ಶುಕ್ರವಾರ, ನವೆಂಬರ್ 27, 2020
19 °C
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ

ಸಂಪೂರ್ಣ ಅತಿವೃಷ್ಟಿ ಪೀಡಿತ ಜಿಲ್ಲೆಯಾಗಿ ವಿಜಯಪುರ ಘೋಷಣೆಗೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭೀಮಾ, ಡೋಣಿ ಮತ್ತು ಕೃಷ್ಣಾ ನದಿ ಪ್ರವಾಹ ಹಾಗೂ ಮಳೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ವಿಜಯಪುರವನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು  ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಆಲಮಟ್ಟಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ 10 ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲ್ಲೂಕುಗಳನ್ನಾಗಿ ಈಗಾಗಲೇ ಘೋಷಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ ನೀರು ನುಗ್ಗಿ ಹಾನಿಯಾಗಿರುವ 525 ಮನೆಗಳಿಗೆ ಈಗಾಗಲೇ ₹10 ಸಾವಿರ ಪರಿಹಾರಧನ ನೀಡಲಾದ್ದು, ಇನ್ನುಳಿದ 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಶೀಘ್ರ ಪರಿಹಾರ ವಿತರಿಸಲಾಗುವುದು ಎಂದರು. 

ಪ್ರವಾಹದಿಂದ ಪೂರ್ಣ ಪ್ರಮಾಣದಲ್ಲಿ ಹಾಳದ ಮನೆಗಳಿಗೆ ₹ 5 ಲಕ್ಷ, ಭಾಗಶಃ ಹಾಳಾದ ಮನೆಗಳಿಗೆ ₹ 3 ಲಕ್ಷ ಹಾಗೂ  ಅಲ್ಪಸ್ವಲ್ಪ ಹಾಳಾದ ಮನೆಗಳಿಗೆ ₹ 50 ಸಾವಿರ ಪರಿಹಾರ ಧನವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಈಗಾಗಲೇ ಡ್ರೋನ್ ಮೂಲಕ ಸರ್ವೆ ಕಾರ್ಯ ಪ್ರಾರಂಭ ಮಾಡಲಾಗಿದ್ದು, ನೀರಿನ ಪ್ರಮಾಣ ಕಡಿಮೆಯಾದ ತಕ್ಷಣದಿಂದ ಜಿಲ್ಲಾಡಳಿತ ವ್ಯವಸ್ಥಿತವಾಗಿ ಸರ್ವೆ ಮಾಡಿ ಹಾನಿಯಾಗಿರುವ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರ ಪೌಷ್ಠಿಕಾಂಶಯುಕ್ತ ಊಟ, ಆರೋಗ್ಯ ಚಿಕಿತ್ಸಾ ಮತ್ತು ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಾಣಂತಿಯರು ಮತ್ತು ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ಮತ್ತು ಚಿಕಿತ್ಸೆ ಒದಗಿಸಲು ಈಗಾಗಲೇ ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಭೀಮಾ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಪ್ರಯತ್ನಿಸಲಾಗುವುದು ಹಾಗೂ ಭೀಮಾ ನದಿಯ ಪ್ರವಾಹಕ್ಕೆ ಕಾರಣವಾದ ಸೊನ್ನಾ ಬ್ಯಾರೇಜ್‌ನಿಂದ ಎಷ್ಟು ಪ್ರಮಾಣದಲ್ಲಿ ನೀರನ್ನು ಹರಿಬಿಡಲಾಗಿತ್ತು ಎಂಬುದರ ಸತ್ಯಾಸತ್ಯತೆ ತಿಳಿಯಲು ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ 28 ಗ್ರಾಮಗಳು ಜಲಾವೃತವಾಗಿದ್ದು, ಅವರಲ್ಲಿ 12,217 ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ. 1516 ಜನರನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 42 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ನೀರಿನ ಪ್ರಮಾಣ ಕಡಿಮೆಯಾದ ಕಾರಣದಿಂದಾಗಿ ಸದ್ಯ 18 ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರನ್ನು ಇರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಾಥಮಿಕ ವರದಿ ಪ್ರಕಾರ ಪ್ರವಾಹದಿಂದ ಒಟ್ಟು 2 ಲಕ್ಷ ಹೆಕ್ಟೇರ್‌ಗಿಂತ ಅಧಿಕ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, 16 ಜಾನುವಾರುಗಳ ಜೀವಹಾನಿಯಾಗಿದೆ. 2 ಜನ ಸಾವನಪ್ಪಿದ್ದು, ಅವರ ಕುಟುಂಬಕ್ಕೆ ಪರಿಹಾರ ಧನ ವಿತರಿಸಲಾಗುದು ಎಂದು ಹೇಳಿದರು.

ಹಾನಿಗೊಳಗಾದ ರಸ್ತೆ, ಚರಂಡಿ ಹಾಗೂ ವಿದ್ಯುತ್ ಕಂಬಗಳನ್ನು ನೀರು ಕಡಿಮೆ ಆದ ತಕ್ಷಣ ಪ್ರಾರಂಭಿಲಾಗುವುದು ಎಂದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಗೋವಿಂದ ರೆಡ್ಡಿ, ಮುಖಂಡರಾದ ಎಸ್‌.ಕೆ.ಬೆಳ್ಳುಬ್ಬಿ, ಎಸ್‌.ಆರ್‌.ಪಾಟೀಲ ಕೂಚಬಾಳ ಇದ್ದರು.

ಸಿ.ಎಂ.ವೈಮಾನಿಕ ಸಮೀಕ್ಷೆ ರದ್ದು

ವಿಜಯಪುರ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಪೀಡಿತ ಪ್ರದೇಶಗಳ ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆಯನ್ನು ಹವಾಮಾನ ವೈಪರೀತ್ಯದಿಂದ ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯಿತು.

ಜಿಲ್ಲೆಯಲ್ಲಿ ಮೋಡಮುಸುಕಿದ ಹಾಗೂ ಮಳೆಯ ಕಾರಣದಿಂದಾಗಿ ಜಿಲ್ಲೆಯಲ್ಲಿನ ವೈಮಾನಿಕ ಸಮೀಕ್ಷೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿನ ಸಭೆ ರದ್ದುಗೊಳಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಸಿಎಂ ಸಭೆ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಪ್ರವಾಹ ಸಂತ್ರಸ್ತರಿಗೆ ಮುಖ್ಯಮಂತ್ರಿ ಆಸರೆಯಾಗುತ್ತಾರೆ ಎಂಬ ನಂಬಿಕೆ ಹುಸಿಯಾಯಿತು. ಸಭೆಗೆ ಬಂದಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು ಕಾದು, ಕಾದು ಸುಸ್ತಾಗಿ ಮನೆಗೆ ತೆರಳಿದರು.

₹ 125 ಕೋಟಿ ಕೊಡಲು ಸಿಎಂ ಒಲವು

ರಾಜ್ಯ ಸರ್ಕಾರ ಹಿಂಪಡೆದಿರುವ ವಿಜಯಪುರ ನಗರದ ಅಭಿವೃದ್ಧಿಗೆ ನೀಡಲಾಗಿದ್ದ ₹ 125 ಕೋಟಿಯನ್ನು ಮರಳಿ ನೀಡಲು ಮುಖ್ಯಮಂತ್ರಿ ಒಲವು ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

‘ಅನುದಾನ ನೀಡುವಂತೆ ನಾನೂ ಸಹ ಮುಖ್ಯಮಂತ್ರಿ ಅವರ ಬಳಿ ಮಾತನಾಡಿದ್ದೇನೆ. ನಗರದ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಇದರಿಂದ ನೆರವಾಗಲಿದೆ’ ಎಂದರು.

ಸಿ.ಎಂ.ವಿರುದ್ಧ ಯತ್ನಾಳ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಪ್ರವಾಹ, ಕೋವಿಡ್‌ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳು ಸಮರ್ಥವಾಗಿ ನಿಭಾಯಿಸಿದ್ದಾರೆ. ಹೀಗಿರುವಾಗ ಯಾಕೆ ಅವರನ್ನು ಬದಲಾವಣೆ ಮಾಡಬೇಕು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು