ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | 10 ಸಾವಿರ ಮಹಿಳೆಯರಿಗೆ ಹಸು: ನಡಹಳ್ಳಿ

ಮುದ್ದೇಬಿಹಾಳ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ
Last Updated 21 ಮಾರ್ಚ್ 2023, 14:29 IST
ಅಕ್ಷರ ಗಾತ್ರ

ವಿಜಯಪುರ: ಮುದ್ದೇಬಿಹಾಳ ಮತ ಕ್ಷೇತ್ರದ 10 ಸಾವಿರ ಮಹಿಳೆಯರಿಗೆ ಹಸುಗಳನ್ನು ಕೊಡಿಸುವ ಮೂಲಕ ಕ್ಷೀರ ಕ್ರಾಂತಿ ಮಾಡಲು ಉದ್ದೇಶಿಸಲಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ನಾಲತವಾಡದ ಶ್ರೀ ಶರಣ ವೀರೇಶ್ವರ ಮಹಾವಿದ್ಯಾಲಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಲಮಟ್ಟಿ, ನಾರಾಯಣಪುರ ಜಲಾಶಯದ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಲಾಗುವುದು ಎಂದರು.

2008ರಲ್ಲಿ ನಾನು ಪ್ರಥಮ ಶಾಸಕನಾಗಿದ್ದಾಗ ನೀರಾವರಿ ಯೋಜನೆಗಾಗಿ ದೇವರ ಹಿಪ್ಪರಗಿಯಿಂದ ಆಲಮಟ್ಟಿಗೆ ಪಾದಯಾತ್ರೆ ಮತ್ತು ಬಂಡಿಯಾತ್ರೆ ಮಾಡಿದಾಗ ನನಗೆ ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಬೆಂಬಲ ನೀಡಿದ ಪರಿಣಾಮ ಈ ಭಾಗ ಇಂದು ನೀರಾವರಿಗೆ ಒಳಪಟ್ಟಿದೆ ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ಒಂದೇ ಒಂದು ಎಕರೆ ನೀರಾವರಿ ಆಗಿಲ್ಲ. ಆದರೆ, ನಾನು ಮಾಡಿದ್ದು ಎಂದು ಸುಳ್ಳು ಹೇಳುತ್ತಾರೆ. ಮುದ್ದೇಬಿಹಾಳ ಕ್ಷೇತ್ರದ 21 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಆದ್ಯತೆ ನೀಡಿದ್ದು ನಾನು ಮತ್ತು ನಮ್ಮ ಸರ್ಕಾರ. ಈ ಬಗ್ಗೆ ದಾಖಲೆ ನೀಡುತ್ತೇನೆ ಎಂದು ಸಮರ್ಥಿಸಿಕೊಂಡರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಮುದ್ದೇಬಿಹಾಳ ಕ್ಷೇತ್ರಕ್ಕೆ ಕೇಳಿದಷ್ಟು ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ್ದಾರೆ. ಇದುವರೆಗೆ ಕ್ಷೇತ್ರಕ್ಕೆ ₹3600 ಕೋಟಿ ಅನುದಾನ ತಂದಿದ್ದೇನೆ ಎಂದರು.

ಕ್ಷೇತ್ರದ 126 ಹಳ್ಳಿಯಲ್ಲಿ 118 ಹಳ್ಳಿಗಳಿಗೆ ಸಿಸಿ ರಸ್ತೆ, ಚರಂಡಿಯನ್ನು ₹ 380 ಕೋಟಿ ಅನುದಾನದಲ್ಲಿ ಮಾಡಿದ್ದೇನೆ. ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ 6 ಸಾವಿರ ಮನೆ ಮಂಜೂರಾಗಿದೆ. ಇದೀಗ 28 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 4 ಸಾವಿರ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕೆ ಆದೇಶ ಪತ್ರವನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೂಲಕ ನೀಡಲಾಗುತ್ತಿದೆ ಎಂದು ಹೇಳಿದರು.

ಮುದ್ದೇಬಿಹಾಳ ಭೂಮಿಯ ಕಣಕಣದಲ್ಲಿ ವಿಜಯನಗರದ ವೀರ ಸೈನಿಕರ ರಕ್ತ ಬೆರೆತಿದೆ. ಇದು ವೀರರ, ಶೂರರ ಭೂಮಿಯಾಗಿದೆ. ಇಲ್ಲಿಯ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸಲು ಸರ್ಕಾರ ಆದ್ಯತೆ ನೀಡಿದೆ ಎಂದರು.

***

ಉತ್ತರ ಕರ್ನಾಟಕದ ನಾಯಕ ನಡಹಳ್ಳಿ

ವಿಜಯಪುರ: ಶಾಸಕ ನಡಹಳ್ಳಿ ನನ್ನ ಕಿರಿಯ ಸಹೋದರನಿದ್ದಂತೆ, ಅವರು ಹಂತಹಂತವಾಗಿ ಬೆಳೆದು ಬಂದ ಹಾದಿ ನೋಡಿದ್ದೇನೆ, ಎಲ್ಲರ ಹೃದಯ ಗೆದ್ದು ಉತ್ತರ ಕರ್ನಾಟಕದ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾಲತವಾಡದಲ್ಲಿ ಮಂಗಳವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಒಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹೇಗೆ ಮಾಡಬಹುದು ಎಂಬುದಕ್ಕೆ ನಡಹಳ್ಳಿ ಮತ್ತು ಮುದ್ದೇಬಿಹಾಳ ಸೂಕ್ತ ಉದಾಹರಣೆಯಾಗಿದೆ. ಮುದ್ದೇಬಿಹಾಳದ ರೀತಿ ರಾಜ್ಯದ ಎಲ್ಲ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ ಎಂದರು.

ಮುದ್ದೇಬಿಹಾಳ ಕ್ಷೇತ್ರದ ಭವ್ಯ ಭವಿಷ್ಯ ಬರೆಯಲು ನಡಹಳ್ಳಿ ದಕ್ಷತೆ, ಪ್ರಾಮಾಣಿಕತೆಯಿಂದ ಶ್ರಮಿಸುತ್ತಿದ್ದಾರೆ. ಐದು ವರ್ಷದ ಅವಧಿಯಲ್ಲಿ ₹4500 ಕೋಟಿ ಅನುದಾನ ತಂದು ದಾಖಲೆ ಬರೆದಿದ್ದಾರೆ ಎಂದು ಹೇಳಿದರು.

ನಡಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಚನ್ನಾಗಿ ರಾಜಕೀಯ ಮಾಡುತ್ತಾರೆ, ಇಲ್ಲ ಎನ್ನಲು ಆಗದಂತೆ ನಮ್ಮನ್ನು ಕಟ್ಟಿಹಾಕುತ್ತಾರೆ ಎಂದರು.

ಈ ಬಾರಿಯ ಚುನಾವಣೆಯಲ್ಲಿ ನಡಹಳ್ಳಿ ಅವರನ್ನು 50 ಸಾವಿರ ಮತಗಳ ಅಂತರದಿಂದ ಆರಿಸಿ ತಂದರೆ ಅಭಿವೃದ್ಧಿ ಪರ್ವ ಮುಂದುವರಿಯಲಿದೆ. ಅದಕ್ಕೆ ನಿಮ್ಮ ಸಮ್ಮತಿಯ ಮುದ್ರೆ ಇದೆ ಎಂದು ತಿಳಿದುಕೊಳ್ಳುತ್ತೇನೆ ಎಂದರು.

ಮುದ್ದೇಬಿಹಾಳ ಮಾದರಿಯಾಗಿ ಅಭಿವೃದ್ಧಿ ಪಡಿಸಲು ನಡಹಳ್ಳಿ ಆದ್ಯತೆ ನೀಡಿದ್ದಾರೆ. ನಿಮ್ಮ ಮತಕ್ಕೆ 100ಕ್ಕೆ 100ರಷ್ಟು ಕೆಲಸ ಮಾಡಿದ್ದಾರೆ. ಅವರನ್ನು ಈ ಬಾರಿಯೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT