ಬುಧವಾರ, ಆಗಸ್ಟ್ 10, 2022
23 °C
ಶುಕ್ರವಾರ ಒಂದೇ ದಿನ 3.2 ಟಿಎಂಸಿ ಅಡಿ ನೀರು ಸಂಗ್ರಹ

ಆಲಮಟ್ಟಿ ಜಲಾಶಯ: 1.46 ಲಕ್ಷ ಕ್ಯುಸೆಕ್ ದಾಟಿದ ಒಳಹರಿವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಲಮಟ್ಟಿ(ವಿಜಯಪುರ): ಬೆಳಗಾವಿ ಹಾಗೂ ಮಹಾರಾಷ್ಟ್ರ ರಾಜ್ಯದ ಕೃಷ್ಣಾ ಕಣಿವೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಶುಕ್ರವಾರ ಸಂಜೆ 1,46,211 ಕ್ಯುಸೆಕ್ ದಾಟಿದೆ.

ಆಲಮಟ್ಟಿ ಜಲಾಶಯದಲ್ಲಿ 509.65 ಮೀ.ವರೆಗೆ ನೀರು ಸಂಗ್ರಹವಾಗಿದ್ದು, ಶುಕ್ರವಾರ ಒಂದೇ ದಿನ 3.2 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಜಲಾಶಯ ಕಾಲುಭಾಗವೂ ಭರ್ತಿಯಾಗಿಲ್ಲ. ಹಾಗಾಗಿ ಪ್ರವಾಹದ ಸ್ಥಿತಿಗತಿ ಇಲ್ಲ. 

ಹೆಚ್ಚಳ ಸಾಧ್ಯತೆ: ಘಟಪ್ರಭಾ ನದಿಯಿಂದಲೂ ಆಲಮಟ್ಟಿಗೆ 30 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ.  ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ 72,625 ಕ್ಯುಸೆಕ್ ಒಳಹರಿವು ಇದ್ದು, ಕಲ್ಲೋಳ ಬ್ಯಾರೇಜ್ ಬಳಿ 97,265 ಕ್ಯುಸೆಕ್ ಒಳಹರಿವು ಇದೆ. ಇದರಿಂದಾಗಿ ಒಂದೆರೆಡು ದಿನಗಳಲ್ಲೇ ಜಲಾಶಯದ ಒಳಹರಿವು 1.50 ಲಕ್ಷ ಕ್ಯುಸೆಕ್ ದಾಟುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಜಲಾಶಯಗಳು ಶೇ 30ರಷ್ಟು ಭರ್ತಿಯಾಗದಿದ್ದರೂ ಮುಂದೆ ಅಪಾರ ಪ್ರಮಾಣದ ಮಳೆಯಿಂದ ಒಳಹರಿವು ಹೆಚ್ಚಳವಾಗಬಹುದೆಂದು ಜಲಾಶಯದಿಂದ ನೀರನ್ನು ಹೊರಬಿಡಲಾಗುತ್ತಿದೆ.   

ಮುಂದುವರಿದ ಮಳೆಯ ಅಬ್ಬರ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದ ಕೊಯ್ನಾದಲ್ಲಿ 14.2 ಸೆಂ.ಮೀ, ಮಹಾಬಳೇಶ್ವರದಲ್ಲಿ 12.6, ನವಜಾ 12.2, ಕನ್ಹೇರ್‌ದಲ್ಲಿ 11.2, ರಾಧಾನಗರಿಯಲ್ಲಿ 22, ತುಳಶಿಯಲ್ಲಿ 18.8, ಪಾಥಗಾಂವದಲ್ಲಿ 14.7, ಉರ್ಮೋದಿಯಲ್ಲಿ 14 ಮತ್ತು ದೂಧಗಂಗಾದಲ್ಲಿ 18.5 ಸೆಂ.ಮೀ ಮಳೆಯಾಗಿದೆ.

513.60 ಮೀ.ಗೆ ಸೀಮಿತ

ಕೇಂದ್ರ ಜಲ ಆಯೋಗದ ಮಾರ್ಗದರ್ಶಿ ಪ್ರಕಾರ ಕೃಷ್ಣಾ ಕಣಿವೆಯಲ್ಲಿ ಮಳೆ ಹೆಚ್ಚಾಗಿ ಪ್ರವಾಹ ಸ್ಥಿತಿ ಇದ್ದರೆ ಜೂನ್ 30 ರ ವರೆಗೆ ಆಲಮಟ್ಟಿ ಜಲಾಶಯದ ಮಟ್ಟವನ್ನು 513.60 ಮೀಟರ್‌ಗೆ ಸೀಮಿತಗೊಳಿಸಬೇಕು.  ಅದಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಬೇಕು. ಜುಲೈನಲ್ಲಿ 517.6 ಮೀ.ವರೆಗೆ ಹಾಗೂ ಆಗಸ್ಟ್‌ನಲ್ಲಿ ಪೂರ್ತಿಯಾಗಿ ಅಂದರೆ, 519.60 ಮೀ.ವರೆಗೆ ಭರ್ತಿ ಮಾಡಿಕೊಳ್ಳಬೇಕು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದರು.

ರಾಜಾಪುರ ಬ್ಯಾರೇಜ್ ಹಾಗೂ ಕಲ್ಲೋಳ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ ಬರುವ ನೀರು 36 ಗಂಟೆಗಳ ನಂತರ ಆಲಮಟ್ಟಿಗೆ ಬರುತ್ತದೆ. ಘಟಪ್ರಭಾ ನದಿಯ ನೀರು 13 ಗಂಟೆಗಳ ಬಳಿಕ ತಲುಪುತ್ತದೆ. ಅದಕ್ಕೆ ತಕ್ಕಂತೆ ನೀರು ಬಿಡುಗಡೆ ಮಾಡಿದಾಗ ಪ್ರವಾಹ ನಿಯಂತ್ರಣಕ್ಕೆ ಬರುತ್ತದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು