ಭಾನುವಾರ, ನವೆಂಬರ್ 28, 2021
19 °C

ಸಿಂದಗಿ: ರಮೇಶ ಭೂಸನೂರ ಪರ ಸಚಿವೆ ಶಶಿಕಲಾ ಜೊಲ್ಲೆ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂದಗಿ(ವಿಜಯಪುರ): ರಮೇಶ ಭೂಸನೂರ ಎರಡು ಬಾರಿ  ಶಾಸಕರಾಗಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಾಕಷ್ಟು ದುಡಿದಿದ್ದಾರೆ. ಅವರನ್ನೇ ಈ ಸಲ ಆಯ್ಕೆ ಮಾಡುವುದಾಗಿ ಮತದಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿಯ ಬಿಜೆಪಿ ಅಭ್ಯರ್ಥಿ ಚುನಾವಣಾ ಪ್ರಚಾರ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಭೂಸನೂರ ಅಧಿಕಾರದಲ್ಲಿರದಿದ್ದರೂ ಈ ಮೂರುವರೆ ವರ್ಷ ಜನಸೇವೆ ಮಾಡುವುದನ್ನು ನಿಲ್ಲಿಸಿಲ್ಲ. ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಈ ಹಿಂದಿನ ಅವರ ಅಧಿಕಾರದ 10 ವರ್ಷಗಳ ಅವಧಿಯಲ್ಲಿ ಮತಕ್ಷೇತ್ರದಲ್ಲಿ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದಾರೆ. ಅಂದು ಬಾಕಿ ಉಳಿದ ನೀರಾವರಿ ಯೋಜನೆ ಇನ್ನೂ ಹಾಗೇ ಇದೆ ಅವುಗಳನ್ನು ಈ ಬಾರಿ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 8-10 ದಿನಗಳಿಂದ ತಾವು ಪಾದಯಾತ್ರೆ ಕೈಗೊಂಡ ಗ್ರಾಮಗಳಲ್ಲಿ ಭೂಸನೂರ ಪರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದರು.

ಈ ಭಾಗದ ಭೀಮಾ ತೀರದಲ್ಲಿ 2019 ರಲ್ಲಿ ಪ್ರವಾಹ ಉಂಟಾಗಿ 2256 ಹೆಕ್ಟೆರ್ ಪ್ರದೇಶದಲ್ಲಿನ ಕಬ್ಬು, ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ, ಶೇಂಗಾ, ಹತ್ತಿ ಬೆಳೆಗಳು ನಾಶಗೊಂಡಿದ್ದು ಈಗಾಗಲೇ ₹ 3453.8 ಲಕ್ಷ  ಪರಿಹಾರ ಹಣ ನೇರ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಸ್ವತ: ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದಾಗ ಹಾಳಾಗಿರುವ ರಸ್ತೆ, ತಡೆಗೋಡೆ ಕಾಮಗಾರಿಗಳನ್ನು ಪ್ರಾರಂಭಿಸುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿರುವೆ. ಅದೇ ರೀತಿ 2020 ರ ಪ್ರವಾಹದ ಸಂದರ್ಭದಲ್ಲೂ 20952 ಹೆಕ್ಟೆರ್ ಕ್ಷೇತ್ರದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ಈಗಾಗಲೇ 28327 ರೈತರ 23758 ಹೆಕ್ಟೆರ್ ಪ್ರದೇಶದ ಜಮೀನುಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಪರಿಹಾರ ಶೀಘ್ರದಲ್ಲಿಯೇ ಜಮೆಯಾಗಲಿದೆ ಎಂದು ಹೇಳಿದರು.

ಮಹಾಪೂರದಿಂದ ಮುಳುಗಡೆಯಾಗಿರುವ ತಾರಾಪೂರ, ಬ್ಯಾಡಗಿಹಾಳ ಗ್ರಾಮದ ಸಂತ್ರಸ್ತರಿಗೆ 358 ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದೆ. ಈ ಪುನರ್ವಸತಿ ಕೇಂದ್ರಗಳನ್ನು ಸುಸಜ್ಜಿತಗೊಳಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭೂಸನೂರ ಅವರನ್ನು ಗೆಲ್ಲಿಸಿದರೆ ಅಭಿವೃದ್ಧಿಗೆ ಕೈಜೋಡಿಸಿದಂತಾಗುತ್ತದೆ ಎಂದು ಸಚಿವೆ ಜೊಲ್ಲೆ ಮನವಿ ಮಾಡಿಕೊಂಡರು.

ಲಲಿತಾ ಭೂಸನೂರ, ಶಿಲ್ಪಾ ಕುದರಗೊಂಡ, ಮಲ್ಲಮ್ಮ ಜೋಗೂರ, ವಿಜುಗೌಡ ಪಾಟೀಲ, ಈರಣ್ಣ ರಾವೂರ, ಘಟಕಾಂಬಳೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು