ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಜುಲೈವರೆಗೂ ಕುಡಿಯುವ ನೀರಿನ ಸಮಸ್ಯೆಗೆ ತೊಂದರೆಯಾಗದಂತೆ ಕ್ರಮ

ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ
Published 8 ಜುಲೈ 2023, 15:38 IST
Last Updated 8 ಜುಲೈ 2023, 15:38 IST
ಅಕ್ಷರ ಗಾತ್ರ

ಆಲಮಟ್ಟಿ: ಬೆಳಗಾವಿ ಭಾಗದಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿ ವ್ಯಾಪ್ತಿಯಲ್ಲಿನ ಜಲಾಶಯದಲ್ಲಿ ನೀರಿನ ಸಂಗ್ರಹ ಹಾಗೂ ನದಿಗೆ ಒಳಹರಿವು ಕಡಿಮೆಯಿದೆ. ಹೀಗಾಗಿ 2024 ಜುಲೈವರೆಗೂ ಬೆಳಗಾವಿ ವಿಭಾಗದ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಲಾಶಯದಲ್ಲಿ ನೀರಿನ ಸಂಗ್ರಹಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ ಹೇಳಿದರು.

ಆಲಮಟ್ಟಿಯ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಸಭಾಂಗಣದಲ್ಲಿ ಆಲಮಟ್ಟಿ ಜಲಾಶಯ, ಘಟಪ್ರಭಾ ಜಲಾಶಯ, ಮಲಪ್ರಭಾ ಜಲಾಶಯ ಸಮಿತಿಗಳ ಅಧ್ಯಕ್ಷತೆ ವಹಿಸಿ, ಬೆಳಗಾವಿ ವಿಭಾಗ ವ್ಯಾಪ್ತಿಯ ಜಿಲ್ಲಾಡಳಿತ, ಪೊಲೀಸ್ ಆಡಳಿತ, ನೀರಾವರಿ, ಹೆಸ್ಕಾಂ, ಕೃಷಿ, ಆಯಾ ಕಾಡಾ, ನೀರು ಬಳಕೆದಾರರ ಸಂಘ ಹಾಗೂ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಕಳೆದ ಒಂದು ವಾರದಿಂದ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕದ ಕೃಷ್ಣೆಗೆ ನೀರು ಬಂದು ಸೇರುತ್ತಿದೆ. ಶನಿವಾರ ರಾಜಾಪುರ ಬ್ಯಾರೇಜ್‌ನಿಂದ 9 ಸಾವಿರ, ದೂಧಗಂಗಾ ನದಿಯ ಮೂಲಕ 4 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಒಂದು ವಾರದಿಂದ ಬರುತ್ತಿರುವ ನೀರು ಶನಿವಾರ ಗಲಗಲಿ ಬ್ಯಾರೇಜ್‌ಗೆ ಬಂದು ತಲುಪಿದೆ. ಭಾನುವಾರ ಕೊಲ್ಹಾರಕ್ಕೆ ತಲುಪುವ ನಿರೀಕ್ಷೆಯಿದೆ. ಆಲಮಟ್ಟಿ ಜಲಾಶಯದಿಂದ ಹಿನ್ನೀರಿನಿಂದ ಹಿಡಿದು ಬೆಳಗಾವಿ ಜಿಲ್ಲೆಯವರೆಗೂ ಕೃಷ್ಣಾ ನದಿ ಬಳಿ ಇರುವ ಬಹುಹಳ್ಳಿ ಕುಡಿಯುವ ನೀರಿನ ಜಾಕವೆಲ್‌ಗಳಿಗೆ ನೀರಿನ ತೊಂದರೆ ತಾತ್ಕಾಲಿಕವಾಗಿ ನಿವಾರಣೆಯಾಗಿದೆ’ ಎಂದರು.

ಸದ್ಯ ಹಿಡಕಲ್ ಜಲಾಶಯದಲ್ಲಿ 2.2 ಟಿಎಂಸಿ ಅಡಿ, ನವಿಲುತೀರ್ಥ ಜಲಾಶಯದಲ್ಲಿ 3.47 ಟಿಎಂಸಿ ಅಡಿ, ಹಿಪ್ಪರಗಿ ಜಲಾಶಯದಲ್ಲಿ 1.82 ಟಿಎಂಸಿ ಅಡಿ, ಆಲಮಟ್ಟಿಯಲ್ಲಿ 1.48 ಟಿಎಂಸಿ ಅಡಿ ಬಳಕೆಯೋಗ್ಯ ನೀರಿನ ಸಂಗ್ರಹವಿದೆ. ಈ ನೀರನ್ನು ಕುಡಿಯುವ ನೀರನ್ನು ಹೊರತುಪಡಿಸಿ ಇನ್ನಿತರ ಬಳಕೆಗೆ ನಿಷೇಧಿಸಲಾಗಿದೆ ಎಂದರು.

ಇದರಲ್ಲಿ ಕೇವಲ ಘಟಪ್ರಭಾ ನದಿಗೆ ಮಾತ್ರ 1,200 ಕ್ಯುಸೆಕ್ ಒಳಹರಿವು ಇದೆ. ಮಲಪ್ರಭಾ ನದಿಗೆ ಇನ್ನೂ ಒಳಹರಿವು ಆರಂಭಗೊಂಡಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ 50ಕ್ಕೂ ಕಡಿಮೆ ಮಳೆಯಾಗಿದೆ. ಒಳಹರಿವು ಹೆಚ್ಚಾದರೆ 2024ರ ಜುಲೈವರೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮೊದಲೇ ಮುನ್ನೆಚ್ಚರಿಕೆ ಇಟ್ಟುಕೊಂಡು ಉಳಿದ ನೀರನ್ನು ಕೃಷಿ ಸೇರಿದಂತೆ ಅನ್ಯಕಾರ್ಯಕ್ಕೆ ಬಳಕೆಗೆ ಅನುಮತಿ ನೀಡಲಾಗುವುದು. 2024 ಜುಲೈರವರೆಗೆ ಕುಡಿಯುವ ನೀರು ಬೇಕಾಗುವಂತೆ ಶಿಸ್ತಿನಿಂದ ನೀರು ಬಳಕೆ ಮಾಡಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.

ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ, ಮುಖ್ಯ ಎಂಜಿನಿಯರ್ ಎಚ್. ಸುರೇಶ, ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು, ಜಗದೀಶ ರಾಠೋಡ ಸೇರಿದಂತೆ ಪೊಲೀಸ್ ಹಿರಿಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ನೀರಾವರಿ ಇಲಾಖೆ, ಕಾಡಾ ಅಧಿಕಾರಿಗಳು, ನೀರು ಬಳಕೆದಾರರ ಸಂಘ, ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

- ಅಕ್ರಮ ಪಂಪಸೆಟ್ ನಿಷೇಧ

ಕೃಷ್ಣಾ ತೀರದಲ್ಲಿ ವ್ಯಾಪಕವಾಗಿ ಕೃಷಿಗಾಗಿ ಪಂಪಸೆಟ್ ಬಳಕೆ ಹೆಚ್ಚಿದೆ. ಈ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಅದನ್ನು ನಿರ್ಬಂಧಿಸಲು ಹೆಸ್ಕಾಂ ಕಂದಾಯ ನೀರಾವರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯ ನಡೆಸಲಿದ್ದೇವೆ ಎಂದು ನಿತೇಶ ಪಾಟೀಲ ತಿಳಿಸಿದರು. ಈ ಬಾರಿ ಜಲವಿದ್ಯುತ್ ಉತ್ಪಾದನೆಯೂ ಕುಸಿಯುತ್ತದೆ. ಅದಕ್ಕಾಗಿ ಉಷ್ಣ ವಿದ್ಯುತ್ ಸ್ಥಾವರದ ಮೇಲೆ ಅವಲಂಬನೆ ಹೆಚ್ಚಲಿದೆ. ಅದಕ್ಕೂ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ನಿತೇಶ ಪಾಟೀಲ ಹೇಳಿದರು. ಅಕ್ರಮ ಮರಳು ಮಣ್ಣು ಗಣಿಗಾರಿಕೆ ತಡೆಯಲು ಬೆಳಗಾವಿ ಭಾಗದಲ್ಲಿ ಈಚೆಗೆ ದಾಳಿ ನಡೆದ 30ಕ್ಕೂ ಹೆಚ್ಚು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಲಮಟ್ಟಿ ಭಾಗದಲ್ಲಿಯೂ ಅಕ್ರಮ ಮರಳು ಗಣಿಗಾರಿಕೆ ಹೆಚ್ಚಿದ್ದು ಗಮನಕ್ಕೆ ಬಂದಿದೆ. ಅದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT