ವಿಜಯಪುರ: ‘ಆಡು ಸಾಕಾಣಿಕೆಯು ಒಂದು ಬೃಹತ್ ಉದ್ಯಮವಾಗಿ ಬೆಳೆಯುತ್ತಿದ್ದು, ಇದರಿಂದ ರೈತರು ನಿರಂತರ ಉತ್ತಮ ಆದಾಯ ಪಡೆಯಬಹುದಾಗಿದೆ’ ಎಂದು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ಹೇಳಿದರು.
ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ 3 ದಿನಗಳ ಆಡು ಮತ್ತು ಕುರಿ ಸಾಕಾಣಿಕೆ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದರು.
ವ್ಯವಸ್ಥಾಪನಾ ಮಂಡಳಿಯ ಮಾಜಿ ಸದಸ್ಯ ಸುರೇಶ ಗೊಣಸಗಿ, ‘ರೈತರಿಗೆ ಧಾರವಾಡ ಕೃಷಿ ವಿ.ವಿಯಿಂದ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಂತ್ರಿಕ ಸಲಹೆ, ಮಾರ್ಗದರ್ಶನವನ್ನು ವಿಜ್ಞಾನಿಗಳು ನಿರಂತರವಾಗಿ ಮಾಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.
ಕೃಷಿ ಮಹಾವಿದ್ಯಾಲಯದ ಡೀನ್ ಎ.ಭೀಮಪ್ಪ ಮಾತನಾಡಿ, ‘ಆಡು ಮತ್ತು ಕುರಿ ಸಾಕಾಣಿಕೆ ಮಾಡಲು ಪಶು ವೈದ್ಯಕೀಯ ಇಲಾಖೆಯಿಂದ ಯೋಜನೆಗಳಿವೆ. ತರಬೇತಿ ಪಡೆದ ನಂತರ ಬ್ಯಾಂಕ್‌ನಿಂದ ಸಾಲದ ಸೌಲಭ್ಯ ಸಿಗುತ್ತದೆ. ಇದರಿಂದ ಹೆಚ್ಚಿನ ಮತ್ತು ನಿರಂತರ ಆದಾಯ ಪಡೆಯಬಹುದು’ ಎಂದು ಹೇಳಿದರು.
ಸಹ ಸಂಶೋಧನಾ ನಿರ್ದೇಶಕ ಅಶೋಕ ಸಜ್ಜನ ಮಾತನಾಡಿ, ಇಂಡಿ ಕೃಷಿ ವಿಜ್ಞಾನ ಕೇಂದ್ರದ ಶಿವಶಂಕರಮೂರ್ತಿ, ಪ್ರಸಾದ ಎಂ.ಜಿ., ಸಹ ವಿಸ್ತರಣಾ ನಿರ್ದೇಶಕ ರವೀಂದ್ರ ಬೆಳ್ಳಿ, ಎಸ್.ಎಂ. ವಸ್ತ್ರದ, ಶ್ವೇತಾ ಮನ್ನಿಕೇರಿ, ಪ್ರಸನ್ನ, ವಿಜಯಲಕ್ಷ್ಮೀ ಮುಂದಿನಮನಿ ಇದ್ದರು.