ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಫೈಬರ್‌ನಲ್ಲಿ ಅವತರಿಸಿದ ಪಾರ್ವತಿತನಯ!

ಗುಮ್ಮಟನಗರದಲ್ಲಿ ನಾಲ್ಕು ಗಜಾನನ ಮೂರ್ತಿಗಳ ಪ್ರತಿಷ್ಠಾಪನೆ; ಖರ್ಚು ಕಡಿಮೆ, ಬಾಳಿಕೆ ಹೆಚ್ಚು
Last Updated 11 ಸೆಪ್ಟೆಂಬರ್ 2021, 12:33 IST
ಅಕ್ಷರ ಗಾತ್ರ

ವಿಜಯಪುರ: ಪೌರಾಣಿಕ ಕಥೆಗಳು, ಪುರಾಣಗಳ ಪ್ರಕಾರ ದೇವಿ ಪಾರ್ವತಿಯ ಬೆವರಿನಿಂದ ಗಣೇಶ ಜನ್ಮ ತಳೆದ ಕಥೆ ಪ್ರತೀತಿಯಲ್ಲಿದೆ. ಈ ಕಾರಣದಿಂದಾಗಿಯೇ ಮಣ್ಣಿನಿಂದಲೇ ಮೂರ್ತಿವೆತ್ತ ವಿನಾಯಕನನ್ನು ತಲೆತಲಾಂತರದಿಂದ ಭಕ್ತರು ಪ್ರತಿ ವರ್ಷ ಪ್ರತಿಷ್ಠಾಪಿಸಿ, ಪೂಜಿಸುತ್ತಾ ಬರುತ್ತಿರುವುದು ಸಂಪ್ರದಾಯ.

ಆಧುನಿಕ ಕಾಲಘಟ್ಟದಲ್ಲಿ ಅದರಲ್ಲೂ ಎರಡು ದಶಕಗಳಿಂದೀಚೆಗೆ ಪ್ಲಾಸ್ಟರ್ ಆಫ್‌ ಪ್ಯಾರಿಸ್‌(ಪಿಒಪಿ)ನಿಂದ ವೈವಿಧ್ಯಮಯ ಮತ್ತು ಆಕರ್ಷಕ ರೂಪದಲ್ಲಿ ವಿಘ್ನ ನಿವಾರಕನ ಮೂರ್ತಿಗಳು ತಯಾರಾಗಿ ಭಕ್ತರ ಮನೆಗಳಲ್ಲಿ ಪ್ರತಿಷ್ಠಾಪನೆಯಾಗತೊಡಗಿವೆ. ಆದರೆ, ಈ ಪಿಒಪಿ ಮೂರ್ತಿಗಳು ಪರಿಸರಕ್ಕೆ ಅದರಲ್ಲೂ ವಿಶೇಷವಾಗಿ ಜಲಮೂಲಕ್ಕೆ ಮಾರಕ ಎಂಬ ಕಾರಣಕ್ಕೆ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟಕ್ಕೆ ಸರ್ಕಾರವೇ ನಿರ್ಬಂಧ ವಿಧಿಸಿದೆ.

ಅಷ್ಟಾದರೂ ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ, ಪೂಜೆ ನಿಂತಿಲ್ಲ. ಪಿಒಪಿ ಮೂರ್ತಿಗಳಬದಲು ಮಣ್ಣಿನ ಗಣೇಶನ ಮೂರ್ತಿ ಕೂರಿಸುವ ಜಾಗೃತಿ ಎಲ್ಲೆಡೆ ನಡೆದಿದೆ. ಈ ನಡುವೆ ಇದೀಗ ಮಣ್ಣು, ಪಿಒಪಿ ಬದಲಿಗೆ ಫೈಬರ್‌ ರೂಪದಲ್ಲಿ ಗಣೇಶನ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿರುವುದು ವಿಶೇಷ.

ಅದಾಗಲೇ ‘ಗುಮ್ಮಟನಗರಿ’ ವಿಜಯಪುರದಲ್ಲಿ ಈ ವರ್ಷ ಫೈಬರ್‌ನಿಂದ ತಯಾರಿಸಿದನಾಲ್ಕು ಬೃಹತ್‌ ಗಣೇಶನ ಮೂರ್ತಿಗಳು ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪ್ರತಿಷ್ಠಾಪಿಸಿ ಆರಾಧಿಸತೊಡಗಿದ್ದಾರೆ.

ಹೌದು, ಗಜಾನನ ಉತ್ಸವ ಮಹಾಮಂಡಳದಿಂದ ವಿಜಯಪುರ ನಗರದ ಶಿವಾಜಿಚೌಕಿಯಲ್ಲಿ 8 ಅಡಿ ಎತ್ತರದ ಫೈಬರ್‌ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಅಂತೆಯೇ, ಡೋಬಳೆ ಗಲ್ಲಿಯಲ್ಲಿ ಮರಾಠ ಸಮಾಜದಿಂದ 10 ಅಡಿ ಎತ್ತರ, ದರ್ಬಾರ್‌ ಗಲ್ಲಿಯಲ್ಲಿ ಶ್ರೀ ಗಜಾನನ ಮಂಡಳಿಯಿಂದ 9 ಅಡಿ ಹಾಗೂ ಶಿವಾಜಿಪೇಟೆಯಲ್ಲಿ ಭಗತ್‌ ಸಿಂಗ್‌ ತರುಣ ಮಂಡಳಿಯಿಂದ 6 ಅಡಿ ಎತ್ತರದ ಫೈಬರ್‌ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

‘ಪಿಒಪಿ ಅಥವಾ ಮಣ್ಣಿನ ಮೂರ್ತಿಗಳ ಸಾಗಾಟ, ಪ್ರತಿಷ್ಠಾಪನೆ ಮತ್ತು ವಿಸರ್ಜನೆಯು ಧಾರ್ಮಿಕವಾಗಿ ಬಹಳ ಸೂಕ್ಷ್ಮವಾಗಿತ್ತು. ಸಾಗಾಟದ ವೇಳೆ ಮೂರ್ತಿಯ ಯಾವುದಾದರೂ ಭಾಗಕ್ಕೆ ಭಗ್ನವಾದರೆ ಅಪಶಕುನ ಎಂದೇ ಭಾವಿಸಲಾಗುತ್ತದೆ. ಅಲ್ಲದೇ, ಪಿಒಪಿ ಮೂರ್ತಿಗಳು ಪರಿಸರಕ್ಕೆ ಮಾರಕ ಎಂಬ ವೈಜ್ಞಾನಿಕ ಕಾರಣಗಳೂ ಇವೆ. ಈ ದೃಷ್ಟಿಯಿಂದ ಫೈಬರ್‌ ಮೂರ್ತಿಗಳನ್ನು ಸುಲಭವಾಗಿ ಸಾಗಾಟ ಮಾಡಬಹುದು, ಪ್ರತಿಷ್ಠಾಪಿಸಬಹುದು. ಇವುಗಳಿಂದ ಪರಿಸರ ಮಾಲಿನ್ಯವೂ ಇಲ್ಲ ಎಂದು ಗಜಾನನ ಉತ್ಸವ ಮಹಾಮಂಡಳದ ಅಧ್ಯಕ್ಷ, ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ಹಬ್ಬಕ್ಕೆ ಮಣ್ಣಿನ ಮತ್ತು ಪಿಒಪಿ ಮೂರ್ತಿಗಳು ಬೇಕಾದರೆ ಮೂರ್ನಾಲ್ಕು ತಿಂಗಳ ಮೊದಲೇ ಮೂರ್ತಿ ತಯಾರಕರಲ್ಲಿ ಬುಕ್ಕಿಂಗ್‌ ಮಾಡಬೇಕಿತ್ತು. ಅವುಗಳ ದರವೂ ಹೆಚ್ಚಿತ್ತು. ಈ ದೃಷ್ಟಿಯಿಂದ ಫೈಬರ್‌ ಗಣೇಶನ ಮೂರ್ತಿಗಳನ್ನು ಒಮ್ಮೆ ಕೊಂಡು ತಂದರೆ ಹತ್ತಾರು ವರ್ಷ ಬಳಸಬಹುದು’ ಎನ್ನುತ್ತಾರೆ ಅಪ್ಪು ಪಟ್ಟಣಶೆಟ್ಟಿ.

‘ಫೈಬರ್‌ ಮೂರ್ತಿಯನ್ನು ವಿಸರ್ಜಿಸದೇ ಅದನ್ನು ಹಾಗೆಯೇ ಒಂದೆಡೆ ಇಡಬಹುದು. ಫೈಬರ್‌ ಮೂರ್ತಿಯ ಪಕ್ಕದಲೇ ಮಣ್ಣಿನ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಯಾವುದೇ ತೊಂದರೆಯಿಲ್ಲ’ ಎಂದು ಹೇಳಿದರು.

‘ಪುಣಿ, ಕೊಲ್ಹಾಪುರ, ಸೋಲಾಪುರದಲ್ಲಿ ನಾಲ್ಕೈದು ವರ್ಷಗಳಿಂದ ಫೈಬರ್‌ ಗಣೇಶನ ಮೂರ್ತಿಗಳನ್ನೇಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಇದನ್ನು ಒಮ್ಮೆ ನೋಡಿ ನಾವೂ ಸಹ ಪುಣೆಯಲ್ಲಿ ನಮಗೆ ಬೇಕಾದ ಆಕಾರದ ಗಣೇಶನನ್ನು ತಯಾರಿಸಿಕೊಂಡು ತಂದು ವಿಜಯಪುರದಲ್ಲಿ ಪ್ರತಿಷ್ಠಾಪಿಸಿದ್ದೇವೆ’ ಎಂದರು.

‘ಎಂಟು ಅಡಿ ಫೈಬರ್‌ ಗಣೇಶನ ಮೂರ್ತಿಗೆ ₹1.70 ಲಕ್ಷ ನೀಡಿ ತಂದಿದ್ದೇವೆ. ಇದನ್ನು ಹತ್ತಾರು ವರ್ಷ ಪ್ರತಿಷ್ಠಾಪಿಸಬಹುದಾಗಿದ್ದು, ಅನುಕೂಲವಾಗಿದೆ. ನೋಡಲು ಬಹಳ ಸುಂದರವಾಗಿದೆ’ ಎಂದು ಹೇಳಿದರು.

‘ನಗರದ ಗ್ಯಾಂಗ್‌ಬಾವಡಿ ಬಳಿ ಇರುವ ಅದೃಷ್ಟ ಲಕ್ಷ್ಮಿ ದೇವಸ್ಥಾನದಲ್ಲಿ ಫೈಬರ್‌ ಗಣೇಶನ ಮೂರ್ತಿ ಇಡುತ್ತೇವೆ. ಅಲ್ಲಿ ಪ್ರತಿ ಸಂಕಷ್ಟಿಯಂದು ಪೂಜೆ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.

ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಇನ್ನು ಮುಂದೆ ಪರಿಸರಕ್ಕೆ ಮಾರಕವಾದ ಪಿಒಪಿ ಬೃಹತ್‌ ಗಣೇಶನ ಮೂರ್ತಿಗಳ ಬದಲು ಫೈಬರ್‌ ಮೂರ್ತಿಗಳನ್ನು ತಂದು ಕೂರಿಸುವುದು ಖರ್ಚು–ವೆಚ್ಚ, ಪರಿಸರ ಮಾಲಿನ್ಯ ತಡೆ ದೃಷ್ಟಿಯಿಂದ ಉತ್ತಮ.

– ಅಪ್ಪು ಪಟ್ಟಣಶೆಟ್ಟಿ, ಅಧ್ಯಕ್ಷ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ

ವಿಸರ್ಜನೆಯಾದ ಪಿಒಪಿ, ಮಣ್ಣಿನ ಗಣೇಶನ ಮೂರ್ತಿಗಳನ್ನು ವಿಲೇವಾರಿ ಮಾಡುವಾಗ ಎಸೆಯುವುದು, ಕೃತಕ ಹೊಂಡಗಳಲ್ಲಿ ಮುಚ್ಚುವುದು ಮಾಡುವಾಗ ಭಕ್ತರ ಭಾವನೆಗೆ ದಕ್ಕೆಯಾಗುತ್ತಿತ್ತು. ಫೈಬರ್‌ ಮೂರ್ತಿಗಳ ಪ್ರತಿಷ್ಠಾಪನೆಯಿಂದ ಇದಕ್ಕೆ ಮುಕ್ತಿ ದೊರೆಯಲಿದೆ.

– ವಿಜಯ್‌ ಜೋಶಿ, ಸದಸ್ಯ, ಗಜಾನನ ಉತ್ಸವ ಮಹಾಮಂಡಳ, ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT