ಬುಧವಾರ, ಜನವರಿ 20, 2021
17 °C
ಗ್ರಾಮ ಸ್ವರಾಜ್ಯ ಸಮಾವೇಶ; ಊರಿನವರಿಂದಲೇ ಅಭ್ಯರ್ಥಿ ಆಯ್ಕೆ: ಕಾರಜೋಳ

ಗ್ರಾ.ಪಂ.ಚುನಾವಣಾ ಪ್ರಚಾರಕ್ಕೆ ಬಿಜೆಪಿ ಮುನ್ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ವಿಜಯಪುರ ಮತ್ತು ತಾಳಿಕೋಟೆಯಲ್ಲಿ ಸೋಮವಾರ ‘ಗ್ರಾಮ ಸ್ವರಾಜ್ಯ’ ಸಮಾವೇಶ ಆಯೋಜಿಸುವ ಮೂಲಕ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾದ ದಿನದಂದೇ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರಕ್ಕೆ ಬಿಜೆಪಿ ಚಾಲನೆ ನೀಡಿತು.

ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗ್ರಾಮ ಪಂಚಾಯ್ತಿ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ಊರಿನ ಮುಖಂಡರಿಗೆ ಬಿಡಿ’ ಎಂದು ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ತಿಳಿಸಿದರು.

ಆಯಾ ಊರಿನ ಮುಖಂಡರು ಮತ್ತು ಪಕ್ಷದ ಮುಖಂಡರು ಚರ್ಚಿಸಿ ಗೆಲ್ಲುವ ಸಾಧ್ಯತೆ ಇರುವವರನ್ನು ಹಾಗೂ ಮೀಸಲಾತಿ ಪ್ರಕಾರ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇ 70ರಷ್ಟು ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಅವಕಾಶ ಇದೆ ಎಂದರು.

ಪಾರ್ಲಿಮೆಂಟ್‌ನಿಂದ ಪಂಚಾಯ್ತಿ ವರೆಗೆ ಬಿಜೆಪಿ ಆಡಳಿತ ಇರಬೇಕು ಹಾಗೂ ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಈ ಕನಸು ನನಸಾಗಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಗ್ರಾಮ ಪಂಚಾಯ್ತಿಯಲ್ಲೂ ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ ರಾಮರಾಮ್ಯ ನಿರ್ಮಾಣದ ಕನಸು ನನಸಾಗಲಿದೆ ಎಂದರು.

ಪ್ರಧಾನಿ ಮೋದಿ ಅವರು ₹ 6 ಸಾವಿರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ₹ 4 ಸಾವಿರ ಸೇರಿದಂತೆ ಪ್ರತಿ ವರ್ಷ ರೈತರ ಖಾತೆಗೆ ₹ 10 ಸಾವಿರ ಪಾವತಿ ಮಾಡಲಾಗುತ್ತಿದೆ. ಅದೇ ರೀತಿ ದೇಶದ 12 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದಾರೆ. 2 ಕೋಟಿ ಮನೆ ನಿರ್ಮಿಸಿದ್ದಾರೆ, 10 ಕೋಟಿ ಶೌಚಾಲಯ ನಿರ್ಮಿಸಿದ್ದಾರೆ ಎಂದು ಹೇಳಿದರು.

18,453 ಹಳ್ಳಿಗಳಿಗೆ ಹೊಸದಾಗಿ ವಿದ್ಯುತ್‌ ಸಂಪ‍ರ್ಕ ಕಲ್ಪಿಸಿದ್ದಾರೆ. ದೀನ್‌ದಯಾಳ್‌ ಯೋಜನೆಯಡಿ ಶೇ 99 ರಷ್ಟು ಕಡು ಬಡವರ ಮನೆಗೆ ಉಚಿತ ವಿದ್ಯುತ್‌ ನೀಡಿದ್ದಾರೆ. 80 ಕೋಟಿ ಜನರಿಗೆ ತಲಾ 5 ಕೆ.ಜಿ.ಅಕ್ಕಿ, ಬೇಳೆ ನೀಡಿದ್ದಾರೆ ಎಂದು ಹೇಳಿದರು.

ಜನಧನ್‌ ಯೋಜನೆ, ಆಯುಷ್ಮಾನ್‌ ಭಾರತ, ಜನೌಷಧ ಕೇಂದ್ರ, ಜಲಜೀವನ, ಅಟಲ್‌ ಪಿಂಚಣಿ ಯೋಜನೆ, ಆಹಾರ ಭದ್ರತಾ ಯೋಜನೆ, ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ಜಾರಿಗೆ ತರುವ ಮೂಲಕ ಮೋದಿ ಸರ್ಕಾರ ದೇಶದ ಜನರಿಗೆ ಉತ್ತಮ ಕೊಡುಗೆ ನೀಡಿದ್ದು, ಇದರ ಆಧಾರದ ಮೇಲೆ ಗ್ರಾಮ ಪಂಚಾಯ್ತಿ ಚುನಾವಣೆ ಎದುರಿಸಬೇಕು ಎಂದರು.

60 ವರ್ಷಗಳ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸ, ಕಾರ್ಯಗಳಿಗೆ ಹೋಲಿಸಿದರೆ ಪ್ರಧಾನಿ ಮೋದಿ ಅವರು ಕೇವಲ ಆರು ವರ್ಷದಲ್ಲಿ ಕಾಂಗ್ರೆಸ್‌ಗಿಂತ 100ಕ್ಕೆ ಶೇ 90ರಷ್ಟು ಹೆಚ್ಚು ಕೆಲಸ ಮಾಡಿದ್ದಾರೆ ಎಂದರು.

ಪಂಚರತ್ನ ಸಮಿತಿ ರಚನೆ:

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮಾತನಾಡಿ, ಗ್ರಾಮ ಪಂಚಾಯ್ತಿ ಚುನಾವಣೆ ಸಂಬಂಧ ಬೂತ್‌ ಮಟ್ಟದಲ್ಲಿ ’ಪಂಚರತ್ನ’ ಸಮಿತಿ ರಚನೆ ಮಾಡಬೇಕು. ಯಾರು ಚುನಾವಣೆಗೆ ನಿಲ್ಲಬೇಕು ಎಂಬುದನ್ನು ಈ ಸಮಿತಿಯೇ ನಿರ್ಧರಿಸಲಿದೆ ಎಂದರು.

ಪ್ರತಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ವಾರ್‌ ರೂಂ, ಕಾಲ್‌ ಸೆಂಟರ್‌ ರಚನೆ ಮಾಡಬೇಕು. ಪಂಚಾಯ್ತಿ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಮಾಡುವ ಮೂಲಕ ಚುನಾವಣೆಗೆ ಸಂಬಂಧಿಸಿದ ಪಕ್ಷದ ವಿಚಾರಗಳನ್ನು, ಸಲಹೆ, ಸೂಚನೆಗಳನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು.

ಗಂಭೀರವಾಗಿ ಪರಿಗಣಸಿ:

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಪಕ್ಷದ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಪಿ.ರಾಜು, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರ್ಷ ಗೊಳಸಂಗಿ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಮುಖಂಡರಾದ ಚಂದ್ರಶೇಖರ ಕವಟಗಿ, ಗೂಳಪ್ಪಣ್ಣ ಶೆಟಗಾರ, ಮಲ್ಲಮ್ಮ ಜೋಗೂರ ಇದ್ದರು.

****

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಮತ್ತೆ ರಾಜ್ಯದಲ್ಲಿ ನಮ್ಮದೇ ಸರ್ಕಾರವನ್ನು ರಚಿಸುತ್ತೇವೆ
ಗೋವಿಂದ ಕಾರಜೋಳ
ಉಪ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು