ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ಮತ ಎಣಿಕೆಗೆ ಕ್ಷಣ ಗಣನೆ: ಯಾರಾಗಲಿದ್ದಾರೆ ಸಿಂದಗಿ ಶಾಸಕ?

Last Updated 1 ನವೆಂಬರ್ 2021, 11:24 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯ ರಾಜಕೀಯದಲ್ಲಿ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಸಿಂದಗಿ ಉಪ ವಿಧಾನಸಭಾ ಉಪ ಚುನಾವಣೆ ಮತ ಎಣಿಕೆ ನ.2ರಂದು ಬೆಳಿಗ್ಗೆ 8ಕ್ಕೆ ಆರಂಭವಾಗಲಿದ್ದು, ಬಹತೇಕ ಮಧ್ಯಾಹ್ನ 12ರೊಳಗೆ ಫಲಿತಾಂಶ ಲಭಿಸಲಿದೆ.

ಕಾಂಗ್ರೆಸ್‌ನ ಅಶೋಕ ಮನಗೂಳಿ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿಎಸ್‌ನ ನಾಜಿಯಾ ಶಕೀಲ್‌ ನಡುವೆ ತುರುಸಿನ ಪೈಪೋಟಿ ನಡೆದಿದ್ದು, ಈ ಮೂವರಲ್ಲಿ ಯಾರು ಮುಂದಿನ ಒಂದೂವರೆ ವರ್ಷದ ಅವಧಿಗೆ ಸಿಂದಗಿ ಶಾಸಕರಾಗುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಲಭಿಸಲಿದೆ.

ಒಂದೆಡೆ ಕಾಂಗ್ರೆಸ್‌ನವರು, ಇನ್ನೊಂದೆಡೆ ಬಿಜೆಪಿಯವರು ತಮ್ಮದೇ ಗೆಲುವು ಎಂಬ ಲೆಕ್ಕೆಚಾರದಲ್ಲಿ ಬೀಗುತ್ತಿದ್ದಾರೆ. ವಿಜಯೋತ್ಸವಕ್ಕೂ ಅಣಿಯಾಗಿದ್ದಾರೆ. ಮತದಾರರ ಆಶೀರ್ವಾದ ಯಾರ ಪರ ಇರಲಿದೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಶನಿವಾರ(ಅ.30) ನಡೆದ ಮತದಾನದಲ್ಲಿ ಒಟ್ಟು 2,34,437 ಮತದಾರರ ಪೈಕಿ 1,62,852 ಮತದಾರರು ಅಂದರೇ, ಶೇ 69.47 ರಷ್ಟು ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮತ ಎಣಿಕೆಗೆ ಸಿದ್ಧತೆ:ವಿಜಯಪುರ ನಗರದ ಸೈನಿಕ ಶಾಲೆಯ ’ಒಡೆಯರ ಹೌಸ್‘ನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಒಟ್ಟು 22 ಸುತ್ತು ಮತಎಣಿಕೆ ನಡೆಯಲಿದೆ. ಮತಎಣಿಕೆ ಕೊಠಡಿಗಳು ಎರಡು ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ತಲಾ 7 ಟೇಬಲ್‌ನಂತೆ ಒಟ್ಟು 14 ಟೇಬಲ್‌ ಇರಲಿದೆ. ಪ್ರತಿ ಟೇಬಲ್ ಗೆ ತಲಾ ಒಬ್ಬ ಮೈಕ್ರೋ ಅಬ್ಸರ್ವರ್ ಒಬ್ಬ ಮತಎಣಿಕೆ ಮೇಲ್ವಿಚಾರಕ, ಒಬ್ಬ ಮತಎಣಿಕೆ ಸಹಾಯಕರು ಸೇರಿದಂತೆ ಒಟ್ಟು 60 ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಆರಂಭದಲ್ಲಿ ಅಂಚೆ ಮತಪತ್ರಗಳ ಎಣಿಕೆ ಕಾರ್ಯವು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ. ಗುರುತಿನ ಚೀಟಿ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮೊಬೈಲ್ ಫೋನ್‌, ಎಲೆ, ಅಡಿಕೆ, ಗುಟ್ಕಾ, ಪಾನ್‌ಮಸಾಲ, ತಿಂಡಿ-ತಿನಿಸು, ಕುಡಿಯುವ ನೀರು ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದಿಂದ ಪ್ರವೇಶ ಅನುಮತಿ ಹೊಂದಿದ ವಾಹನಗಳಿಗೆ ಮಾತ್ರ ವಾಹನ ನಿಲುಗಡೆ ಪ್ರದೇಶದವರೆಗೆ ಮಾತ್ರ ಅವಕಾಶವಿರುತ್ತದೆ ಹಾಗೂ ಅಭ್ಯರ್ಥಿಗಳಿಗೆ ಮತ್ತು ಚುನಾವಣಾ ಏಜೆಂಟರುಗಳಿಗೆ ಮಾತ್ರ ನಿಗದಿತ ಸ್ಥಳದಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ ಎಂದು ಹೇಳಿದರು.

‌ಇವಿಎಂ ಮತಯಂತ್ರಗಳ ಎಣಿಕೆ ಕೊನೆಯ ಸುತ್ತಿನ ನಂತರ 5 ವಿವಿಪ್ಯಾಟ್ ಮತಯಂತ್ರಗಳಲ್ಲಿ ವಿವಿಪ್ಯಾಟ್ ಸ್ಲೀಪ್‌ಗಳನ್ನು ಎಣಿಕೆ ಮಾಡಲಾಗುತ್ತದೆ. ನಿಗದಿತ ಮತಎಣಿಕೆ ಟೇಬಲ್‌ಗೆ ನಿಗದಿತ ಏಜೆಂಟ್‌ ಇರಬೇಕು. ಬೇರೆ ಟೇಬಲ್‌ಗೆ ಹೋಗಿಬರಲು ಅವಕಾಶವಿರುವುದಿಲ್ಲ. ಈಗಾಗಲೇ ಚುನಾವಣಾ ಅಧಿಕಾರಿಗಳು ಭಾವಚಿತ್ರವಿರುವ ಗುರುತಿನ ಚೀಟಿ ನೀಡಿದ್ದು, ಅದರಂತೆ ಮತಎಣಿಕೆ ಏಜೆಂಟರು ಮತ ಎಣಿಕೆ ಕೊಠಡಿಯಲ್ಲಿ ಬೆಳಿಗ್ಗೆ 7.30ಕ್ಕೆ ಹಾಜರಿರಬೇಕು ಎಂದು ತಿಳಿಸಿದ್ದಾರೆ.

ಪ್ರತಿ ರೌಂಡ್‌ವಾರು ಮತ ಗಳಿಕೆಯ ವಿವರವನ್ನು ಚುನಾವಣಾ ಅಧಿಕಾರಿಗಳು ಮತ್ತು ಚುನಾವಣಾ ಸಾಮಾನ್ಯ ವೀಕ್ಷಕರು ಪರಿಶೀಲಿಸಿ ಖಾತ್ರಿಯಾದ ನಂತರ ಎಣಿಕೆ ಕೊಠಡಿಯಲ್ಲಿ ಮತ್ತು ಸಾರ್ವಜನಿಕರಿಗೆ ಪ್ರಚುರ ಪಡಿಸಲಾಗುವುದು. ಎನ್‍ಐಸಿ ಮೂಲಕ ಇಎನ್‌ಸಿಓಆರ್ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಹೇಳಿದರು.

ಪತ್ರಿಕಾ, ವಿದ್ಯುನ್ಮಾನ ಮಾಧ್ಯಮದವರಿಗೆ ’ಮೀಡಿಯಾ ಕೊಠಡಿ‘ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಸ್ಪರ್ಧಿಸಿದ ಅಭ್ಯರ್ಥಿ, ಏಜೆಂಟರುಗಳಿಗೆ ಪ್ರತ್ಯೇಕವಾದ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಿಗಿ ಭದ್ರತೆ: ಮತ ಎಣಿಕೆ ಕೇಂದ್ರದಲ್ಲಿ 24X4 ಅವಧಿಗೆ ಕಂಟ್ರೋಲ್ ರೂಂ ಅನ್ನು ಆರಂಭಿಸಲಾಗಿದೆ. ಮೂರು ಪಾಳಯದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ ಎಣಿಕೆ ಕೇಂದ್ರಕ್ಕೆ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಅವಶ್ಯವಿರುವ ಭದ್ರತಾ ಮತ್ತು ಕಾನೂನು ಸುವ್ಯವಸ್ಥೆಗೆ 4 ಡಿವೈಎಸ್ಪಿ, 5 ಸಿಪಿಐ, 23 ಪಿಎಸ್‌ಪಿ, 25 ಎಎಸ್‌ಐ, 282 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ತಿಳಿಸಿದ್ದಾರೆ.

***

ಕೋವಿಡ್‌ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರದ ಬಳಿ ಮೆರವಣಿಗೆ, ವಿಜಯೋತ್ಸವ, ಪಟಾಕಿ ಸಿಡಿಸಲು ಅವಕಾಶ ಇರುವುದಿಲ್ಲ

–ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT