ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಲಾಪುರ | 20 ವರ್ಷಗಳ ನಂತರ ಬರಗಾಲ: ಜಿಲ್ಲಾಧಿಕಾರಿ ಮಾಹಿತಿ

Published : 12 ಮೇ 2024, 14:48 IST
Last Updated : 12 ಮೇ 2024, 14:48 IST
ಫಾಲೋ ಮಾಡಿ
Comments

ಸೋಲಾಪುರ: ‘ಜಿಲ್ಲೆಯಲ್ಲಿ 20 ವರ್ಷಗಳ ನಂತರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನ ಜಾನುವಾರುಗಳಿಗೆ ನೀರು ಹಾಗೂ ಮೇವು ದೊರಕಿಸುವ ಕೆಲಸ ಮಾಡಲಾಗುತ್ತಿದೆ. ಬರಗಾಲ ಸಂಬಂಧಿತ ಕಾಮಗಾರಿಗಳಿಗೆ ಚಾಲನೆ ನೀಡುವ ಕುರಿತು ಯೋಜನೆ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ್‌ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಯ ಕೊರತೆಯಿಂದಾಗಿ ಬೆಳೆಗಳು ಹಾಳಾಗಿವೆ. ಕಳೆದ ವರ್ಷ ಮಳೆ ಕೊರತೆಯಿಂದ ಖಾರಿಫ್ ಬೆಳೆ ಹಾಗೂ ರಬ್ಬಿ ಬೆಳೆ ಉತ್ಪಾದನೆ ಕಡಿಮೆಯಾಗಿದೆ. ಮಳೆ ಕೊರತೆಯಿಂದಾಗಿ ಕೆರೆ, ಭಾವಿ ಹಾಗೂ ಇನ್ನಿತರ ಜಲಮೂಲ ಬತ್ತುತ್ತಿದ್ದು ನೀರಿನ ಅಭಾವ ಉಂಟಾಗಿದೆ. ಇದರಿಂದಾಗಿ ಅನೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲೆಗೆ ಕುಡಿಯುವ ನೀರಿನ ಮೂಲವಾಗಿರುವ ಉಜನಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು,‌ ಮೇ ತಿಂಗಳ ಕೊನೆಯಲ್ಲಿ ಇನ್ನೂ ನೀರಿನ ಸಂಗ್ರಹ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

‘ಜಿಲ್ಲೆಯಲ್ಲಿ 137 ಗ್ರಾಮಗಳಿಗೆ 167 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಮೇವು ದೊರಕಿಸಿ ಕೊಡುವ ನಿಟ್ಟಿನಲ್ಲಿ ಈವರೆಗೆ ₹3.5 ಕೋಟಿ ವೆಚ್ಚದ ಮೇವಿನ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ. ಬರುವ 2 ತಿಂಗಳಲ್ಲಿ ಮೇವು ದೊರೆಯಬಹುದು ಎಂದು ಅಂದಾಜಿಸಲಾಗಿದೆ’ ಎಂದರು.

‘ಲೋಕಸಭೆ ಚುನಾವಣೆಯಲ್ಲಿ ಜಿಲ್ಲಾಡಳಿತ ಚುನಾವಣಾ ಕಾರ್ಯದಲ್ಲಿ ತೊಡಗಿದ್ದರೂ ಗ್ರಾಮಗಳಿಗೆ ನೀರಿನ ತೊಂದರೆಯಾಗದಂತೆ ಗಮನ ಹರಿಸಿದೆ. ಮೇ ತಿಂಗಳ ಕೊನೆಯವರೆಗೆ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ನಗರದ ಜನರಿಗೆ ನೀರಿನ ತೊಂದರೆಯಾಗದಂತೆ ಎರಡು ತಿಂಗಳವರೆಗೆ ಸಾಕಾಗುವಷ್ಟು ನೀರು ಉಜಿನಿ ಅಣೆಕಟ್ಟಿನಿಂದ ಬಿಡಲಾಗಿದೆ. ಈ ವರ್ಷ ಮಾನ್ಸೂನ್‌ ಬೇಗ ಬರುವ ಸಾಧ್ಯತೆಯಿದ್ದು ಜೂನ್–ಜುಲೈನಲ್ಲಿ ನೀರಿನ ಸಂಗ್ರಹ ಅಣೆಕಟ್ಟಿನಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ’ ಎಂದು ವಿವರಿಸಿದರು.

ಮಹಾತ್ಮಗಾಂಧಿ ನರೇಗಾ ಯೋಜನೆ ಮೂಲಕ ಕಾಮಗಾರಿ ಹಾಗೂ ಉದ್ಯೋಗಿಗಳ ಕೆಲಸದ ರೂಪರೇಷೆ ಮಾಡಿ ಮಂಜೂರಾತಿ ನೀಡಲಾಗಿದೆ. ಆದರೆ ನೀತಿ ಸಂಹಿತೆ ಕಾರಣ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಪ್ರಾರಂಭವಾಗಬೇಕಿದ್ದ ಕಾಮಗಾರಿ ಈವರೆಗೆ ಆರಂಭವಾಗದ ಕಾರಣ ಗ್ರಾಮೀಣ ಭಾಗದ ಜನರಿಗೆ ಅಸಮಾಧಾನವಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT