ಗುರುವಾರ , ಮೇ 26, 2022
23 °C

ಕುಡಿವ ನೀರಿಗೆ ತೊಂದರೆಯಾಗದಂತೆ ಕ್ರಮ: ಡಾ.ವಿಜಯ ಮಹಾಂತೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕಾಲುವೆಗಳಿಗೆ ನೀರು ಹರಿಸುವ ಮೂಲಕ ಜನ-ಜಾನುವಾರುಗಳಿಗೆ ಕುಡಿವ ನೀರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಅತೀ ಹೆಚ್ಚು ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ನೀರು ಪೂರೈಕೆಗೆ ಅನುಕೂಲವಾಗುವಂತೆ ಕಾಲುವೆಗಳಿಗೆ ನೀರು ಹರಿಸುವುದರ ಬಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

35 ಗ್ರಾಮಗಳಲ್ಲಿ ಸಮಸ್ಯೆ:

ಇಂಡಿ ತಾಲ್ಲೂಕಿನಲ್ಲಿ ಸುಮಾರು 35 ಗ್ರಾಮಗಳು  ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಅಂತಹ ಗ್ರಾಮಗಳಿಗೆ ಕುಡಿವ ನೀರು ಪೂರೈಸುಲು ಆ ಭಾಗದ ಕಾಲವೆಗಳ ಮೂಲಕ ನೀರು ಹರಿಸುವುದು ಅತೀ ಅಗತ್ಯವಿದೆ ಎಂದು  ಉಪ‍ ವಿಭಾಗಾಧಿಕಾರಿ ರಾಮಚಂದ್ರ ಗಡದೆ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಿ 3.88 ಟಿ.ಎಂ.ಸಿ ಅಡಿ ನೀರಿನ ಸಂಗ್ರಹಣೆ ಕಾಯ್ದಿರಿಸಬೇಕು. ಈ ಮೂಲಕ ಒಟ್ಟು 4.62 ಟಿಎಂಸಿ ಅಡಿ ನೀರನ್ನು ನಾರಾಯಣಪುರ ಜಲಾಶಯದಿಂದ ಸಿಂದಗಿ ಮತ್ತು ಇಂಡಿ ತಾಲ್ಲೂಕಿನ ಉಪ ಕಾಲುವೆಗಳಿಗೆ ಹರಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಮೀಸಲಿಡಬೇಕು ಎಂದರು.

ದೂರುಗಳು ಬಂದರೆ ಕ್ರಮ: ಕಳೆದ ವರ್ಷಕ್ಕೆ ಹೋಲಿಸಿದರೆ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಲ್ಲಿ ನೀರಿನ ಲಭ್ಯತೆ ಇದ್ದು, ಕುಡಿಯುವ ನೀರು ಪೂರೈಕೆಗೆ ಸಮಸ್ಯೆಯಾಗುವುದಿಲ್ಲ ಎಂದರು.

ನೀರಿನ ತೊಂದರೆಯಾಗಿದೆ ಎಂಬ ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾಲುವೆಗಳಲ್ಲಿ ಅನವಶ್ಯಕವಾಗಿ ನೀರು ಪೋಲಾಗಬಾರದು. ನೀರನ್ನು ಮನಸಿಗೆ ಬಂದಂತೆ ದುರುಪಯೋಗಪಡಿಸಿಕೊಳ್ಳುವುದು ಕೆಲವು ಕಡೆಗಳಲ್ಲಿ ವರದಿಯಾಗಿದ್ದು, ಇದು ತಪ್ಪಬೇಕು. ಬೇಸಿಗೆಯ ಅವಧಿಯಾಗಿರುವುದರಿಂದ ನೀರಿನ ಅವಶ್ಯಕತೆ ತುಂಬಾ ಇದ್ದು, ಇದನ್ನರಿತು ಸಾರ್ವಜನಿಕರು ಸಹಕರಿಸಬೇಕು ಎಂದರು.

ಕೆರೆ ತುಂಬಿಸಲು ಸೂಚನೆ: ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಲುವಾಗಿ ಯಂಕಂಚಿ ಕೆರೆ, ಬಳಗಾನೂರ ಕೆರೆ, ಸಂಗೋಗಿ ಕೆರೆ ಹಾಗೂ ಲೋಣಿ ಕೆರೆ ತುಂಬಿಸಲು ಜಿಲ್ಲಾಧಿಕಾರಿ ಸೂಚಿಸಿದರು.

ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮೇ ಅಂತ್ಯದವರೆಗೆ ಜವಾಬ್ದಾರಿಯುತವಾಗಿ ನಡೆಸಬೇಕು, ನೀರು ಪೋಲಾಗದಂತೆ ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವಿಡಿಯೋ ಸಂವಾದದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಇಂಡಿ ಡಿಎಸ್‌ಪಿ ನಂದರೆಡ್ಡಿ, ತಹಶೀಲ್ದಾರರಾದ ಸಿ.ಎಸ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಇಓ ಸುನೀಲ್ ಮದ್ದೀನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರುದ್ರವಾಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.