ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುಬೂದಿ ಬೆಳೆಗೆ ಹಾನಿ; ತಜ್ಞರ ಸಮಿತಿ ಸಮೀಕ್ಷೆ

ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಗ್ರಾಮಾಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ
Last Updated 1 ಸೆಪ್ಟೆಂಬರ್ 2021, 15:32 IST
ಅಕ್ಷರ ಗಾತ್ರ

ವಿಜಯಪುರ: ಕೂಡಗಿ ಎನ್.ಟಿ.ಪಿ.ಸಿ. ಬೃಹತ್‌ ಕೆರೆಗಳಲ್ಲಿ ಸಂಗ್ರಹವಾಗುವ ಹಾರುಬೂದಿ ಇಂಗುವಿಕೆಯಿಂದ ಅಕ್ಕ-ಪಕ್ಕದ ಜಮೀನುಗಳಲ್ಲಿ ಬೆಳೆಗಳು ಹಾಳಾಗುತ್ತಿರುವ ಬಗ್ಗೆ ತಜ್ಞರ ಸಮಿತಿ ನೇಮಿಸಿ ಅಧ್ಯಯನ ವರದಿ ಪಡೆದು, ಅಗತ್ಯ ಕ್ರಮ ಕೈಗೊಳ್ಳಲು ಮಂಗಳವಾರ ನಡೆದ ಒಂಬತ್ತನೇ ಗ್ರಾಮಾಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸವಳು-ಜವಳು ಭೂಮಿ ಮಾರ್ಪಾಡಾಗುತ್ತಿರುವ ಬಗ್ಗೆ ತಜ್ಞರ ಸಮಿತಿಯಿಂದ ಪರಿಶೀಲಿಸಿ, ವರದಿಯನ್ನು ಸಲ್ಲಿಸಲು ಎನ್.ಟಿ.ಪಿ.ಸಿ ಅಧಿಕಾರಿಗಳಿಗೆಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ಸೂಚಿಸಿದರು.

ಎನ್.ಟಿ.ಪಿ.ಸಿ.ಯಿಂದ ಬರುವ ಹಾರು ಬೂದಿ ಮತ್ತು ಸಾಗಾಣಿಕೆ ಮಾಡುವ ವಾಹನಗಳ ಸಂಚಾರದಿಂದ ಹಾಳಾಗುತ್ತಿರುವ ಅಕ್ಕ-ಪಕ್ಕದ ಜಮೀನುಗಳಲ್ಲಿನ ವೀಳ್ಯಾದ ಎಲೆ, ಉಳ್ಳಾಗಡ್ಡಿ ಮತ್ತು ಇತರ ಬೆಳೆಗಳ ಮೇಲೆ ಸಂಗ್ರಹವಾದ ಬೂದಿಯನ್ನು ಸ್ವಚ್ಛತೆಗೊಳಿಸಲು ಅಗತ್ಯ ಕ್ರಮವಹಿಸುವಂತೆ ತಿಳಿಸಿದರು.

ಹಾರು ಬೂದಿಯನ್ನು ಸಾಗಾಣಿಕೆ ಮಾಡುವ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿದ್ದು, ಈ ಬಗ್ಗೆಯೂ ಗಮನಹರಿಸಿ ಸೂಕ್ತ ನಿರ್ವಹಣೆ ಮಾಡಿಕೊಳ್ಳಲು ಎನ್.ಟಿ.ಪಿ.ಸಿ. ಅಧಿಕಾರಿಗಳಿಗೆ ಸೂಚಿಸಿದರು.

2017-18 ನೇ ಸಾಲಿನಿಂದ ಇಲ್ಲಿಯವರೆಗೆ ಗ್ರಾಮ ಪಂಚಾಯ್ತಿಗಳಿಗೆ ತೆರಿಗೆ ನೀಡಿಲ್ಲ. ಬಾಕಿ ಇರುವ ₹ 18,17,19.824 ಅನ್ನು ಸೆಪ್ಟೆಂಬರ್ 30 ರೊಳಗಾಗಿ ಸಂದಾಯ ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು.

ಎನ್.ಟಿ.ಪಿ.ಸಿ. ವ್ಯಾಪ್ತಿಯಲ್ಲಿ ಬರುವ ಐದು ಗ್ರಾಮಗಳ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು. ನಿರುದ್ಯೋಗಿ ಯುವಕರಿಗೆ ಸಿ.ಎಸ್.ಆರ್. ನಿಧಿಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ನೀಡಬೇಕು. ಗ್ರೂಫ್ ಸಿ ಮತ್ತು ‘ಡಿ’ ದರ್ಜೆಯ ಹುದ್ದೆಗಳ ವಿವರಗಳನ್ನು ಪಟ್ಟಿ ಮಾಡಿ ತಮ್ಮ ಕಚೇರಿಗೆ ಮಾಹಿತಿ ನೀಡಬೇಕು ಎಂದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯವನ್ನು ಕೇವಲ ಐದು ವರ್ಷಕ್ಕೆ ಸೀಮಿತಗೊಳಿಸದೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಎನ್.ಟಿ.ಪಿ.ಸಿ. ಘಟಕದ ಲಾಭ ಮತ್ತು ನಷ್ಟದ ಲೆಕ್ಕಾಚಾರವನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಕೂಡಗಿ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾರ್ಯವು ಅರ್ಧಕ್ಕೆ ನಿಂತಿರುವುದಲ್ಲದೆ, ಇದಕ್ಕೆ ಹೊಂದಿಕೊಂಡು ಸಂಪರ್ಕ ರಸ್ತೆಯು ದೊರಕದೆ, ಮಳೆ ನೀರು ನಿಂತು ಸಂಚಾರಕ್ಕೆ ಮತ್ತು ಜನರ ಬಳಕೆ ತೀವ್ರ ಅನಾನೂಕೂಲತೆ ಉಂಟಾಗಿರುತ್ತದೆ ಎಂದು ಶಾಸಕರು ದೂರಿದರು.

ಈ ಕಾಮಗಾರಿ ನ್ಯೂನ್ಯತೆ ಸರಿಪಡಿಸಿ ಆದ್ಯತೆ ಮೇರೆಗೆ ಮುಕ್ತಾಯಗೊಳಿಸಿ, ಸಾರ್ವಜನಿಕ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಎನ್.ಟಿ.ಪಿ.ಸಿ. ಅಧಿಕಾರಿಗಳಿಗೆ ಸೂಚಿಸಿದರು.

ಎನ್.ಟಿ.ಪಿ.ಸಿಯಿಂದ ಐದು ಗ್ರಾಮಗಳಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದ್ದು, ಒಂದು ಗ್ರಾಮಕ್ಕೆ ಹೆಚ್ಚಿಗೆ ಮತ್ತು ಒಂದು ಗ್ರಾಮಕ್ಕೆ ಕಡಿಮೆ ಜನರಿಗೆ ಉದ್ಯೋಗ ಕಲ್ಪಿಸಿರುವ ಬಗ್ಗೆ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮವಹಿಸಲು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ, ಕೋಲ್ದಾರ ತಹಶೀಲ್ದಾರ್‌ ಎಸ್.ಡಿ.ಮುರಾಳ, ಬಸವನ ಬಾಗೇವಾಡಿ ತಹಶೀಲ್ದಾರ್‌ ಎಂ.ಎನ್.ಬಳಿಗಾರ, ನಿಡಗುಂದಿ ತಹಶೀಲ್ದಾರ್‌ ಎಸ್.ಬಿ. ಕೂಡಲಗಿ, ಕೆ.ಜೆ.ರೆಡ್ಡಿ, ವಿ.ಜಯನಾರಾಯಣ, ಬಿ.ಆರ್.ರಾವ್, ಎಂ.ಎಚ್.ಮಂಜುನಾಥ ಸಭೆಯಲ್ಲಿ ಉಪಸ್ಥಿತರಿರು.

ರೈತರ ಹೊರಗಿಟ್ಟು ಸಭೆ; ಆಕ್ರೋಶ

ಕೊಲ್ಹಾರ: ತಾಲ್ಲೂಕಿನ ಕೂಡಗಿ ಎನ್‌ಟಿಪಿಸಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮಾಭಿವೃದ್ಧಿ ಸಲಹಾ ಸಮಿತಿ (ವಿ.ಡಿ.ಎ.ಸಿ) ಸಭೆಯಲ್ಲಿ ತಮ್ಮ ನೋವು, ಸಂಕಷ್ಟಗಳನ್ನು ತೋಡಿಕೊಳ್ಳಲು ಬಂದಿದ್ದ ಬಾಧಿತ ಗ್ರಾಮದ ಸಂತ್ರಸ್ತರು ಹಾಗೂ ರೈತರಿಗೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೇಇರುವುದು ಆಕ್ರೋಶಕ್ಕೆ ಕಾರಣವಾಯಿತು.

ಸಂತ್ರಸ್ತರ ಧ್ವನಿ ಹತ್ತಿಕ್ಕುವ ಕುತಂತ್ರವನ್ನು ಅಧಿಕಾರಿಗಳು ನಡೆಸಿದ್ದಾರೆ ಎಂದು ರೈತರು ಆರೋಪಿಸಿದರು.

‘ಬಾಧಿತ ಗ್ರಾಮಗಳಿಗೆ ಉಚಿತ ವಿದ್ಯುತ್, ಸಂತ್ರಸ್ತರ ಮಕ್ಕಳಿಗೆ ಉದ್ಯೋಗಾವಕಾಶ ಸೇರಿದಂತೆ ಹಲವು ಭರವಸೆಗಳು ಇನ್ನೂ ಸಾಕಾರಗೊಂಡಿಲ್ಲ. ಮಸೂತಿ ಭಾಗದಲ್ಲಿ ಸ್ಥಾಪಿಸಿರುವ ಬೂದಿ ಸಂಗ್ರಹಿಸುವ ಕೆರೆಗಳಿಂದ ಈ ಭಾಗದ 200-300 ಎಕರೆ ಫಲವತ್ತಾದ ಕೃಷಿ ಭೂಮಿ ಸವುಳ, ಜವುಳ ಸಮಸ್ಯೆಯಿಂದ ಹಾಳಾಗಿವೆ. ಈ ಜಮೀನುಗಳ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT