ಗುರುವಾರ , ಸೆಪ್ಟೆಂಬರ್ 29, 2022
26 °C
ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ 10ನೇ ಘಟಿಕೋತ್ಸವ; 287 ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ

ಗೌರವಗೆ 6, ರುಚಿಸಿಂಗ್‌ಗೆ 3 ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಬಿ.ಎಂ.ನಮ್ರತಾಗೆ 2 ಚಿನ್ನದ ಪದಕ, ಎಂಬಿಬಿಎಸ್ ಪದವಿ ವಿಭಾಗದಲ್ಲಿ ಜಮ್ಮುವಿನ ಡಾ.ಗೌರವ ಅರೊರಾಗೆ 6 ಚಿನ್ನದ ಪದಕ, ಡಾ.ರುಚಿಸಿಂಗ್‌ಗೆ 3 ಚಿನ್ನದ ಪದಕ ಮತ್ತು 2 ನಗದು ಬಹುಮಾನ ಹಾಗೂ ಡಾ.ಸಿ. ಯಾಶಿಕಾಗೆ 2 ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ವಿಶ್ವವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ಸೋಮವಾರ ನಡೆದ ಘಟಿಕೋತ್ಸವದಲ್ಲಿ ಒಟ್ಟು 287 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ಇವರಲ್ಲಿ 4 ಜನರಿಗೆ ಪಿ.ಎಚ್‌ಡಿ, 62 ವೈದ್ಯಕೀಯ ಸ್ನಾತಕೋತ್ತರ ಪದವಿ, 2 ಎಂ. ಎಚ್. ಎ, 2 ಎಂ. ಪಿ. ಎಚ್, 202 ಎಂಬಿಬಿಎಸ್ ಹಾಗೂ 15 ವಿದ್ಯಾರ್ಥಿಗಳಿಗೆ ಬಿ. ಎಸ್‌ಸಿ(ಎಂ. ಐ. ಟಿ) ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.

ಘಟಿಕೋತ್ಸವ ಭಾಷಣ ಮಾಡಿದ ಚೆನ್ನೈನ ಪೊರೂರ್‌ನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆಯ ಕುಲಪತಿ ಪ್ರೊ.ಡಾ.ಪಿ.ವಿ. ವಿಜಯರಾಘವನ್‌, ಕೋವಿಡ್ ಪರಿಸ್ಥಿತಿ ಆರೋಗ್ಯ ರಕ್ಷಣೆಯಲ್ಲಿ ಸಮಗ್ರ ವಿಧಾನದ ಅಗತ್ಯವನ್ನು ನಮಗೆ ತೋರಿಸಿದೆ. ವೈದ್ಯರು, ದಾದಿಯರು, ಔಷಧಕಾರರು, ದಂತವೈದ್ಯರು ಅಥವಾ ಸಂಬಂಧಿತ ಆರೋಗ್ಯ ವೃತ್ತಿಪರರು ನಿರ್ವಹಿಸುವ ಕರ್ತವ್ಯಗಳಿಗೆ ಅನುಗುಣವಾಗಿ ಅಗತ್ಯವಿರುವ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳ ಅವಧಿ, ರಚನೆ ಮತ್ತು ವಿನ್ಯಾಸದ ಕುರಿತು ಶಿಕ್ಷಣದ ಮರುಕಲ್ಪನೆ ಮಾಡಲಾಗುತ್ತಿದೆ ಎಂದರು.

ನಮ್ಮ ಜನರು ಆರೋಗ್ಯ ರಕ್ಷಣೆಯಲ್ಲಿ ಬಹು ಆಯ್ಕೆಯನ್ನು ಇಷ್ಟಪಡುವುದರಿಂದ ಬೇಡಿಕೆಗೆ ತಕ್ಕಂತೆ ಸೇವೆ ನೀಡಬೇಕಿದೆ. ಅಲೋಪಥಿ ವೈದ್ಯಕೀಯ ಶಿಕ್ಷಣದ ಎಲ್ಲಾ ವಿದ್ಯಾರ್ಥಿಗಳು ಮೂಲಭೂತ ಶಿಕ್ಷಣವನ್ನು ಹೊಂದಿರುತ್ತಾರೆ. ಆಯುರ್ವೇದ, ಯುನಾನಿ, ಸಿದ್ಧ ಮುಂತಾದ ಭಾರತೀಯ ಪರ್ಯಾಯ ವೈದ್ಯಕೀಯ ಪದ್ಧತಿಗಳ ತಿಳಿವಳಿಕೆ, ಹೋಮಿಯೋಪಥಿ ಮತ್ತು ಪ್ರಕೃತಿ ಚಿಕಿತ್ಸೆಯ ರೂಪಗಳು ಸವಾಲಾಗಿವೆ ಎಂದು ಅವರು ಹೇಳಿದರು.

ದೇಶದಲ್ಲಿ 2020ರಲ್ಲಿ ನೂತನ ಶಿಕ್ಷಣ ನೀತಿ ಘೋಷಣೆ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಹೊಸ ಶಿಕ್ಷಣ ನೀತಿ ಜಾರಿಗೆ ಶ್ರಮಿಸುತ್ತಿವೆ. ಎಲ್ಲ ಆರೋಗ್ಯ ಶಿಕ್ಷಣ ಸಂಸ್ಥೆಗಳು ಇದರ ಮಹತ್ವ ಅರಿತು ಫೌಂಡೇಶನ್ ಕೋರ್ಸ್‌ ಸೇರಿದಂತೆ ಕೌಶಲಾಧಾರಿತ ಕೋರ್ಸ್‌ಗಳಿಗೆ ಆದ್ಯತೆ ನೀಡುವ ಮೂಲಕ ನೀಟ್ ಮತ್ತು ನೆಕ್ಸ್ಟ್ ಪರೀಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ಯಶಸ್ಸು ಕೇವಲ ಒಂದು ದಿನದಲ್ಲಿ ಸಿಗುವುದಿಲ್ಲ. ಸತತ ಪ್ರಯತ್ನ ಮತ್ತು ಶಿಸ್ತಿನಿಂದ ಅದು ಲಭಿಸುತ್ತದೆ. ದೇವರಲ್ಲಿ ನಂಬಿಕೆ ಇಟ್ಟು ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿದರೆ ಅದಕ್ಕೆ ತಕ್ಕ ಗೌರವ ತಾನಾಗಿಯೇ ಬರುತ್ತದೆ ಎಂದು ಕಿವಿಮಾತು ಹೇಳಿದರು.

ಧನಾತ್ಮಕ ಮನೋಭಾವದಿಂದ ಮುನ್ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅನಗತ್ಯ ಒತ್ತಡಕ್ಕೆ ಒಳಗಾಗದೇ ನಿರ್ಭೀತಿಯಿಂದ ಮುನ್ನಡೆಯಬೇಕು. ಕರ್ತವ್ಯದ ಜೊತೆಗೆ ಕುಟುಂಬಕ್ಕೂ ಸಮಯ ಮೀಸಲಿಡುವುದನ್ನು ಮರೆಯಬೇಡಿ ಎಂದು ಅವರು ಹೇಳಿದರು.

ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ, ವಿವಿ ಸಮ ಕುಲಪತಿ  ಡಾ.ಅರುಣ್ ಸಿ. ಇನಾಮದಾರ, ವಿವಿ ಕುಲಸಚಿವ ಡಾ. ಆರ್. ವಿ. ಕುಲಕರ್ಣಿ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ  ಡಾ. ಅರವಿಂದ್ ವಿ.ಪಾಟೀಲ ಉಪಸ್ಥಿತರಿದ್ದರು.

ವೃತ್ತಿ ಜೀವನದಲ್ಲಿ ಯಶಸ್ವಿಗೆ ಕೌಶಲ, ಉತ್ತಮ ಸಂವಹನ ಮುಖ್ಯ. ನಾವಿನ್ಯತೆ ಮತ್ತು ಸೃಜನಶೀಲತೆಯಿಂದ ಕೆಲಸ ಮಾಡಬೇಕು. ವಹಿಸುವ ಜವಾಬ್ದಾರಿಗಳನ್ನು ಶ್ರಮವಹಿಸಿ, ಪ್ರಾಮಾಣಿಕವಾಗಿ ಮಾಡಬೇಕು–

–ಪ್ರೊ.ಡಾ.ಪಿ.ವಿ. ವಿಜಯರಾಘವನ್‌, ಕುಲಪತಿ, ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆ, ಚೆನ್ನೈ

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು