ಶನಿವಾರ, ಜುಲೈ 31, 2021
28 °C
ನಿರ್ಮಿತಿ ಕೇಂದ್ರದಿಂದ ಮಳೆ ನೀರು ಸಂಗ್ರಹ ಪಾಠ

ಮಳೆ ನೀರು ಸಂಗ್ರಹ ಪಾಠ: ಜಲ ಸಾಕ್ಷರತೆ ಸಾರುತ್ತಿರುವ ‘ಬಾರಿಶ್‌ಪುರ’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಮಳೆ ಇದ್ದರೆ ಇಳೆ; ಇಳೆ ಇದ್ದರೆ ಬೆಳೆ’, ‘ಕೆರೆಯಂತೆ ಹೊಲ ಮಾಡು; ದೊರೆಯಂತೆ ನೀ ಬಾಳು’...ಹೀಗೆ ಹತ್ತು ಹಲವು ಘೋಷ ವಾಕ್ಯಗಳೊಂದಿಗೆ ಇಲ್ಲಿಗೆ ಭೇಟಿ ನೀಡುವವರಿಗೆ ಮಳೆ ನೀರಿನ ಮಹತ್ವವನ್ನು ತಿಳಿಸುವ ಕಾರ್ಯವನ್ನು ಕಳೆದ ಹತ್ತಾರು ವರ್ಷಗಳಿಂದ ವಿಜಯಪುರದ ನಿರ್ಮಿತಿ ಕೇಂದ್ರ ಮಾಡುತ್ತಿದೆ.

ಹೌದು, ನಗರದ ಕೇಂದ್ರೀಯ ವಿದ್ಯಾ ಶಾಲೆ(ಕೆವಿಎಸ್‌) ಸಮೀಪ ಎರಡು ಎಕರೆ ವಿಶಾಲವಾದ ಜಾಗದಲ್ಲಿ ತಲೆ ಎತ್ತಿ ನಿಂತಿರುವ ನಿರ್ಮಿತಿ ಕೇಂದ್ರದ ಆವರಣದಲ್ಲಿ ಮಳೆ ನೀರು ಸಂಗ್ರಹದ ಹಲವು ವಿಧಾನಗಳನ್ನು ಪ್ರಾತ್ಯಕ್ಷಿಗಳ ಮೂಲಕ ಕಣ್ಣಿಗೆ ಕಟ್ಟಿಕೊಡಲಾಗಿದೆ.

ಆಕಾಶಕ್ಕೆ ಮುಖಮಾಡಿರುವ(ಉಲ್ಟಾ) ಬೃಹತ್‌ ಛತ್ರಿಯ ಮೇಲೆ ‘ಬನ್ನಿ ಮಳೆ ನೀರು ಸಂಗ್ರಹಿಸೋಣ’ ಎಂಬ ಧ್ಯೇಯವಾಕ್ಯ ಪ್ರವೇಶದ್ವಾರದಲ್ಲೇ ಅರ್ಥಪೂರ್ಣವಾಗಿ ಸ್ವಾಗತಿಸುತ್ತಿದೆ. ಒಳ ಪ್ರವೇಶಿಸುತ್ತಿದ್ದಂತೆ ಜಿಲ್ಲೆಯ ಬರದ ಚಿತ್ರಣವನ್ನು ಕಣ್ಣಿಗೆ ಕಟ್ಟಿಕೊಡುವ ದೃಶ್ಯಗಳು ಗಮನ ಸೆಳೆಯುತ್ತವೆ.

‘ಬರದಿಂದ ತತ್ತರಿಸಿ ಗುಳೆ ಹೋಗಿರುವ ಜನರು ಮನೆಗಳಿಗೆ ಕೀಲಿ ಹಾಕಿರುವ ಚಿತ್ರಣ, ನೀರಿಗಾಗಿ ಜನರು ಪರದಾಡುತ್ತಿರುವ ದೃಶ್ಯ, ಹನಿ ನೀರಿಗಾಗಿ ಮಹಿಳೆಯರು ಬೃಹತ್‌ ಕೊಡವನ್ನು ಆಗಸಕ್ಕೆ ಮುಖ ಮಾಡಿ ಹಿಡಿದಿರುವ ಚಿತ್ರಣ, ಟವೆಲ್‌, ಅರವಿಯಲ್ಲಿ ಮಳೆ ನೀರು ಹಿಡಿಯಲು ಯತ್ನಿಸುವ ಪುರುಷರು, ಪಾಠಿ ಚೀಲವನ್ನು ಆಗಸಕ್ಕೆ ಹಿಡಿದಿರುವ ಚಿಣ್ಣರನ್ನು ನೋಡಿದರೆ ಹನಿ ನೀರಿಗಾಗಿ ಇಲ್ಲಿಯ ಜನ ಎಷ್ಟು ಪರಿತಪಿಸುತ್ತಾರೆ ಎಂಬುದನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.

ಹೀಗಿತ್ತು...ವಿಜಯಪುರ:

ಜೊತೆಗೆ 600 ವರ್ಷಗಳ ಹಿಂದೆ ಆದಿಲ್‌ ಶಾಹಿ ಅರಸರ ಆಳ್ವಿಕೆಯಲ್ಲಿ ನೀರು ನಿರ್ವಹಣೆ ಅದ್ಭುತ ವಿಧಾನ ಹೇಗಿತ್ತು ಎಂಬುದನ್ನು ‘ಹೀಗಿತ್ತು ವಿಜಯಪುರ’ ಎಂಬ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗಿದೆ.

ಛಾವಣೆ ನೀರು ಸಂಗ್ರಹ:

ಮನೆ, ಮಠ, ದೇವಸ್ಥಾನ, ಚರ್ಚ್‌, ಮಸೀದಿ, ಶಾಲೆ, ಅಂಚೆ ಕಚೇರಿ, ಆಸ್ಪತ್ರೆ, ಗ್ರಾಮ ಪಂಚಾಯ್ತಿ ಕಾರ್ಯಾಲಯ, ಪೊಲೀಸ್‌ ಠಾಣೆ ಹೀಗೆ ಹತ್ತು ಹಲವು ಕಟ್ಟಡಗಳ ಚಾವಣೆಯಲ್ಲಿ ನೀರು ಸಂಗ್ರಹ ಮಾಡುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಗಿದೆ.

ಹೆಂಚಿನ ಛಾವಣಿ ಮನೆ, ಶೀಟ್‌ ಛಾವಣಿ ಮನೆ, ತಗಡಿನ ಛಾವಣಿ ಮನೆ, ಕಾಂಕ್ರಿಟ್‌ ಛಾವಣಿಗಳಿರುವ ಮನೆಗಳಲ್ಲಿ ಮಳೆ ನೀರು ಸಂಗ್ರಹ ಹೇಗೆ ಎಂಬುದುನ್ನು ತೋರಿಸಿಕೊಡಲಾಗಿದೆ.

ಇಂಗು ಗುಂಡಿಯಿಂದ ನೀರು ಇಂಗಿಸುವ ಪ್ರಾತ್ಯಕ್ಷಿಕೆ, ಜಲ ಮರುಪೂರ್ಣ ಗುಂಡಿ ಮಾಡುವ ವಿಧಾನ ಹಾಗೂ ಹೊಲಗಳಲ್ಲಿ ಬಾಂದಾರ, ಬದು ನಿರ್ಮಾಣ, ಚೆಕ್‌ ಡ್ಯಾಂ ನಿರ್ಮಾಣದ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಲಾಗಿದೆ. ಅಲ್ಲದೇ, ದಿನವೊಂದಕ್ಕೆ ಮನುಷ್ಯರಿಗೆ ಎಷ್ಟು ನೀರು ಬೇಕಾಗುತ್ತದೆ ಎಂಬುದನ್ನು ಅಂಕಿ–ಅಂಶಗಳ ಸಹಿತ ವಿವರಿಸಲಾಗಿದೆ.

ನಿರ್ಮಿತಿ ಕೇಂದ್ರ ಕಟ್ಟಡದ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಲು 3500 ಲೀಟರ್‌ ಸಾಮಾರ್ಥ್ಯದ ಬೃಹತ್‌ ಮಳೆ ನೀರು ತೊಟ್ಟಿಯನ್ನು ಮಾಡಲಾಗಿದ್ದು, ಒಂದು ಹನಿ ನೀರು ವ್ಯರ್ಥವಾಗದಂತೆ ವ್ಯವಸ್ಥಿತವಾಗಿ ಮಳೆ ನೀರು ಸಂಗ್ರಹದ ಮಹತ್ವವನ್ನು ಚಿತ್ರಣಗಳ ಮೂಲಕ ಕಟ್ಟಿಕೊಡಲಾಗಿದೆ.

₹ 7 ಲಕ್ಷ ವೆಚ್ಚ:

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್‌.ಮಲಜಿ, ಮೈಸೂರಿನ ನಿರಂತರ ಫೌಂಡೇಷನ್‌ 2005ರಲ್ಲಿ ನಿರ್ಮಿತಿ ಕೇಂದ್ರದ ಆವರಣದಲ್ಲಿ ಬಾರಿಶ್‌ಪುರವನ್ನು ಸುಂದರವಾಗಿ ವಿನ್ಯಾಸಗೊಳಿಸಿದೆ. ಸುಮಾರು ₹ 7 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಇದನ್ನು ಅಂದಿನ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್‌ ಲೋಕಾರ್ಪಣೆ ಮಾಡಿದ್ದರು. ಅಂದಿನ ಜಿಲ್ಲಾಧಿಕಾರಿ ಮೊಹಮ್ಮದ್‌ ಮೋಸಿನ್‌ ಅವರು ಇದರ ನಿರ್ಮಾಣಕ್ಕೆ ವಿಶೇಷ ಆಸಕ್ತಿ ವಹಿಸಿದ್ದರು ಎಂದು ಹೇಳಿದರು.

ರೈತರು, ವಿದ್ಯಾರ್ಥಿಗಳು, ಪ್ರವಾಸಿಗರು ಬಾರಿಶ್‌ಪುರದಕ್ಕೆ ಭೇಟಿ ನೀಡಿ ಮಳೆ ನೀರು ಸಂಗ್ರಹದ ಪ್ರಾತ್ಯಕ್ಷಿಕೆ ನೋಡಿಕೊಂಡು ಹೋಗುತ್ತಿದ್ದಾರೆ. ಹಲವು ಶಾಲೆ,ಮನೆ, ಕಟ್ಟಡಗಳಲ್ಲಿ ಅಳವಡಿಕೆಯನ್ನು ಮಾಡಿದ್ದಾರೆ.
–ಜಿ.ಎನ್‌.ಮಲಜಿ
ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು