ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್‌ ರದ್ದುಗೊಳಿಸದಿದ್ದರೆ ಹೋರಾಟ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌‌.ಷಡಾಕ್ಷರಿ
Last Updated 3 ನವೆಂಬರ್ 2020, 13:14 IST
ಅಕ್ಷರ ಗಾತ್ರ

ವಿಜಯಪುರ: ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಇಲ್ಲವಾದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌‌.ಷಡಾಕ್ಷರಿ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಕೇಂದ್ರ ಸರ್ಕಾರವು ತನ್ನ ಸರ್ಕಾರಿ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಸರಿಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸರ್ಕಾರಿ ನೌಕರರು ಒಳ, ಹೊರ ರೋಗಿಗಳಾಗಿ ಸಂಪೂರ್ಣ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಎಲ್ಲ ವಿಧದ ಔಷಧ, ಸ್ಕ್ಯಾನಿಂಗ್‌, ಪರೀಕ್ಷೆಗಳು ಉಚಿತವಾಗಿ ದೊರೆಯಲಿವೆ ಎಂದರು.

ನೌಕರರ ಎಲ್ಲ ಸೇವಾ ಸವಲತ್ತುಗಳನ್ನು ಆನ್‌ಲೈನ್‌ ಮೂಲಕ ಒದಗಿಸಲು ಸಾಫ್ಟ್‌ವೇರ್‌ ಸಿದ್ಧಪಡಿಸಲಾಗುತ್ತಿದ್ದು, ಇದರಿಂದಾಗಿ ಯಾವುದೇ ನೌಕರರು ಕಚೇರಿಗೆ ಅಲೆದಾಡುವುನ್ನು ತಪ್ಪಿಸುವುದರ ಜೊತೆಗೆ ಮುಂಬಡ್ತಿ, ಕಾರ್ಯನಿರ್ವಹಣಾ ವರದಿ, ಕಾಯಂ ಸೇವಾ ಪೂರ್ಣಾವಧಿ ಘೋಷಣೆ, ಪಾಸ್‌ಪೋರ್ಟ್‌, ಪ್ರಥಮ ವೇತನ ಡ್ರಾ ಮಾಡಲು ಅನುಮತಿ, ವೈದ್ಯಕೀಯ ವೆಚ್ಚ ಮರುಪಾವತಿ, ಎಲ್‌ಟಿಸಿ, ಎಚ್‌ಟಿಸಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆಯಬಹುದಾಗಿದೆ ಎಂದು ಹೇಳಿದರು.

ಶಿಕ್ಷಕರ ದಿನಾಚರಣೆ ಮಾದರಿಯಲ್ಲಿ ಪ್ರತಿ ವರ್ಷ ರಾಜ್ಯ ಸರ್ಕಾರಿ ನೌಕರರ ದಿನ ಆಚರಣೆಗೆ ಈಗಾಗಲೇ ಸಂಘವು ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದರು.

ಕ್ಯಾಂಟೀನ್‌:ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ರಿಯಾಯಿತಿ ದರದಲ್ಲಿ ಗೃಹಬಳಕೆ ವಸ್ತುಗಳನ್ನು ಪೂರೈಸಲು ಎಂಟು ಜಿಲ್ಲೆಗಳಲ್ಲಿ ಕ್ಯಾಂಟೀನ್‌ ಆರಂಭಿಸಲಾಗಿದ್ದು, ಉಳಿದ 22 ಜಿಲ್ಲೆಗಳಲ್ಲೂ ಕ್ಯಾಂಟೀನ್‌ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

‘ಸಂಘವು ಸರ್ಕಾರಿ ನೌಕರರ ಹಿತ ಕಾಯಲು ಶ್ರಮಿಸುತ್ತಿದೆಯೇ ಹೊರತು, ವರ್ಗಾವಣೆ ದಂದೆ ನಡೆಸುತ್ತಿಲ್ಲ. ಸಂಘದ ಪದಾಧಿಕಾರಿಗಳು ವರ್ಗಾವಣೆ ದಂದೆ ನಡೆಸುತ್ತಿರುವ ಬಗ್ಗೆ ಸಾಕ್ಷಿ ಸಮೇತ ಯಾರಾದರೂ ಸಾಬೀತು ಪಡಿಸಿದರೆ ಒಂದು ಕ್ಷಣವೂ ಸಂಘದಲ್ಲಿ ಇರುವುದಿಲ್ಲ. ಆರೋಪ ಮಾಡುವವರನ್ನು ಈ ಕುರಿತು ಮುಕ್ತ ಚರ್ಚೆಗೆ ಆಹ್ವಾನಿಸುತ್ತೇನೆ’ ಎಂದು ಸವಾಲು ಹಾಕಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಶೆಡಶಾಳ, ಕಾರ್ಯದರ್ಶಿ ರಾಜಶೇಖರ ಎಚ್‌.ದೈವಾಡಿ, ರಾಜ್ಯ ಪರಿಷತ್‌ ಸದಸ್ಯ ವಿಜಯಕುಮಾರ್ ಎಸ್‌. ಹತ್ತಿ, ಮೋಹನಕುಮಾರ್‌, ಸೈಯ್ಯದ್‌ ಜುಬೇರ, ಗಂಗಧರ ಜೇವೂರ, ಶಿವಾನಂದ ಮಂಗಾನವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

---

ಸರ್ಕಾರ ಬಿಡುಗಡೆ ಮಾಡಿರುವ ನೌಕರರ ನಡೆತೆ ನಿಯಮದಲ್ಲಿ ಇರುವ ನ್ಯೂನತೆ ಸರಿಪಡಿಸುವಂತೆ ಗಮನ ಸೆಳೆಯಲಾಗಿದ್ದು, ಬದಲಾವಣೆ ಮಾಡಲು ಸರ್ಕಾರ ಒಪ್ಪಿದೆ.
ಸಿ.ಎಸ್‌‌.ಷಡಾಕ್ಷರಿ, ಅಧ್ಯಕ್ಷ,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT