ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪೀಡಿತರಿಗೆ ಪ್ರಾಣವಾಯು ಉಚಿತ ಪೂರೈಕೆ: ಶಕೀಲ್‌ ಸುತಾರ ಸೇವೆ

ವಿಜಯಪುರದ ಪೀಠೋಪಕರಣ ವ್ಯಾಪಾರಿಯಿಂದ ನೆರವು
Last Updated 12 ಮೇ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ನಗರದ ಕೆ.ಸಿ.ಮಾರುಕಟ್ಟೆಯ ಪೀಠೋಪಕರಗಳ ಪ್ರಸಿದ್ಧ ವ್ಯಾಪಾರಿ ಶಕೀಲ್‌ ಸುತಾರ ಅವರು ಕೋವಿಡ್‌ ಪೀಡಿತರಿಗೆ ಉಚಿತವಾಗಿ ಪ್ರಾಣವಾಯು ಆಮ್ಲಜನಕ ಪೂರೈಕೆ ಮಾಡುವ ಮೂಲಕ ಹಲವುಜೀವಗಳನ್ನು ಉಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಕೋವಿಡ್‌ನಿಂದ ಉಸಿರಾಟದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆ ದಾಖಲಾದರೂ ಆಮ್ಲಜನಕ ಸಿಲಿಂಡರ್‌ ಸಿಗದೇ ಸಾವು–ಬದುಕಿನ ನಡುವೆ ಹೋರಾಡುತ್ತಿರುವವರ ನೆರವಿಗೆ ನಿಂತಿರುವ ಸುತಾರ ಅವರು ಇದುವರೆಗೆ 200ಕ್ಕೂಜನರಿಗೆ ಆಮ್ಲಜನಕವನ್ನುಉಚಿತವಾಗಿ ಪೂರೈಕೆ ಮಾಡಿದ್ದಾರೆ.

ಅಲ್ಲದೇ, ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೇ ತೊಂದರೆಗೊಳಗಾದ ಅನೇಕ ಕೋವಿಡ್‌ ಪೀಡಿತರನ್ನು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಬೆಡ್‌ ವ್ಯವಸ್ಥೆ ಕೂಡ ಮಾಡುತ್ತಿದ್ದಾರೆ.

ತೀವ್ರ ಸಂಕಷ್ಟದಲ್ಲಿದ್ದನಾಲ್ಕೈದು ಬಡವರಿಗೆ ಆಸ್ಪತ್ರೆ ಬಿಲ್‌ ₹10,000–₹25,000ವನ್ನುತಾವೇಪಾವತಿಸುವ ಮೂಲಕ ರೋಗಿಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಕೀಲ್‌ ಸುತಾರ, ‘50 ಜಂಬೋ ಸಿಲಿಂಡರ್‌ಗಳನ್ನು ತಲಾ ₹10,000 ಠೇವಣಿ ಕಟ್ಟಿ ಸ್ವಂತ ಖರೀದಿಸಿದ್ದೇನೆ. ಆಸ್ಪ‍ತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಆಮ್ಲಜನಕ ಸಿಗದೇ ತೊಂದರೆಗೆ ಒಳಗಾದವರು ನನ್ನನ್ನು ಸಂಪರ್ಕಿಸಿದರೆ ಅಂಥವರಿಗೆ ನಾನೇ ತೆಗೆದುಕೊಂಡು ಹೋಗಿ ಕೊಡುತಿದ್ದೇನೆ’ ಎಂದರು.

‘ವಿಜಯಪುರದ ಕುಲಕರ್ಣಿ ಏಜೆನ್ಸಿ, ಎಂ.ಆರ್‌. ಆಕ್ಸಿಜನ್‌ ಏಜನ್ಸಿ ಬಳಿ ಖಾಲಿಸಿಲಿಂಡರ್‌ ಭರ್ತಿ ಮಾಡಿಸುತ್ತೇನೆ. ಸಿಲಿಂಡರ್‌ ತುಂಬಿಸಲು ತಗಲುವ ವೆಚ್ಚವನ್ನುನನ್ನ ಕೈಯಿಂದಲೇ ಭರಿಸುತ್ತಿದ್ದೇನೆ. ನನ್ನ ಬಳಿ ಎರಡು ಲಗೇಜ್‌ ಆಟೋಗಳಿವೆ. ಅವುಗಳ ಮೂಲಕ ರೋಗಿಗಳು ದಾಖಲಾಗಿರುವ ಆಸ್ಪತ್ರೆಗೆ ಕೊಂಡೊಯ್ದು ನೀಡುತ್ತೇನೆ’ ಎಂದು ಹೇಳಿದರು.

‘ಕೆಲವರು ಹಣ ನೀಡಲು ಮುಂದೆ ಬರುತ್ತಿದ್ದಾರೆ. ಆದರೆ, ನಾನು ಯಾರ ಬಳಿಯೂ ಹಣವನ್ನು ತೆಗೆದುಕೊಳ್ಳುತ್ತಿಲ್ಲ. ಆ ಹಣವನ್ನು ಕೋವಿಡ್‌ ಸಂಕಷ್ಟದಲ್ಲಿರುವ ಬಡವರ ಆಸ್ಪತ್ರೆ ವೆಚ್ಚವನ್ನು ಭರಿಸುವಂತೆ ಕೋರುತ್ತಿದ್ದೇನೆ’ ಎಂದು ತಿಳಿಸಿದರು.

‘ಬಹಳ ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್‌ ಪೀಡಿತರನ್ನು ಅಂಬುಲೆನ್ಸ್‌ ಮೂಲಕ ಕೆಲವರು ಮಿರಜ್‌, ಸಾಂಗ್ಲಿ, ಸೊಲ್ಲಾಪುರಕ್ಕೆ ಕರೆದುಕೊಂಡು ಹೋಗುತ್ತಾರೆ. ಅಂಥವರಿಗೆ ಅಂಬುಲೆನ್ಸ್‌ನಲ್ಲಿ ಆಮ್ಲಜನಕದ ಅಗತ್ಯವಿರುತ್ತದೆ. ಅವರಿಗೂ ನಾನು ಆಮ್ಲಜನಕ ಸಿಲಿಂಡರ್‌ ಒದಗಿಸುತ್ತಿದ್ದೇನೆ. ಸಿಲಿಂಡರ್‌ ಖಾಲಿಯಾದ ಬಳಿಕ ಮರಳಿ ತೆಗೆದುಕೊಳ್ಳುತ್ತೇನೆ’ ಎಂದರು.

‘ಖಾಸಗಿ ಆಸ್ಪತ್ರೆಗಳಿಗೆ ಮತ್ತು ವೈದ್ಯರು ರೋಗಿಗಳಿಂದ ಶುಲ್ಕವನ್ನು ತೆಗೆದುಕೊಳ್ಳುವುದರಿಂದ ಅವರಿಗೆ ಆಮ್ಲಜನಕದ ಸಿಲಿಂಡರ್‌ ನೀಡುತ್ತಿಲ್ಲ. ಕೇವಲ ಅನಾರೋಗ್ಯ ಪೀಡಿತರಿಗೆ ಮಾತ್ರ ನೀಡುವ ಮೂಲಕಅಳಿಲು ಸೇವೆ ಮಾಡುತ್ತಿದ್ದೇನೆ. ಒಂದಷ್ಟು ಜನರ ಜೀವ ಉಳಿದರೆ ಅದೇ ನನ್ನ ಭಾಗ್ಯ’ ಎಂದರು.

‘ಕಳೆದ ವರ್ಷ ಅಲ್‌ ಅಮಿನ್‌ ಆಸ್ಪತ್ರೆಯಲ್ಲಿ ಕೋವಿಡ್‌ ಪೀಡಿತರಿಗೆ ಮೂರು ತಿಂಗಳು ಉಚಿತ ಊಟ, ಉಪಾಹಾರ ನೀಡಿದ್ದೇನೆ. ಅಲ್ಲದೇ, ಚಾಣಕ್ಯ ಕರಿಯರ್‌ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿಗೆ ಬಂದಿದ್ದ ಸುಮಾರು 400 ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ಅವಧಿಯಲ್ಲಿ ಊಟ, ಉಪಾಹಾರದ ವ್ಯವಸ್ಥೆ ಕಲ್ಪಿಸಿದ್ದೇನೆ’ ಎಂದು ನೆನಪಿಸಿಕೊಂಡರು.

ಅಗತ್ಯವಿರುವವರು ಅವರ ಮೊಬೈಲ್‌ ನಂಬರ್‌ 9886165332 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT