ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಬೆಳಕಿನ ಹಬ್ಬದ ಸಂಭ್ರಮ, ಮಾರುಕಟ್ಟೆಯಲ್ಲಿ ಖರೀದಿ ಜೋರು

ಮಾರುಕಟ್ಟೆಯಲ್ಲಿ ಖರೀದಿ ಜೋರು; ಗೋಪೂಜೆ, ಲಕ್ಷ್ಮೀ ಪೂಜೆಗೆ ಸಿದ್ಧತೆ
Last Updated 12 ನವೆಂಬರ್ 2020, 13:12 IST
ಅಕ್ಷರ ಗಾತ್ರ

ವಿಜಯಪುರ: ಬೆಳಕಿನ ಹಬ್ಬ ದೀಪಾವಳಿಗೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮನೆ, ಮನೆಗಳಲ್ಲಿ ಸಿದ್ಧತೆ ಭರದಿಂದ ನಡೆದಿದೆ.

ಕೃಷಿಕರು ಮತ್ತು ವ್ಯಾಪಾರಸ್ಥರ ಪಾಲಿಗೆ ‘ದೊಡ್ಡಹಬ್ಬ’ವೆಂದೇ ಪ್ರಸಿದ್ಧವಾಗಿರುವ ದೀಪಾವಳಿಯ ಮುನ್ನಾ ದಿನವಾದ ಗುರುವಾರ ನಗರದ ಮಾರುಕಟ್ಟೆ, ಅಂಗಡಿಗಳಲ್ಲಿ ವ್ಯಾಪಾರ, ವಹಿವಾಟು ಜೋರಾಗಿತ್ತು.

ಜಿಲ್ಲೆಯ ವಿವಿಧ ಹಳ್ಳಿ, ಪಟ್ಟಣಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಮಾರುಕಟ್ಟೆಗೆ ಬಂದಿದ್ದರು. ಹಬ್ಬಕ್ಕೆ ಅಗತ್ಯವಿರುವ ಪೂಜಾ ಸಾಮಾನು, ಹೊಸ ಬಟ್ಟೆ, ಆಭರಣ, ಆಕಾಶ ಬುಟ್ಟಿ, ಹಣತೆ, ತುಳಸಿಕಟ್ಟೆ, ಜಾನುವಾರುಗಳ ಆಲಂಕಾರಿಕ ವಸ್ತು, ಹೂವು, ಹಣ್ಣು, ತರಕಾರಿ ಖರೀದಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ನಗರದ ಸ್ಟೇಷನ್‌ ರಸ್ತೆ, ಅಥಣಿ ರಸ್ತೆ, ಮಹಾತ್ಮಗಾಂಧಿ ರಸ್ತೆ, ಬಿಎಲ್‌ಡಿಇ ರಸ್ತೆ, ಆಶ್ರಮ ರಸ್ತೆ, ಜಲನಗರ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಬಗೆಬಗೆಯ ಆಕರ್ಷಕ ಆಕಾಶಬುಟ್ಟಿಗಳನ್ನು ಅಂಗಡಿಗಳ ಮುಂದೆ, ಬೀದಿ ಬದಿ ನೇತು ಹಾಕಿರುವುದು ಹಾಗೂ ಬಗೆಬಗೆಯ ಹಣತೆಗಳ ವ್ಯಾಪಾರ ಗಮನ ಸೆಳೆಯುತ್ತಿದೆ.

ಕೊರೊನಾದಿಂದ ಕಂಗೆಟ್ಟಿದ್ದ ವ್ಯಾಪಾರ, ವಹಿವಾಟು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಚೇತರಿಸಿಕೊಂಡಿದ್ದು, ಎಲ್ಲೆಡೆ ವ್ಯಾಪಾರ, ವಹಿವಾಟು, ಖರೀದಿ ಜೋರಾಗಿತ್ತು.ನಗರದ ಮಾರುಕಟ್ಟೆಯಲ್ಲಿ ಜನ ಸಂದಣಿ ಹೆಚ್ಚಿತ್ತು. ಕೊರೊನಾ ಭಯದಿಂದ ಜನ ಬಹುತೇಕ ಮುಕ್ತರಾಗಿರುವಂತೆ ಕಂಡುಬಂದಿತು.

ಗೋಪೂಜೆ, ಲಕ್ಷ್ಮೀ ಪೂಜೆಗೆ ರೈತರು, ಅಂಗಡಿ ವ್ಯಾಪಾರಸ್ಥರು ಅಂತಿಮ ಸಿದ್ಧತೆಯಲ್ಲಿ ತೊಡಗಿರುವುದು ಕಂಡುಬಂದಿತು. ಅಂಗಡಿ, ಮಳಿಗೆಗಳನ್ನು ವಿದ್ಯುತ್‌ ದೀಪಗಳಿಂದ ಆಲಂಕರಿಸಿರುವ ದೃಶ್ಯ, ಹಬ್ಬದ ಅಂಗವಾಗಿ ವಿಶೇಷ ರಿಯಾಯಿತಿ ಮಾರಾಟದ ಫಲಕಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿರುವುದು ಕಂಡುಬಂದಿತು.

ನೀರು ತುಂಬುವ ಹಬ್ಬ ಇಂದು:ನ.13ರಂದು ನೀರು ತುಂಬುವ ಹಬ್ಬ (ಧನ ತ್ರಯೋದಶಿ), ನ.14ರಂದುನರಕ ಚತುರ್ದಶಿ, ಆರತಿ ಮಾಡಿಸಿಕೊಳ್ಳುವುದು ಹಾಗು ಅದೇ ದಿನ ಮಧ್ಯಾಹ್ನ 2.20ರಿಂದ ದೀಪಾವಳಿ ಅಮವಾಸ್ಯೆ ಪ್ರಾರಂಭವಾಗಲಿದ್ದು, ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನಡೆಯಲಿದೆ.

ನ.15ರಂದುಬೆಳಿಗ್ಗೆ 10.30ಕ್ಕೆ ಅಮವಾಸ್ಯೆ ಮುಕ್ತಾಯವಾಗಲಿದೆ. ದೀಪಾವಳಿ ಪಾಡ್ಯ ಪ್ರಾರಂಭವಾಗಲಿದೆ. ನ.16ರಂದು ಬೆಳಿಗ್ಗೆ7.30ರ ವರೆಗೆ ದೀಪಾವಳಿ ಪಾಡ್ಯ ಆಚರಣೆ, ನ.19ರಂದು ಕಡೆಪಾಡ್ಯ ಇರುತ್ತದೆ ಎಂದುಶ್ರೀ ಸಿದ್ಧೇಶ್ವರ ಸಂಸ್ಥೆ ಚೇರ್ಮನ್‌ಬಸಯ್ಯ ಎಸ್. ಹಿರೇಮಠ ತಿಳಿಸಿದ್ದಾರೆ.

ನ.16ರಿಂದ ಕಾರ್ತಿಕ ಮಾಸ:ನ.16ರಿಂದ ಕಾರ್ತಿಕ ಮಾಸದ ಅಂಗವಾಗಿ ಪ್ರತಿ ದಿನ ಸಂಜೆ 7ಕ್ಕೆ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ವಿಶೇಷ ಕಾರ್ತಿಕ ದೀಪೋತ್ಸವ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT