ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕ್ರಾಂತಿ ಮಾಡಿದ ಪಕ್ಷ ಕಾಂಗ್ರೆಸ್: ಸಚಿವ ಎಂ. ಬಿ. ಪಾಟೀಲ

Published 18 ಏಪ್ರಿಲ್ 2024, 14:35 IST
Last Updated 18 ಏಪ್ರಿಲ್ 2024, 14:35 IST
ಅಕ್ಷರ ಗಾತ್ರ

ತಿಕೋಟಾ: ‘ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಮಾತ್ರವಲ್ಲ, ಸೂಜಿಯಿಂದ ಹಿಡಿದು ವಿಮಾನ ತಯಾರಿಕೆವರೆಗೆ ಕೈಗಾರಿಕೆ ಕ್ರಾಂತಿ ಮಾಡಿದ ಪಕ್ಷವಾಗಿದೆ’ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಲೋಕಸಭಾ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.

‘ಬಿಜೆಪಿಯವರು ಕಾಂಗ್ರೆಸ್ ದೇಶಕ್ಕೆ ಏನು ಮಾಡಿದೆ ಎಂದು ಕೇಳುತ್ತಾರೆ. ಸ್ವಾತಂತ್ರ್ಯ ನಂತರ ವಿದೇಶಗಳಿಂದ ಗೋಧಿ ಆಮದು ಮಾಡುವ ಪರಿಸ್ಥಿತಿ ಇತ್ತು. ದೇಶದಲ್ಲಿ ಒಂದು ಸೂಜಿಯೂ ಉತ್ಪಾದನೆಯಾಗುತ್ತಿರಲಿಲ್ಲ. ನೆಹರೂ ಹಸಿರು ಕ್ರಾಂತಿ ಮೂಲಕ ಹಸಿದ ಹೊಟ್ಟೆಗಳಿಗೆ ಅನ್ನ ಹಾಕಿದರು. ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿ ಭಾರತವನ್ನು  ಆರ್ಥಿಕವಾಗಿ ಸಬಲವನ್ನಾಗಿ ಮಾಡಿದರು. ಇಂದಿರಾ ಗಾಂಧಿ ರೇಷನ್ ಕಾರ್ಡ್, ಮನೆ, ವೃದ್ದಾಪ್ಯ ವೇತನ ನೀಡಿದರು. ಭಾರತ ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಸಂಪರ್ಕ ಕ್ರಾಂತಿ ಮಾಡಿದರು. ಮನಮೋಹನಸಿಂಗ್ ಆಹಾರ ಭದ್ರತೆ, ರೈತರ ಸಾಲಮನ್ನಾ ಮಾಡಿದರು’ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ‘ಇದು ಬಹು ಮುಖ್ಯ ಚುನಾವಣೆ. ಕೋಮು ಭಾವನೆ ಕೆರಳಿಸುವ ಸರ್ಕಾರ ಬೇಕೊ? ಅಭಿವೃದ್ಧಿ, ನೆಮ್ಮದಿ ಬೇಕೋ? ನಿರ್ಧರಿಸಿ. ಉದ್ಯಮಿಗಳಿಗೆ ಅನುಕೂಲವಾಗುವ ಸ್ಥಿತಿಯಿಂದ ಹೊರ ಬಂದು ಆರ್ಥಿಕ ಸಬಲತೆಗಾಗಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ವಿನಂತಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಮಾತನಾಡಿ,  ‘ಎಂ.ಬಿ.ಪಾಟೀಲರ ಅಭಿವೃದ್ಧಿ ಕೆಲಸಗಳು ನನ್ನ ಗೆಲುವಿಗೆ ಕಾರಣವಾಗಲಿವೆ. ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾಗಿವೆ. ದೇಶದಲ್ಲಿ ಯಾವ ರಾಜ್ಯಗಳೂ ನೀಡದ ಅಭಿವೃದ್ಧಿ ಮತ್ತು ಜನಪರ ಯೋಜನೆಗಳನ್ನು ಕರ್ನಾಟಕ ಸರ್ಕಾರ ಮಾಡಿದೆ. ಹೀಗಾಗಿ ನನಗೆ ಮತ ಕೇಳುವ ನೈತಿಕತೆಯಿದೆ’ ಎಂದರು.

ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ಗೌಡನವರ, ಮುಖಂಡರಾದ ಸೋಮನಾಥ ಬಾಗಲಕೋಟ, ಆರ್. ಜಿ. ಯರನಾಳ, ಬಸಯ್ಯ ವಿಭೂತಿ, ಭೀಮಣ್ಣ ಹಂಗರಗಿ, ವಿದ್ಯಾರಾಣಿ ತುಂಗಳ, ಭಾಗೀರತಿ ತೇಲೆ, ಜಕ್ಕಪ್ಪ ಯಡವೆ, ಸಿದ್ದಪ್ಪ ಬೆಪಗಾವಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT