ಸೋಮವಾರ, ಸೆಪ್ಟೆಂಬರ್ 26, 2022
22 °C
ಕೆರೆ-ಕಟ್ಟೆ, ತೆರೆದ ಬಾವಿಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆ ಬೇಡ

ಗಜಮುಖನ ಪ್ರತಿಷ್ಠಾಪನೆ; ಭಕ್ತಿಯ ಆರಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ಗಜಾನನನ್ನು ಮನೆ, ದೇವಸ್ಥಾನ, ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಲ್ಲಿ ನಿರ್ಮಿಸಿರುವ ಪೆಂಡಾಲ್‌ಗಳಿಗೆ ಭಕ್ತಿ, ಭಾವದಿಂದ ಆಹ್ವಾನ ಮಾಡಿ ಪ್ರತಿಷ್ಠಾಪಿಸಲಾಯಿತು.

ತೆರೆದ ವಾಹನಗಳಲ್ಲಿ ಗಣೇಶನ ಮೂರ್ತಿಗಳನ್ನು ಇರಿಸಿ ಭಜನೆ, ಬಾಜಾ ಭಜಂತ್ರಿ, ಡೊಳ್ಳಿನ ವಾದ್ಯ, ಡಿಜೆ, ಗುಲಾಲಿನ ರಂಗು, ಟಪ್ಪಾಂಗುಚ್ಚಿ ನೃತ್ಯದೊಂದಿಗೆ ಸಾಲು, ಸಾಲಾಗಿ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿ, ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಗಣೇಶೋತ್ಸವ ಸಮಿತಿಗಳು ಆಕರ್ಷಕ ಪೆಂಡಾಲ್‌, ಮಂಟಪಗಳನ್ನು ನಿರ್ಮಿಸಿ, ವೈವಿಧ್ಯಮಯವಾದ ವಿದ್ಯುತ್‌ ದೀಪಗಳಿಂದ ಆಲಂಕರಿಸಿದ್ದು, ನೋಡುಗರ ಗಮನ ಸೆಳೆಯುತ್ತಿವೆ. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.

ಗುರುವಾರ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನ ಕಾರ್ಯಕ್ರಮಗಳು ನಡೆದವು. ಭಕ್ತರು ಕುಟುಂಬ ಸಮೇತರಾಗಿ ಭೇಟಿ ನೀಡಿ, ಗಣಪನ ದರ್ಶನ ಪ‍ಡೆದರು.

ರಾತ್ರಿ ವೇಳೆ ಸುರಿದ ಧಾರಾಕಾರ ಮಳೆ ಮತ್ತು ವಿದ್ಯುತ್‌ ಕೈಕೊಟ್ಟ ಕಾರಣ ಪೆಂಡಾಲ್‌ಗಳಲ್ಲಿ ಸಾರ್ವಜನಿಕ ಉತ್ಸವ ಸಮಿತಿಯ ಪದಾಧಿಕಾರಿಗಳಿಗೆ ತೊಂದರೆಯಾಯಿತು.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಮನವಿ 

ಕೆರೆ-ಕಟ್ಟೆ ಮತ್ತು ತೆರೆದ ಬಾವಿಗಳಲ್ಲಿ ಸಾರ್ವಜನಿಕರು ಗಣೇಶ ವಿಗ್ರಹಗಳ ವಿಸರ್ಜನೆ ಮಾಡಬಾರದು ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌ ಮನವಿ ಮಾಡಿದ್ದಾರೆ.

ಬಣ್ಣ ಮತ್ತು ರಸಾಯನಲೇಪಿತ ಮೂರ್ತಿಗಳನ್ನು ವಿಸರ್ಜನೆ ಮಾಡಿದಲ್ಲಿ ಕೆರೆ ಮತ್ತು ಬಾವಿಯ ನೀರಿನಲ್ಲಿರುವ ಅಸಂಖ್ಯೆ ಜೀವರಾಶಿಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಗಣೇಶ ವಿಗ್ರಹಗಳ ವಿಸರ್ಜನೆ ಕಾರ್ಯಕ್ರಮ ನಡೆಯುವಂತಾಗಬೇಕು. ಕೃತಕ ಹೊಂಡಗಳು ಸುಭದ್ರವಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಹೊಂಡದ ಸುತ್ತಲು ಸಾಕಷ್ಟು ಸ್ಥಳವಕಾಶವಿರುವ ಹಾಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕೆ ಅವರೊಂದಿಗೆ ನಗರದ
ತಾಜ್‌ ಬಾವಡಿ ಸೇರಿದಂತೆ ವಿವೆಧೆಡೆ ತೆರಳಿ, ಮಹಾನಗರ ಪಾಲಿಕೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ ಹೊಂಡಗಳ ಹಾಗೂ ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನ ವ್ಯವಸ್ಥೆಯ ಸಮಗ್ರ ಮಾಹಿತಿ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು