ಸಚಿವರಾಗಿದ್ದ ಎಸ್‌.ಆರ್‌.ಪಾಟೀಲ, ಪ್ರಿಯಾಂಕ್‌ ಖರ್ಗೆ ಹಾಗೂ ಶಾಸಕ ಯತ್ನಾಳ ಅವರಿಗೂ ಮನವಿ ಸಲ್ಲಿಸಲಾಗಿದೆ. ಐಟಿ ಪಾರ್ಕ್‌ ಆದರೆ, ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ.

ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಹೇರಳವಾಗಿದೆ. ಪ್ರತಿ ವರ್ಷ ನಾಲ್ಕೈದು ಸಾವಿರ ವಿವಿಧ ಪದವೀಧರರು ಹೊರಬರುತ್ತಿದ್ದಾರೆ. ಆದರೆ, ಅವರಿಗೆ ಮಾರುಕಟ್ಟೆ ಕೌಶಲದ ಕೊರತೆ ಎದ್ದು ಕಾಣುತ್ತಿದೆ. ಸರಿಯಾದ ಸಂಹವನ ಕಲೆ ಇಲ್ಲ. ಇದನ್ನು ನೀಗಿಸಲು ಆದ್ಯತೆ ನೀಡಬೇಕಾಗಿದೆ ಎನ್ನುತ್ತಾರೆ ಅವರು.

ರೋಗಗ್ರಸ್ತ ಸಿಂದಗಿ ಕೈಗಾರಿಕೆ ವಸಾಹತು
ಸಿಂದಗಿ: 2004-05 ರಲ್ಲಿ ಸ್ಥಾಪನೆಗೊಂಡ ಕೈಗಾರಿಕೆ ವಸಾಹತು ಮೊದಲು ಹಂತದಲ್ಲಿ 100 ನಿವೇಶನಗಳನ್ನು ಸಣ್ಣ ಕೈಗಾರಿಕೆ ಉದ್ದಿಮೆದಾರರಿಗೆ ಹಂಚಿಕೆ ಮಾಡಲಾಗಿದೆ ಎಂಬುದನ್ನು ಹೊರತುಪಡಿಸಿದರೆ ಯಾವುದೇ ಸೌಕರ್ಯಗಳಿಲ್ಲ.

ವಸಾಹತು ಪ್ರದೇಶದಲ್ಲಿ 20-30 ಉದ್ದಿಮೆದಾರರು ಉತ್ತಮ ರೀತಿಯಲ್ಲಿ ಕೈಗಾರಿಕೆ ಪ್ರಾರಂಭಿಸಿದ್ದಾರೆ. ಆದರೆ, ಅಗತ್ಯವಾಗಿರುವ ರಸ್ತೆ ಇಲ್ಲ. ವಿದ್ಯುತ್ ಕಂಬಗಳಿವೆ, ದೀಪ ಉರಿಯುತ್ತಿಲ್ಲ. ಕುಡಿಯವ ನೀರಿನ ಪೈಪ್ ಲೈನ್ ಮಾಡಲಾಗಿದ್ದರೂ ಮೇಲ್ಮಟ್ಟದ ಜಲ ಸಂಗ್ರಹಗಾರಕ್ಕೆ ನೀರು ಬಿದ್ದಿಲ್ಲ.

ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಇದ್ದರೂ ನೇರ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ವಿದ್ಯುತ್ ಕಣ್ಮುಚ್ಚಾಲೆ ಆಟದಿಂದ ಕಾರ್ಮಿಕರು ಕೆಲಸವಿಲ್ಲದೇ ಕೂಡ್ರುವ ಪರಿಸ್ಥಿತಿ ಇದೆ. ಹೀಗಾಗಿ ವಸಾಹತುಗೆ ನೇರ ವಿದ್ಯುತ್ ಸಂಪರ್ಕ ತುರ್ತಾಗಿ ಆಗಬೇಕು. ವಸಾಹತುದಿಂದ 300 ಮೀಟರ್ ಅಂತರದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಇದ್ದರೂ ರಸ್ತೆ ಸಂಪರ್ಕ ಇಲ್ಲದೇ ತುಂಬಾ ತೊಂದರೆ ಉಂಟಾಗಿದೆ. ತಾತ್ಪೂರ್ತಿಕವಾಗಿ ಕಚ್ಚಾ ರಸ್ತೆಯನ್ನು ಉದ್ದಿಮೆದಾರರೇ ಹಣ ಸಂಗ್ರಹಿಸಿ ಮಾಡಿಕೊಂಡಿದ್ದೇವೆ. ಶಾಶ್ವತ ರಸ್ತೆ ನಿರ್ಮಾಣಗೊಂಡರೆ ಕೈಗಾರಿಕೆಯ ಬೆಳವಣಿಗೆಗೆ ಪೂರಕವಾಗುತ್ತದೆ ಎಂಬುದು ಉದ್ದಿಮೆದಾರರಾದ ಮಹಿಬೂಬ ಹಸರಗುಂಡಗಿ, ದುಂಡಪ್ಪ ಪರಸಪ್ಪಗೋಳ, ಮರ್ತೂಜ ಬಳಗಾನೂರ, ಯುನೂಷ್ ಶಹಾಪೂರ, ಬಸವರಾಜ ಅಂಬಲಗಿ, ವಾಲೀಕಾರ, ಚಂದ್ರಾಮ ಕಾಟಮಗಿರಿ, ಮಹಾದೇವ ಅಂಬಲಗಿ, ಸದಾನಂದ ಕತ್ತಿ ಅವರ ಒತ್ತಾಯವಾಗಿದೆ.

ಕೈಗಾರಿಕೆ ಆರಂಭಕ್ಕೆ ಸ್ಥಳವೇ ಇಲ್ಲ!
ಇಂಡಿ:
ತಾಲ್ಲೂಕಿನಲ್ಲಿ ಕೈಗಾರಿಕೋದ್ಯಮಿ ಬೆಳವಣಿಗೆಗೆ ಪ್ರತ್ಯೇಕ ಸ್ಥಳವೇ ಇಲ್ಲ. ಪ್ರಸಕ್ತ ವರ್ಷ ಶಾಸಕ ಯಶವಂತರಾಯಗೌಡ ಪಾಟೀಲ ಮತ್ತು ಕೈಗಾರಿಕೋದ್ಯಮಿಗೆ ಸಂಬಂಧಪಟ್ಟ ಅಧಿಕಾರಿಗಳ ತಂಡ ಇಂಡಿ ಪಟ್ಟಣದ ರೇಲ್ವೆ ನಿಲ್ದಾಣದ ಬಳಿ ಕೈಗಾರಿಕೋದ್ಯ ಬೆಳವಣಿಗೆಗೆ ಸ್ಥಳ ವೀಕ್ಷಣೆ ಮಾಡಿದ್ದಾರೆ. ಸುಮಾರು 15 ರಿಂದ 20 ಎಕರೆ ಜಮೀನು ಕೈಗಾರಿಗೆ ಮೀಸಲಿಟ್ಟು, ಅದನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಮೂಲ ಸೌಕರ್ಯಗಳೊಂದಿಗೆ ಕೈಗಾರಿಕಾಗಿ ಪ್ರತ್ಯೇಕ ಸ್ಥಳವಿದ್ದಿದ್ದರೆ ಈಗಾಗಲೇ ಅದೆಷ್ಟೋ ಚಾದರ್ ಮತ್ತು ಟವೆಲ್ ಫ್ಯಾಕ್ಟರಿಗಳು ತಲೆ ಎತ್ತುತ್ತಿದ್ದವು. ಇದಕ್ಕೆ ಕಾರಣ ಭೀಮಾ ನದಿಯ ನೀರು ಚಾದರ್ ಮತ್ತು ಟವೆಲ್ ಉದ್ದಿಮೆಗೆ ಪೂರವಾಗಿವೆ ಎಂದು ಹೇಳುತ್ತಾರೆ. ಇದೇ ಕಾರಣಕ್ಕೆ ಇಲ್ಲಿಗೆ ಸಮೀಪದ ಮಹಾರಾಷ್ಟ್ರದ ಸೋಲಾಪೂರ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚಾದರ್ ಮತ್ತು ಟವೆಲ್ ಫ್ಯಾಕ್ಟರಿಗಳಿವೆ ಎಂದು ಹೇಳುತ್ತಾರೆ.

ಸೋಲಾಪೂರ ನಗರದಲ್ಲಿ ಸಿದ್ದಗೊಳ್ಳುತ್ತಿರುವ ಚಾದರ್ ದೇಶದೆಲ್ಲೆಡೆ ಸರಬರಾಜಾಗುತ್ತಿವೆ ಮತ್ತು ಅವುಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ. ಕಾರಣ ಇಂಡಿ ತಾಲ್ಲೂಕಿನಲ್ಲಿ ಕೈಗಾರಿಕೆಗಳಿಗೆ ಸ್ಥಳ ಮೀಸಲಿಟ್ಟು ಅದನ್ನು ಅಭಿವೃದ್ಧಿಪಡಿಸಿದರೆ ಬಹು ಬೇಗನೆ ಅದು ಅಭಿವೃದ್ಧಿ ಹೋಂದುವದರಲ್ಲಿ ಯಾವುದೇ ಸಂಶಯವಿಲ್ಲ.

****

ವಿಜಯಪುರದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅಗತ್ಯವಿರುವ ಭೂಮಿ, ನೀರು, ವಿದ್ಯುತ್‌, ಸಾಲ ಸೇರಿದಂತೆ ಅಗತ್ಯ ಮೂಲ ಸೌಲಭ್ಯ, ಪ್ರೋತ್ಸಾಹ ಹಾಗೂ ರಿಯಾಯಿತಿ ಒದಗಿಸಲು ಸರ್ಕಾರ ಸಿದ್ಧವಿದೆ. ಬಂಡವಾಳ ಹೂಡಿಕೆದಾರರು, ಉದ್ಯಮಿಗಳು ಮುಂದೆ ಬರಬೇಕು
–ಬಸವರಾಜ ಬಿರಾದಾರ,
ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

****

ವಿಜಯಪುರ ಜಿಲ್ಲೆಯ ಯಾವ ತಾಲ್ಲೂಕುಗಳಲ್ಲಿ ಇಲ್ಲದ ಕೈಗಾರಿಕೆ ವಸಾಹತು 28 ಎಕರೆ 27 ಗುಂಟೆ ಪ್ರದೇಶ ವಿಸ್ತಾರದಲ್ಲಿ ಸಿಂದಗಿಯಲ್ಲಿದ್ದರೂ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ಇತ್ತ ಗಮನ ಹರಿಸಬೇಕು.
–ತಮ್ಮಣ್ಣ ಈಳಗೇರ
ಸಣ್ಣ ಕೈಗಾರಿಕೆ ಉದ್ದಿಮೆದಾರರ ಸಂಘದ ಸಂಸ್ಥಾಪಕ ಅಧ್ಯಕ್ಷ, ಸಿಂದಗಿ

****

ಜಿಲ್ಲೆಯ ಜನರಲ್ಲಿ, ಜನಪ್ರತಿನಿಧಿಗಳಲ್ಲಿ ಒಗ್ಗಟ್ಟಿಲ್ಲದಿರುವುದು, ಸರ್ಕಾರದ ಪ್ರೋತ್ಸಾಹ ಲಭಿಸದಿರುವುದು ಹಾಗೂ ಮೂಲಸೌಲಭ್ಯಗಳ ಕೊರತೆಯಿಂದ ಉದ್ಯಮಗಳು ನಿರೀಕ್ಷಿತ ಸಂಖ್ಯೆಯಲ್ಲಿ ಆರಂಭವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಆದ್ಯತೆ ನೀಡಿರುವುದು ಆಶಾಭಾವ ಮೂಡಿಸಿದೆ.
–ಬಿ.ಎಸ್‌.ಗುಡ್ಡೋಡಗಿ, ಅಧ್ಯಕ್ಷ
ವಿಜಯಪುರ ಜಿಲ್ಲಾ ವಾಣಿಜ್ಯ ಹಾಗೂ ಉದ್ಯಮೆದಾರರ ಸಂಘ

****

ವಿಜಯಪುರದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರದಿಂದ ಪ್ರೋತ್ಸಾಹ ಲಭಿಸುತ್ತಿಲ್ಲ. ಜಿಲ್ಲೆಯಲ್ಲಿ ಕೈಗಾರಿಕೆಗಳು ಆರಂಭವಾಗಬೇಕಾದರೆ ಸರ್ಕಾರ ಕಾರ್ಯಯೋಜನೆಯನ್ನು ರೂಪಿಸಬೇಕು. ಬಂಡವಾಳ ಹೂಡಿಕೆದಾರರಿಗೆ ಅಗತ್ಯ ಭೂಮಿ, ನೀರು, ತೆರಿಗೆ ವಿನಾಯಿತಿ ಕಲ್ಪಿಸಬೇಕು.
–ಅಜಿತ್‌ ಕುಲಕರ್ಣಿ, ಸಂಸ್ಥಾಪಕ ಶ್ರೀ ಕಂಪ್ಯೂಟರ್ಸ್‌, ವಿಜಯಪುರ

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಎ.ಸಿ.ಪಾಟೀಲ, ಶಾಂತೂ ಹಿರೇಮಠ, ಬಸವರಾಜ್‌ ಎಸ್‌. ಉಳ್ಳಾಗಡ್ಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು