ವಿಜಯಪುರ: ಪೊಲೀಸ್ ಇಲಾಖೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ ಡಿವೈಎಸ್‌ಪಿಯಾಗಿ ಸೇವಾ ನಿವೃತ್ತಿ ಹೊಂದಿರುವ ಬಸವರಾಜ ಚೌಕಿಮಠ ಅವರು, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂಬಂತೆ ಕೃಷಿ ಕಾಯಕದಲ್ಲಿ ತೊಡಗಿ ಸದ್ಯ ನೆಮ್ಮದಿ ಜೀವನ ಕಂಡುಕೊಂಡಿದ್ದಾರೆ.
ವಿಜಯಪುರದಿಂದ 10 ಕಿ.ಮೀ. ದೂರದಲ್ಲಿರುವ ಕವಲಗಿ ಸಮೀಪದ ಸ್ನೇಹಿತ ಬಿ.ಆರ್.ನಂದೆಗೋಳ ಅವರ ಹೊಲವನ್ನು ಪಡೆದು, ಪಾಲಿಹೌಸ್ ಪರಿಣಿತ ಸಂತೋಷ ಬಿರಾದಾರ ಅವರ ಸಹಾಯದೊಂದಿಗೆ 20 ಗುಂಟೆ ಜಾಗದಲ್ಲಿ ಹೈಟೆಕ್ ತಂತ್ರಜ್ಞಾನದ ಪಾಲಿಹೌಸ್ ನಿರ್ಮಿಸಿ, ಬಣ್ಣದ ಡೊಣ್ಣ ಮೆಣಸಿನಕಾಯಿ ಬೆಳೆಯಲು ಆರಂಭಿಸಿದ್ದಾರೆ.
ಪಾಲಿಹೌಸ್‌ನ 20 ಗುಂಟೆಯಲ್ಲಿ ಬಳ್ಳಿಯಂತೆ ಹಬ್ಬುವ ಸುಮಾರು 4,200 ಡೊಣ್ಣ ಮೆಣಸಿನ ಸಸಿಗಳನ್ನು ಸಾಲಿನಿಂದ ಸಾಲಿಗೆ 1.5 ಅಡಿ ಅಂತರದಲ್ಲಿ ನಾಟಿ ಮಾಡಿದ್ದಾರೆ. ಎರಡು ಸಾಲುಗಳ ನಡುವೆ ಡ್ರಿಪ್ ಪೈಪಿನ ಮೂಲಕ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಪ್ರತಿ ಎರಡು ಸಾಲು ಸಸಿಗಳ ನಂತರ ಖಾಲಿ ಇರುವ ಸ್ಥಳದಲ್ಲಿ ಓಡಾಟ ಮಾಡಲು ಜಾಗ ಬಿಟ್ಟು ಗಿಡ ನಿರ್ವಹಣೆಗೆ ಅನುಕೂಲ ಕಲ್ಪಿಸಿಕೊಂಡಿದ್ದಾರೆ.
ಬೆಳೆಯ ಬೆಳವಣಿಗೆಗೆ ತಕ್ಕಂತೆ ಕಾಲಕ್ಕೆ ಸೂಕ್ತವಾದ ಬೇಸಾಯ ಕ್ರಮ ಅನುಸರಿಸುತ್ತಿದ್ದು, ಪ್ರತಿದಿನ ಅವಶ್ಯಕತೆಗೆ ತಕ್ಕಂತೆ ಗೊಬ್ಬರ, ಕಳೆ ನಿಯಂತ್ರಣ ಬಳಸುವ ಮೂಲಕ ಸಸ್ಯ ಸಂರಕ್ಷಣೆ ಮಾಡಿದ್ದಾರೆ. ಉತ್ತಮ ಬೆಳೆ ನಿರ್ವಹಣೆ ಮತ್ತು ದುಡಿಮೆಯ ಫಲವಾಗಿ ಮೊದಲ ಇಳುವರಿ ಉತ್ತಮವಾಗಿಯೇ ಲಭಿಸಿದೆ.
‘ಡೊಣ್ಣ ಮೆಣಸಿನಕಾಯಿ 9 ತಿಂಗಳ ಬೆಳೆಯಾಗಿದ್ದು, ನಾವು ನಾಟಿ ಮಾಡಿ 3 ತಿಂಗಳು ಕಳೆದಿದೆ. ಈಗಾಗಲೇ ಎರಡು ಬಣ್ಣದ ಡೊಣ್ಣ ಮೆಣಸಿನಕಾಯಿಗಳು ಕಟಾವ್‌ಗೆ ಬಂದಿದ್ದು, ಒಂದು ಮೆಣಸಿನಕಾಯಿ 200 ರಿಂದ 250 ಗ್ರಾಂ ವರೆಗೆ ತೂಕ ಹೊಂದಿದೆ. ಮೊದಲ ಕಟಾವಿನಲ್ಲಿ ಪ್ರತಿ ಕೆ.ಜಿ ಗೆ ₹100ರಂತೆ 3 ಕ್ವಿಂಟಾಲ್‌ಗಳನ್ನು ಮಾರುಕಟ್ಟೆಗೆ ಕಳುಹಿಸಿದ್ದೇನೆ. ಈ ವಾರದಲ್ಲಿ 2 ಬಾರಿ ಕಟಾವ್ ಮಾಡಿ ಮಾರುಕಟ್ಟೆಗೆ ಕಳುಹಿಸಲಿದ್ದೇನೆ’ ಎಂದು ಅವರು ಹೇಳಿದರು.
ಇನ್ನು ಮುಂದಿನ 6 ತಿಂಗಳು ನಿರಂತರವಾಗಿ ಗಿಡ ಫಲ ನೀಡಲಿದ್ದು, ಮಾರುಕಟ್ಟೆಯಲ್ಲೂ ಉತ್ತಮ ದರವಿದೆ. ವಾರಕ್ಕೆ 2 ಬಾರಿ ಕಟಾವ್ ಮಾಡಿ ಡೊಣ್ಣ ಮೆಣಸಿಕಾಯಿ ಮಾರುಕಟ್ಟೆಗೆ ಕಳುಹಿಸಲಾಗುವುದು. ಮುಂದಿನ 6 ತಿಂಗಳಿನಲ್ಲಿ ₹12ರಿಂದ ₹16 ಲಕ್ಷ ಆದಾಯ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಚೌಕಿಮಠ.
ಕೆಂಪು ಮತ್ತು ಹಳದಿ ಬಣ್ಣದ ಡೊಣ್ಣ ಮೆಣಸಿಗೆ ಮಹಾನಗರಗಳು, ಪಂಚತಾರಾ ಹೋಟೆಲ್‌ಗಳಲ್ಲಿ ಬೇಡಿಕೆ ಹೆಚ್ಚು. ವಿಟಮಿನ್ ‘ಸಿ’, ‘ಎ’ ಹೇರಳವಾಗಿರುವ ಇದನ್ನು ಪಿಝ್ಜಾ, ಬರ್ಗರ್ ಮೊದಲಾದ ಯುವಜನರ ನೆಚ್ಚಿನ ತಿನಿಸುಗಳ ಟಾಪಿಂಗ್‌ಗೆ ಬಳಸುತ್ತಾರೆ ಎನ್ನುತ್ತಾರೆ ಅವರು.
ಟೊಮೆಟೊ, ಬೀನ್ಸ್, ಸೊಪ್ಪು ಇನ್ನಾವುದೋ ತರಕಾರಿಯ ದರ ದಿಢೀರನೆ ಕುಸಿಯಬಹುದು. ಆದರೆ, ಬಣ್ಣದ ಡೊಣ್ಣ ಮೆಣಸಿನಕಾಯಿಗೆ ಬೇಡಿಕೆ ತಗ್ಗುವುದಿಲ್ಲ. ಹೀಗಾಗಿಯೇ ನಾವು ಇದನ್ನು ಬೆಳೆಯಲು ಮುಂದಾಗಿದ್ದೇವೆ ಎಂದರು.
ಸದ್ಯ ಪಾಲಿಹೌಸ್‌ನಲ್ಲಿ ಬೆಳೆದಿರುವ ಕೆಂಪು ಹಾಗೂ ಹಳದಿ ಬಣ್ಣದ ಡೊಣ್ಣ ಮೆಣಸಿನಕಾಯಿ ಗಿಡ ತುಂಬ ಫಸಲು ನೀಡುತ್ತಿದ್ದು, ಉತ್ತಮ ಲಾಭ ಪಡೆಯುತ್ತಿರುವ ಅವರು ಇತರರಿಗೂ ಈ ಬೆಳೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.