ಶುಕ್ರವಾರ, ಜುಲೈ 30, 2021
26 °C
ರಾಜ್ಯ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್

ಕೋವಿಡ್ 3ನೇ ಅಲೆ; ಸೂಕ್ತ ಸಿದ್ಧತೆಗೆ ಸೂಚನೆ: ಉಪಲೋಕಾಯುಕ್ತ ಬಿ.ಎಸ್.ಪಾಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್ ಸಂದಿಗ್ಧ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಶ್ರಮಿಸುತ್ತಿರುವ ಜಿಲ್ಲಾಡಳಿತದ ಕ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಉಪಲೋಕಾಯುಕ್ತ ಬಿ. ಎಸ್. ಪಾಟೀಲ್, ಮುಂಬರುವ ಕೋವಿಡ್ ಮೂರನೇ ಅಲೆ ನಿಭಾಯಿಸಲು ಸೂಕ್ತ ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಕ್ರಮಗಳು ಮತ್ತು ಲಸಿಕಾಕರಣದ ಬಗ್ಗೆ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮಕ್ಕಳು ಈ ದೇಶದ ಮುಂದಿನ ನಾಗರಿಕರು ಆಗಿರುವುದರಿಂದ ವಿಶೇಷ ಗಮನ ನೀಡಬೇಕು. ಆರೋಗ್ಯ, ಕಂದಾಯ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಖಾಸಗಿ ಆಸ್ಪತ್ರೆಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸಿದ್ಧಗೊಳ್ಳಬೇಕು. ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ನಿಯಂತ್ರಣ ಕುರಿತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದರು.

ಕಪ್ಪು ಶಿಲೀಂದ್ರ ರೋಗಿಗಳ ಮತ್ತು ಲಸಿಕಾ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ಪಡೆದ ಅವರು, ಮುಂದಿನ ದಿನಗಳಲ್ಲಿ ಆಮ್ಲಜನಕ ಕೊರತೆಯಾಗದಂತೆ ಈಗಿನಿಂದಲೇ ಯೋಜನೆ ರೂಪಿಸಿಕೊಳ್ಳಬೇಕು. ವೆಂಟಿಲೇಟರ್‌ ವ್ಯವಸ್ಥೆ ಮಾಡಿಕೊಳ್ಳಬೇಕು.  ಈ ಹಿಂದೆ ಆಗಿರುವಂತಹ ಲೋಪದೋಷಗಳನ್ನು ಸರಿಪಡಿಸಿಕೊಂಡು ಕೋವಿಡ್ 3ನೇ ಅಲೆ ಎದುರಿಸಲು ಸಜ್ಜಾಗಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 3.42 ಲಕ್ಷ ಜನರು ಕೋವಿಡ್ ಲಸಿಕೆ  ಪಡೆದಿದ್ದಾರೆ. ಆಟೋ ಚಾಲಕರು, ಬೀದಿಬದಿ ವ್ಯಾಪಾರಸ್ಥರು, ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಸೇರಿದಂತೆ ವಿವಿಧ ವರ್ಗಗಳ 18 ರಿಂದ 44 ವಯೋಮಾನದವರಿಗೆ ಲಸಿಕಾ ಮೇಳ ಆಯೋಜಿಸಲಾಗುತ್ತಿದೆ ಎಂದರು. 

ಜಿಲ್ಲಾ ಪಂಚಾಯ್ತಿ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ,  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಪಡೆಗಳನ್ನು ರಚಿಸಿ ಸೂಕ್ತ ತಿಳಿವಳಿಕೆ ಮತ್ತು ಕೋವಿಡ್ ಲಕ್ಷಣ ಹೊಂದಿದವರಿಗೆ, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕಾರ್ಯಪಡೆಗಳು ಪ್ರತಿ ಮನೆಗೆ ಮೂರು ಬಾರಿ ತೆರಳಿ ಸೂಕ್ತ ತಿಳಿವಳಿಕೆ ನೀಡಿದ್ದು, ಗ್ರಾಮಮಟ್ಟದಲ್ಲಿ ಆಹಾರ ಕಿಟ್‌ಗಳನ್ನು ಸಹ ವಿತರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆದು ಸೂಕ್ತ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಬಾಬು ಲಮಾಣಿ, ಮಹಾನಗರಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ. ಶರಣಪ್ಪ ಕಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪಸೆ, ಡಾ. ಸಂಪತ್ ಕುಮಾರ್ ಗುಣಾರಿ, ಡಾ. ಬಿರಾದಾರ, ಡಾ. ಲಕ್ಕಣ್ಣವರ್, ಡಾ. ನಾಗರಬೆಟ್ಟ ಸಭೆಯಲ್ಲಿ ಉಪಸ್ಥಿತರಿದ್ದರು.

***

ಮುಂಬರುವ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ಜನರಲ್ಲಿ ಹೆಚ್ಚಿನ ತಿಳಿವಳಿಕೆ ನೀಡಬೇಕು. ‌ಗ್ರಾಮ ಮಟ್ಟದ ವೈದ್ಯರು ಪಿಡಿಓಗಳು ಹಾಗೂ ಸಂಬಂಧಪಟ್ಟ ಕಾರ್ಯಪಡೆಗಳ ಮೂಲಕ ಜಾಗೃತಿ ಮೂಡಿಸಬೇಕು

–ಬಿ. ಎಸ್. ಪಾಟೀಲ್, ಉಪಲೋಕಾಯುಕ್ತ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು