ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಹಿಪ್ಪರಗಿ: ನಿವೃತ್ತ ನೌಕರನ ನುಗ್ಗೆ ಕೃಷಿ

Published 8 ಮಾರ್ಚ್ 2024, 5:43 IST
Last Updated 8 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ನಿವೃತ್ತಿಯ ನಂತರ ವಿಶ್ರಾಂತ ಜೀವನಕ್ಕೆ ಅಂಟಿಕೊಳ್ಳದೇ ಕೃಷಿ ಕಾಯಕದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ನುಗ್ಗೆ, ದಾಳಿಂಬೆ ಬೆಳೆಯುವುದರ ಮೂಲಕ ಗುರುಬಸಯ್ಯ ಹಿರೇಮಠ ಹಿರಿಯ ರೈತರಾಗಿ ಗುರುತಿಸಿಕೊಂಡಿದ್ದಾರೆ.

ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಕಳೆದ 3 ವರ್ಷಗಳಿಂದ ಕೃಷಿಯಲ್ಲಿ ನಿರತರಾಗಿರುವ ಗುರುಬಸಯ್ಯ ಅವರೇ ಹೇಳುವಂತೆ, ತಮ್ಮ ಒಟ್ಟು 4 ಎಕರೆ ಜಮೀನಿನಲ್ಲಿ 3 ಎಕರೆಯಲ್ಲಿ 900 ದಾಳಿಂಬೆ ಗಿಡಗಳು ಹಾಗೂ 850 ನುಗ್ಗೆ ಗಿಡಗಳನ್ನು ಬೆಳೆಸಲಾಗಿದೆ. ಒಂದು ಎಕರೆಯಲ್ಲಿ 70 ಅಡಿ ಆಳದ ಒಂದು ಬಾವಿ, ಮನೆ ಹಾಗೂ 40 ವರ್ಷ ಹಿಂದಿನ 100ಕ್ಕೂ ಹೆಚ್ಚಿನ ತೆಂಗಿನ ಮರಗಳಿವೆ.

‘ನಾನು ಸಿಂದಗಿ ಎಚ್.ಜಿ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಹುದ್ದೆಯಿಂದ ನಿವೃತ್ತನಾದ ನಂತರ 8 ವರ್ಷಗಳವರೆಗೆ ಜಮೀನನ್ನು ರೈತರಿಗೆ ಪಾಲಿನ ರೀತಿಯಿಂದ ಕೊಟ್ಟು ಕೃಷಿ ಮಾಡಿಸುತ್ತಿದ್ದೆ. ಈಗ ಕಳೆದ 3 ವರ್ಷದಿಂದ ಒಬ್ಬರನ್ನು ಸಹಾಯಕನನ್ನಾಗಿ ಇಟ್ಟುಕೊಂಡು ಸ್ವತಃ ನಾನೇ ಕೃಷಿ ಕಾರ್ಯಕ್ಕೆ ಇಳಿದಿದ್ದೇನೆ. ಕೃಷಿ ಕಾರ್ಯದಲ್ಲಿ ಆರಂಭದಲ್ಲಿಯೇ ಹೆಚ್ಚಿನ ಆದಾಯ ನಿರೀಕ್ಷಿಸಬಾರದು. ಒಂದು ಹಂತದವರೆಗೆ ನಾವು ಅಂದುಕೊಂಡಷ್ಟು ಫಸಲು, ಬೆಂಬಲ ಬೆಲೆ ಬರದೇ ಇರಬಹುದು. ಆದರೆ ಕೃಷಿಯಲ್ಲಿ ವಿನಿಯೋಗಿಸಿದ ಹಣಕ್ಕೆ ಮೋಸವಾಗಲಾರದು. ಭೂಮಿ ತನಗಾಗಿ ವಿನಿಯೋಗ ಮಾಡಿದ ಎರಡರಷ್ಟು ಹಣವನ್ನು ನಮಗೆ ನೀಡುತ್ತದೆ. ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ತಾಳ್ಮೆ ಇರಬೇಕು ಅಷ್ಟೇ. ಕೃಷಿ ಎನ್ನುವುದು ಕಾಸಿಗಾಗಿ ಮಾತ್ರವಲ್ಲ ಅದು ನನ್ನ ಖುಷಿಗಾಗಿ ಇದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

ಕಳೆದ 11 ತಿಂಗಳುಗಳ ಹಿಂದೆ ನೆಟ್ಟ ನುಗ್ಗೆ ಗಿಡಗಳಲ್ಲಿ ಈಗ ಕಾಯಿ ತುಂಬಿ ತುಳುಕುತ್ತೀವೆ. ಇವುಗಳನ್ನು ಮಾರಾಟ ಮಾಡಲು ಆರಂಭಿಸಬೇಕಾಗಿದೆ. ಇನ್ನೂ ದಾಳಿಂಬೆ ಗಿಡಗಳಲ್ಲಿ ಕಾಯಿ ಆರಂಭಗೊಂಡಿವೆ. ಈಗ ಇವುಗಳಿಗೆ ಚಾಟಣಿ (ಕಾಯಿ ಉತ್ತಮವಾಗುವಂತೆ ಮಾಡುವ ಬಗೆ) ಮಾಡಲಾಗುತ್ತದೆ. ಒಂದು ವರ್ಷದ ನಂತರ ಇವುಗಳಲ್ಲಿ ಹೆಚ್ಚಿನ ಇಳುವರಿಯ ಕಾಯಿ ದೊರೆಯಲಾರಂಭಿಸುತ್ತದೆ. ಅದಕ್ಕಾಗಿ ಕಾಯಬೇಕು.

ಇನ್ನೂ ನಮ್ಮೆಲ್ಲ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರು ನಮ್ಮ ಬಾವಿಯಿಂದಲೇ ದೊರೆಯುತ್ತಿದೆ. ಸುಮಾರು ಒಂದು ಶತಮಾನದ ಹಿಂದಿನ ವಿಶಾಲವಾದ ಬಾವಿ ಮಳೆಗಾಲದಲ್ಲಿ ಭರ್ತಿಯಾದರೆ ಸಾಕು ವರ್ಷದುದ್ದಕ್ಕೂ ಬೆಳೆಗೆ ನೀರು ಪೂರೈಸುತ್ತದೆ. ಇನ್ನೂ ನಾನು ಇರದ ಸಮಯದಲ್ಲಿ ಶ್ರೀಶೈಲ ಮಠಪತಿ ಎನ್ನುವ ಸಂಬಂಧಿ ನಮ್ಮ ಎಲ್ಲ ಕೃಷಿ ಚಟುವಟಿಕೆಗಳಿಗೆ ಸಹಾಯಕರಾಗಿ ನಿಂತು ಕಾರ್ಯನಿರ್ವಹಿಸುತ್ತಾರೆ’ ಎಂದು ತಮ್ಮ ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ನೀಡುತ್ತಾರೆ.

ಕೃಷಿಯಲ್ಲಿ ಆದಾಯದ ಜೊತೆಗೆ ನೆಮ್ಮದಿಯನ್ನು ಕಂಡುಕೊಂಡಿರುವ ಗುರುಬಸಯ್ಯನವರನ್ನು ಮೊ– 9448897089 ಸಂಪರ್ಕಿಸಬಹುದು.

ಭೂಮಿ ತನಗಾಗಿ ವಿನಿಯೋಗ ಮಾಡಿದ ಎರಡರಷ್ಟು ನೀಡುತ್ತದೆ. ಅದಕ್ಕೆ ಸ್ವಲ್ಪ ಸಮಯ ಬೇಕು. ಅದಕ್ಕಾಗಿ ತಾಳ್ಮೆ ಇರಬೇಕು ಅಷ್ಟೇ. ಕೃಷಿ ಆತ್ಮತೃಪ್ತಿ ತರುತ್ತದೆ
– ರುಬಸಯ್ಯ ಹಿರೇಮಠ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT