ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಬೋಗಸ್ ಗ್ಯಾರಂಟಿ ಕಾರ್ಡ್ ಜನ ನಂಬುವುದಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

Last Updated 21 ಮಾರ್ಚ್ 2023, 10:27 IST
ಅಕ್ಷರ ಗಾತ್ರ

ವಿಜಯಪುರ: ಕಾಂಗ್ರೆಸ್‌‌ನ ಸುಳ್ಳು, ಬೋಗಸ್ ಭರವಸೆ, ಗ್ಯಾರಂಟಿ ಕಾರ್ಡ್ ಅನ್ನು ಜನರು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾಲತವಾಡದ ಶ್ರೀ ಶರಣ ವೀರೇಶ್ವರ ಮಹಾ ವಿದ್ಯಾಲಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಾವು ಸುಳ್ಳು ಮಾತನಾಡಲ್ಲ, ಸುಳ್ಳು ಭರವಸೆ ನೀಡಲ್ಲ, ನಾವು ಮೋಸ ಮಾಡಲ್ಲ, ನಮ್ಮ ಕೆಲಸವೇ ನಮ್ಮ ಗ್ಯಾರಂಟಿ ಎಂದು ಹೇಳಿದರು.

ಕಾಂಗ್ರೆಸ್‌‌ನ ಬೋಗಸ್ ಗ್ಯಾರಂಟಿಯನ್ನು ಜನರು ನಂಬುವುದಿಲ್ಲ, ಕಾಂಗ್ರೆಸ್‌‌ನವರು ಜನರನ್ನು ಪದೇ ಪದೇ ಮೋಸ ಮಾಡಲು ಸಾಧ್ಯವಿಲ್ಲ. ಇದು ರಾಜಸ್ಥಾನ ಅಥವಾ ಛತ್ತೀಸಗಡ ಅಲ್ಲ. ಕರ್ನಾಟಕದ ಜನ ಹೇಳಿದ್ದನ್ನೆಲ್ಲ ನಂಬುವುದಿಲ್ಲ ಎಂದು ಕಾಂಗ್ರೆಸ್‌ ವಿರುದ್ದ ಹರಿಹಾಯ್ದರು.

ಐದು ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ‌ ನೀಡುತ್ತಿರುವ ದೇಶದ ಏಕೈಕ ರಾಜ್ಯ ಕರ್ನಾಟಕ ಆಗಿದೆ‌ ರೈತರ ಪರ ಗಟ್ಟಿಯಾಗಿ ಸರ್ಕಾರ ನಿಂತಿದೆ ಎಂದು ತಿಳಿಸಿದರು.

ಡಾ. ನಂಜುಂಡಪ್ಪ ವರದಿ ಬಗ್ಗೆ ಈ ಹಿಂದಿನ ಸರ್ಕಾರಗಳು ಕೇವಲ ಭಾಷಣ ಮಾಡಿದ್ದವು. ಆದರೆ, ನಮ್ಮ ಸರ್ಕಾರ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದೆ. ಚಿಮ್ಮಲಗಿ, ‌ಮುಖವಾಡ ಏತ ನೀರಾವರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಒಂಬತ್ತು ಏತ ನೀರಾವರಿ ಯೋಜನೆಗಳು ಬಿ ಸ್ಕೀಮ್‌‌ನಲ್ಲಿವೆ ಎಂದು ಹೇಳಿ ಅನುಷ್ಠಾನಕ್ಕೆ ಅಧಿಕಾರಿಗಳು ತಡೆಯಾಗಿದ್ದರು. ಆ ಅಡೆತಡೆಯನ್ನು ನಿವಾರಣೆ ಮಾಡಿ, ಯೋಜನೆಗಳ ಅನುಷ್ಠಾನಕ್ಕೆ ಮೊದಲಿಗೆ ನಾನು ಆದ್ಯತೆ ನೀಡಿದೆ ಎಂದು ಹೇಳಿಕೊಂಡರು.

ಈ ಹಿಂದಿನ ಸರ್ಕಾರ ಕೇವಲ ಟೆಂಡರ್‌ಗೆ ಸೀಮಿತವಾಗುತ್ತು.‌ ಏಕೆ ಟೆಂಡರ್‌ಗೆ ಸೀಮಿತ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗ ಅವರು ನೀತಿವಂತರಂತೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಮುಖಂಡರನ್ನು ಕುಟುಕಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಲುವೆ ಮೂಲಕ ರೈತರ ಹೊಲಕ್ಕೆ ನೀರು ಹರಿಸಲು, ಕೆರೆ ತುಂಬಿಸಲು ಆದ್ಯತೆ ನೀಡಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ನಮ್ಮ ಪಾಲಿನ ನೀರು ಸದ್ಬಳಕೆಗೆ ಸರ್ಕಾರ ಬದ್ದತೆಯಿಂದ ಕೆಲಸ ಮಾಡುತ್ತಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದವರು ಯಾರು ಎಂದು ಕಾಂಗ್ರೆಸ್‌ ಈಗ ಉತ್ತರ ನೀಡಬೇಕಿದೆ, ಐವತ್ತು ವರ್ಷಗಳ ಕಾಲ ಈ ಭಾಗದ ಅಭಿವೃದ್ಧಿ ನಿರ್ಲಕ್ಷ್ಯ ಏಕೆ ಮಾಡಿದರು ಎಂದು ಹೇಳಬೇಕು ಎಂದು ಪ್ರಶ್ನಿಸಿದರು.

ಐದು ವರ್ಷದಲ್ಲಿ 50 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಕೃಷ್ಣೆಯ ಮೇಲೆ ಆಣೆ ಮಾಡಿ ಕೇವಲ ₹ 6 ಸಾವಿರ ಕೋಟಿ ಯುಕೆಪಿಗೆ ನೀಡಿದ್ದಾರೆ. ಐದು ವರ್ಷದ ಆಡಳತಾವಧಿಯಲ್ಲಿ ಸಂತ್ರಸ್ತ ರೈತರ ಭೂಮಿಗೆ ದರ ನಿಗದಿ ಮಾಡಲು ಆಗದವರಿಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿದ್ದೇವೆ. ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಿದ್ದೇವೆ. ಉತ್ತರ ಕರ್ನಾಟಕ ಭಾಗ ನೀರಾವರಿ ಆಗುವವರಿಗೆ ವಿಶ್ರಮಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡು ಬಜೆಟ್‌ನಲ್ಲಿ ₹ 2 ಲಕ್ಷ ಕೋಟಿ ಅನುದಾನ ರಾಜ್ಯದ ಅಭಿವೃದ್ಧಿಗೆ ನೀಡಿದ ಶ್ರೇಯಸ್ಸು ನಮ್ಮ ಸರ್ಕಾರದ್ದಾಗಿದೆ. ಮುಂಬರುವ ದಿನಗಳಲ್ಲಿ ಎಲ್ಲ ನಗರ, ಪಟ್ಟಣಗಳ ಮನೆ, ಮನೆಗೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದರು.

ಸಾಮಾಜಿಕ ನ್ಯಾಯದ ಬಗ್ಗೆ ಸದಾ ಕಾಲ ಮಾತನಾಡುವವರು ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

72 ವರ್ಷ ಕುಡಿಯುವ ನೀರು ಕೊಡದಿರುವವರಿಗೆ ಏನನ್ನಬೇಕು? ಅವರಿಗೆ ಈ ಚುನಾವಣೆಯಲ್ಲಿ ನೀರು ಕುಡಿಸಿ ಎಂದು ಕರೆ ನೀಡಿದರು.

ಮುದ್ದೇಬಿಹಾಳ ಕ್ಷೇತ್ರದೊಂದಿಗೆ ನಮ್ಮ ತಂದೆಯವರ ಕಾಲದಿಂದಲೂ ಆತ್ಮೀಯ ಸಂಬಂಧ ಇದೆ. ದೇಶಮುಖ ಅವರು ನಮ್ಮ ತಂದೆಯ ಸಂಪುಟದಲ್ಲಿ ಸಚಿವರಾಗಿದ್ದರು. ನಡಹಳ್ಳಿ ನನ್ನ ಕಿರಿಯ ಸಹೋದರ, ಅವರು ಹಂತಹಂತವಾಗಿ ಬೆಳೆದು ಬಂದ ಹಾದಿ ನೋಡಿದ್ದೇನೆ, ಎಲ್ಲರ ಹೃದಯ ಗೆದ್ದು ಉತ್ತರ ಕರ್ನಾಟಕದ ನಾಯಕನಾಗಿ ಹೊರಹೊಮ್ಮಿದ್ದಾರೆ. ಮುದ್ದೇಬಿಹಾಳದ ರೀತಿ ರಾಜ್ಯದ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದರು.

ಒಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹೇಗೆ ಮಾಡಬಹುದು ಎಂಬುದುಕ್ಕೆ ನಡಹಳ್ಳಿ ಮತ್ತು ಮುದ್ದೇಬಿಹಾಳ ಸೂಕ್ತ ಉದಾಹರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುದ್ದೇಬಿಹಾಳ ಕ್ಷೇತ್ರದ ಭವ್ಯ ಭವಿಷ್ಯ ಬರೆಯಲು ನಡಹಳ್ಳಿ ದಕ್ಷತೆ, ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದ್ದಾರೆ. ಐದು ವರ್ಷದ ಅವಧಿಯಲ್ಲಿ ₹ 4,500 ಕೋಟಿ ಅನುದಾನ ತಂದು ದಾಖಲೆ ಬರೆದಿದ್ದಾರೆ ಎಂದು ಶ್ಲಾಘಿಸಿದರು.

ನಡಹಳ್ಳಿ ಬೆರಿಕೆ ಇದ್ದಾರೆ, ಕ್ಷೇತ್ರದ ಅಭಿವೃದ್ಧಿಗೆ ಚೆನ್ನಾಗಿ ರಾಜಕೀಯ ಮಾಡುತ್ತಾರೆ. ಇಲ್ಲ ಎನ್ನಲು ಆಗದಂತೆ ನಮ್ಮನ್ನು ಕಟ್ಟಿಹಾಕುತ್ತಾರೆ ಎಂದರು.

ನಾಲತವಾಡ ಪಟ್ಟದ 50 ಸಾವಿರ ಮತಗಳ ಅಂತರದಿಂದ ಆರಿಸಿ ತಂದರೆ ಅಭಿವೃದ್ಧಿ ಪರ್ವ ಮುಂದುವರಿಯಲಿದೆ. ಅದಕ್ಕೆ ನಿಮ್ಮ ಸಮ್ಮತಿಯ ಮುದ್ರೆ ಇದೆ ಎಂದು ತಿಳಿದುಕೊಳ್ಳುತ್ತೇನೆ. ಮುದ್ದೇಬಿಹಾಳ ಮಾದರಿಯಾಗಿ ಅಭಿವೃದ್ಧಿಪಡಿಸಲು ನಡಹಳ್ಳಿ ಆದ್ಯತೆ ನೀಡಿದ್ದಾರೆ. ನಿಮ್ಮ ಮತಕ್ಕೆ 100ಕ್ಕೆ 100ರಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಈ ಬಾರಿಯೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ₹1,600 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡಲಾಗುತ್ತಿದೆ ಎಂದರು. ವೀರೇಶ್ವರ ಶರಣರ ಮೂರ್ತಿ, ಬಸವೇಶ್ವರ ಮೂರ್ತಿ ಉದ್ಘಾಟನೆ, ನಾಲತವಾಡ ಬಸ್ ನಿಲ್ದಾಣ ಉದ್ಘಾಟನೆ ಮಾಡಲಾಗಿದೆ ಎಂದರು.

2008ರಲ್ಲಿ ನಾನು ಶಾಸಕನಾಗಿದ್ದಾಗ ನೀರಾವರಿ ಯೋಜನೆಗಾಗಿ ದೇವರ ಹಿಪ್ಪರಗಿಯಿಂದ ಆಲಮಟ್ಟಿಗೆ ಪಾದಯಾತ್ರೆ ಮತ್ತು ಬಂಡಿಯಾತ್ರೆ ಮಾಡಿದಾಗ ನನಗೆ ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಬೆಂಬಲ ನೀಡಿ, ₹ 1,800 ಕೋಟಿ ಅನುದಾನ ನೀಡಿ ಚಿಮ್ಮಲಗಿ, ಮುಳವಾಡ ಏತ ನೀರಾವರಿ ಯೋಜನೆಗೆ ಕಾರಣವಾಗಿದ್ದಾರೆ ಎಂದರು.

ಕಾಂಗ್ರೆಸ್‌ ಅವಧಿಯಲ್ಲಿ ಒಂದೇ ಒಂದು ಎಕರೆ ನೀರಾವರಿ ಆಗಿಲ್ಲ. ಆದರೆ, ನಾನು ಮಾಡಿದ್ದು ಎಂದು ಸುಳ್ಳು ಹೇಳುತ್ತಾ. ಮುದ್ದೇಬಿಹಾಳ ಕ್ಷೇತ್ರದ 21 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಆದ್ಯತೆ ನೀಡಿದ್ದು ನಮ್ಮ ಸರ್ಕಾರ ಎಂದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆ. ಇದುವರೆಗೆ ಕ್ಷೇತ್ರಕ್ಕೆ ₹3,600 ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದ 126 ಹಳ್ಳಿಯಲ್ಲಿ 118 ಹಳ್ಳಿಗಳಿಗೆ ಸಿಸಿ ರಸ್ತೆ, ಚರಂಡಿ ಮಾಡಿದ್ದೇನೆ. ಕ್ಷೇತ್ರಕ್ಕೆ 6 ಸಾವಿರ ಮನೆ ಮಂಜೂರಾಗಿದೆ. 28 ಗ್ರಾ.ಪಂ.ಗಳ 4 ಸಾವಿರ ಮನೆ ನಿರ್ಮಾಣ ಮಾಡಿದ್ದೇನೆ. ಮುದ್ದೇಬಿಹಾಳ ಭೂಮಿಯ ಕಣಕಣದಲ್ಲಿ ವಿಜಯನಗರದ ವೀರ ಸೈನಿಕರ ರಕ್ತ ಬೆರೆತಿದೆ. ಇದು ವೀರರ, ಶೂರರ ಭೂಮಿಯಾಗಿದೆ. ಇಲ್ಲಿಯ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.

ಕ್ಷೇತ್ರದ 10 ಸಾವಿರ ಮಹಿಳೆಯರಿಗೆ ಹಸುಗಳನ್ನು ಕೊಡಿಸುವ ಮೂಲಕ ಕ್ಷೀರ ಕ್ರಾಂತಿ ಮಾಡಲು ಉದ್ದೇಶಿಸಲಾಗಿದೆ. ಆಲಮಟ್ಟಿ, ನಾರಾಯಣಪುರ ಜಲಾಶಯದ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.

ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆ ಹೆಚ್ಚಿನ ನೀರಾವರಿ ಆಗಿದೆ. ರೈತರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಕೇಂದ್ರ, ರಾಜ್ಯ ಡಬಲ್ ಎಂಜಿನ್ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ಸರ್ಕಾರ ಮುಂದಿದೆ. ಉತ್ತಮ ರಸ್ತೆ, ಹೆದ್ದಾರಿಗಳು ಆಗಿವೆ ಎಂದರು.

ಶಾಸಕ ರಮೇಶ ಭೂಸನೂರ, ದ್ರಾಕ್ಷಿ ಮತ್ತು ವೈನ್ ಬೋರ್ಡ್‌ ಅಧ್ಯಕ್ಷ ಎಂ.ಎಸ್.ರುದ್ರಗೌಡ, ಎಂ.ಎಸ್.ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಇದ್ದಾರೆ.

ಫಲಾನುಭವಿಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಫಲಾನುಭವಿಗಳಿಗೆ ಮನೆ ಹಕ್ಕು ಪತ್ರ ವಿತರಿಸಿದರು. ಕುಡಿಯುವ ನೀರಿಗಾಗಿ ಬರಿಗಾಲಲ್ಲಿ ನಾಲ್ಕು ದಶಕದಿಂದ ಪ್ರತಿಭಟನೆ ನಡೆಸಿದ್ದ ಬಸವರಾಜ ನಂದಿಕೇಶ್ವರಮಠ ಅವರನ್ನು ಸಿಎಂ ಸನ್ಮಾನಿಸಿದರು. ಶಾಸಕ ನಡಹಳ್ಳಿ ಅವರು ಬೊಮ್ಮಾಯಿ ಅವರಿಗೆ ಆಕರ್ಷಕ ಹಸುವಿನ ಪ್ರತಿಕೃತಿ ನೀಡಿ ಸನ್ಮಾನಿಸಲಾಯಿತು. ಸಹಸ್ರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT