ಗುರುವಾರ , ಮೇ 26, 2022
26 °C
ಮೀಸಲು ಬದಲು ಸಾಮಾನ್ಯ ಕ್ಷೇತ್ರದಿಂದ ಕಾರಜೋಳ ಸ್ಪರ್ಧಿಸಲಿ: ಸಂಗಮೇಶ ಬಬಲೇಶ್ವರ ಸವಾಲು

ಲಿಂಗಾಯತರ ಅಸ್ಮಿತೆಯೊಂದಿಗೆ ಕಾರಜೋಳ ಚೆಲ್ಲಾಟ: ಸಂಗಮೇಶ ಬಬಲೇಶ್ವರ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಶಾಸಕ ಎಂ.ಬಿ.ಪಾಟೀಲರು ಲಿಂಗಾಯತ ನಾಯಕರಲ್ಲ. ಸರ್ಕಾರದ ಜಾತಿ ಪಟ್ಟಿಯಲ್ಲಿ ಅವರ ಸಮುದಾಯವಿಲ್ಲ‘ ಎಂದು ತಮ್ಮ ಹಿಂಬಾಲಕರಿಂದ ಬಾಲಿಶ ಹೇಳಿಕೆ ಕೊಡಿಸುವ ಮೂಲಕ ಸಚಿವ ಗೋವಿಂದ  ಕಾರಜೋಳ ಅವರು ಕನಿಷ್ಠ ಪ್ರಜ್ಞೆ ಇಲ್ಲದೆ ಲಿಂಗಾಯತರ ಅಸ್ಮಿತೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ರಾಷ್ಟ್ರೀಯ ವಕ್ತಾರ ಸಂಗಮೇಶ ಬಬಲೇಶ್ವರ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಬಿ.ಪಾಟೀಲ ಲಿಂಗಾಯತ ನಾಯಕರಲ್ಲ; ಕಾರಜೋಳ ಲಿಂಗಾಯತ ಸಮುದಾಯಕ್ಕೆ ಸೇರಿದವರು’ ಎಂಬ ಅವರ ಹಿಂಬಾಲಕರ ಹೇಳಿಕೆಯನ್ನು ಸ್ವಾಗತಿಸುತ್ತೇವೆ. ಇದುವರೆಗೆ ದಲಿತರ ಹೆಸರಿನಲ್ಲಿ ಅಧಿಕಾರ, ಅಂತಸ್ತು, ಅನುಭವಿಸಿರುವ ಕಾರಜೋಳ ಹಾಗೂ ಅವರ ಮಕ್ಕಳು ಮುಂದಿನ ಚುನಾವಣೆಲ್ಲಿ ಮೀಸಲು ಕ್ಷೇತ್ರದ ಬದಲಾಗಿ, ಅವಳಿ ಜಿಲ್ಲೆಯ ಸಾಮಾನ್ಯ ಕ್ಷೇತ್ರಗಳಿಗೆ ಸ್ಪರ್ಧಿಸಲಿ’ ಎಂದು ಸವಾಲು ಹಾಕಿದರು.

ಸರ್ಕಾರದ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದು ಮೀಸಲಾತಿಗೆ ಅರ್ಹರು ಎಂಬ ಕಾರಣಕ್ಕೆ ಮಾತ್ರ. ಕೃಷಿ ಕಸುಬಿನ ಕುಡಒಕ್ಕಲಿಗರು, ಪಂಚಮಸಾಲಿಗಳು, ಬಣಜಿಗರು, ರೆಡ್ಡಿಗಳು, ಗಾಣಿಗರು ಸೇರಿದಂತೆ ಹಲವು ಜಾತಿಗಳು 12ನೇ ಶತಮಾನದಲ್ಲಿ ಬಸವಾದಿ ಶರಣರ ಆಶಯಕ್ಕೆ ಒಳಗಾಗಿ ‘ಲಿಂಗಾಯತ’ ಎಂಬ ದೀಕ್ಷೆ ಪಡೆದು ಗುರುಲಿಂಗಜಂಗಮರ ಪರಂಪರೆಯಲ್ಲಿ ಇಂದಿಗೂ ಬೆಳೆದು ಬಂದಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಮೀಸಲಾತಿಗಾಗಿ ಸರ್ಕಾರಗಳು ಜಾತಿ ಪಟ್ಟಿಯನ್ನು ಮಾಡಿದ್ದು, ಇದರಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಹಿಂದುಳಿದ ಜಾತಿಗಳಿಗೆ ಅಗತ್ಯ ಮೀಸಲಾತಿ ಸೌಲಭ್ಯ ಸಿಗಬೇಕು ಎನ್ನುವ ಕಾರಣಕ್ಕಾಗಿ ಆ ಪಟ್ಟಿಯಲ್ಲಿ ಕಾಲ-ಕಾಲಕ್ಕೆ ವಿವಿಧ ಜಾತಿಗಳು ಸೇರ್ಪಡೆಗೊಳ್ಳುತ್ತಿವೆ ಎಂದರು.

ಲಿಂಗಾಯತ ನಾಯಕರಾದ ಎಸ್.ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲರು ಮುಖ್ಯಮಂತ್ರಿಗಳಾದಾಗ ಅವರ ಜಾತಿಗಳು ಸರ್ಕಾರದ ಜಾತಿ ಪಟ್ಟಿಯಲ್ಲಿ ಇರಲಿಲ್ಲ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾದರ ಉಪಜಾತಿ ಕೂಡ ಸರ್ಕಾರದ ಜಾತಿ ಪಟ್ಟಿಯಿಂದ ಹೊರಗಿದೆ. ಹಾಗಿದ್ದರೆ ಅವರೂ ಲಿಂಗಾಯತರಲ್ಲವೇ? ಎಂದು ಪ್ರಶ್ನಿಸಿದರು.

2009ರ ಮುಂಚೆ ಲಿಂಗಾಯತ ಪಂಚಮಸಾಲಿ ಸಮುದಾಯ ಸಹ ಸರ್ಕಾರದ ಜಾತಿ ಪಟ್ಟಿಯಿಂದ ಹೊರಗಿತ್ತು. ಹಾಗಿದ್ದರೆ, ಪಂಚಮಸಾಲಿಗಳು ಲಿಂಗಾಯತರಲ್ಲವೇ? ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಶಿವಾನಂದ ಪಾಟೀಲ, ಎಂ.ಸಿ.ಮನಗೂಳಿ 2009ಕ್ಕಿಂತ ಮುಂಚೆ ಲಿಂಗಾಯತರಾಗಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಇಂದಿಗೂ ಸಹ ಕುಡಒಕ್ಕಲಿಗ, ಆದಿಬಣಜಿಗ ಸೇರಿದಂತೆ ಹಲವು ಜಾತಿಗಳು ಸರ್ಕಾರದ ಜಾತಿ ಪಟ್ಟಿಯಿಂದ ಹೊರಗಡೆ ಇವೆ. ಹಾಗಿದ್ದರೆ ಆ ಜಾತಿಗೆ ಸೇರಿದ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಇಂದಿಗೂ ಲಿಂಗಾಯತರಲ್ಲವೇ? ಎಂದು ಕೇಳಿದರು.

ವಿಜಯಪುರ ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಬಿ.ಎಲ್.ಡಿ.ಇ ಸಂಸ್ಥೆ  ನಿರ್ದೇಶಕ ಎನ್.ಎಸ್.ಅಳ್ಳೊಳ್ಳಿ, ಗಡಿ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ, ಅಖಿಲ ಭಾರತ ಲಿಂಗಾಯತ ಕುಡು ಒಕ್ಕಲಿಗ ಮಹಾಸಭಾದ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಶಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ, ಪ್ರಗತಿಪರ ರೈತ ಚೆನ್ನಪ್ಪ ಕೊಪ್ಪದ, ವೀರಶೈವ ಲಿಂಗಾಯತ ಆದಿ ಬಣಜಿಗ ಸಮುದಾಯದ ಮುಖಂಡ ಸೋಮನಿಂಗ ಕಟಾವಿ, ವೀರಶೈವ ಲಿಂಗಾಯತ ಆದಿಬಣಜಿಗ ಸಮುದಾಯ ಮುಖಂಡ ರಾಜು ಜೋರಾಪುರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದು ಅಂತ್ಯವಲ್ಲ; ಆರಂಭ

ಸಚಿವ ಕಾರಜೋಳ ಅವರ ಹಿತೈಷಿ ಕೇಂದ್ರದ ಮಾಜಿ ಸಚಿವರೊಬ್ಬರ ವಿನಂತಿಯ ಮೇರೆಗೆ ನಮ್ಮಲ್ಲಿ ಪರಸ್ಪರ ಕಿತ್ತಾಟ ಒಳ್ಳೆಯದಲ್ಲ. ಇದನ್ನು ಇಲ್ಲಿಗೆ ಕೈಬಿಡುತ್ತೇವೆ ಎಂದು ಹೇಳಿದ್ದೇವು. ಮರುದಿನವೇ ತಮ್ಮ ಬೆಂಬಲಿಗರ ಮೂಲಕ ಈ ರೀತಿ ಕ್ಷುಲ್ಲಕ ಹೇಳಿಕೆಗಳನ್ನು ಕೊಡಿಸುವ ಮೂಲಕ ಪುನಃ ತಮ್ಮ ಚಾಳಿ ಮುಂದುವರೆಸಿದ್ದಾರೆ. ಇನ್ನು ನಾವು ಸುಮ್ಮನಿರುವುದಿಲ್ಲ. ಎಲ್ಲದಕ್ಕೂ ಸಿದ್ಧರಾಗಿಯೇ ಇದ್ದೇವೆ. ಇದು ಅಂತ್ಯವಲ್ಲ, ಆರಂಭ ಎಂದು ಸಂಗಮೇಶ ಬಬಲೇಶ್ವರ ಪಂಥಾಹ್ವಾನ ನೀಡಿದರು.

ಬಾಂಬ್‌ ಎಲ್ಲಿ?: ನೀರಾವರಿಗೆ ಸಂಬಂಧಿಸಿದಂತೆ ಕಾರಜೋಳ ಅವರು ಬಾಂಬ್ ಸಿಡಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಹಲವು ಬಾಂಬ್‍ಗಳನ್ನು ಸಿಡಿಸಿದ್ದು, ಅವು ಎಲ್ಲಿ ಸ್ಪೋಟವಾಗಿವೆ ಎಂಬುದು ಎಲ್ಲರಿಗೂ ಗೊತ್ತು ಎಂದು ಛೇಡಿಸಿದರು.

ಸಿರಸಂಗಿ ವಂಶಸ್ಥರಿಗೆ ಅವಮಾನ

ಲಿಂಗಾಯತರ ಅಸ್ಮಿತೆಯನ್ನು ಒಗ್ಗೂಡಿಸಿದ ಹಾನಗಲ್ ಕುಮಾರಸ್ವಾಮಿ, ಅರಟಾಳ ರುದ್ರಗೌಡ ಅವರೊಂದಿಗೆ ಅಖಿಲಭಾರತ ವೀರಶೈವ ಮಹಾಸಭೆ ಕಟ್ಟಲು ಕಾರಣರಾದ ಮಹಾದಾನಿ ಸಿರಸಂಗಿ ಲಿಂಗರಾಜರ ವಂಶಸ್ಥರಾದ ಎಂ.ಬಿ.ಪಾಟೀಲರನ್ನು ಈ ಮೂಲಕ ಅವಮಾನಿಸಿದ್ದಾರೆ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.

ಲಿಂಗಾಯತರನ್ನು ಒಗ್ಗೂಡಿಸಿ, ತಮ್ಮ ಸಮಸ್ತ ಆಸ್ತಿಯನ್ನು ವಿಲ್ ಮೂಲಕ ದಾನ ದತ್ತಿಯನ್ನು ನೀಡಿ, ನಮ್ಮ ನಾಡಿನ ಸಾವಿರಾರು ಲಿಂಗಾಯತ ವಿದ್ಯಾರ್ಥಿಗಳಿಗೆ ಸಿರಸಂಗಿ ಟ್ರಸ್ಟ್ ಕಾರಣವಾಗಿದೆ. ಎಸ್.ಆರ್.ಬೊಮ್ಮಾಯಿ, ವಿ.ಎಸ್.ಮಳಿಮಠ, ಬಿ.ಡಿ.ಜತ್ತಿ ಸೇರಿದಂತೆ ಹಲವು ಮುತ್ಸದ್ದಿಗಳು ಈ ಟ್ರಸ್ಟಿನ ಸ್ಕಾಲರ್‌ಶಿಫ್‍ನಿಂದ ತಮ್ಮ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಎಂ.ಬಿ.ಪಾಟೀಲರ ಪೂರ್ವಜರಾದ ಸಿರಸಂಗಿ ಲಿಂಗರಾಜರು ಕೆ.ಎಲ್.ಇ. ಸಂಸ್ಥೆ ಸೇರಿದಂತೆ ನಾಡಿನ ತುಂಬ ಹಲವು ಲಿಂಗಾಯತ ಸಂಸ್ಥೆಗಳ ಸ್ಥಾಪನೆಗೆ ಕಾರಣರಾಗಿದ್ದಾರೆ ಎಂದರು.

ಸಚಿವ ಗೋವಿಂದ ಕಾರಜೋಳ ಅವರು ಕ್ಷುಲ್ಲಕ, ಕೀಳುಮಟ್ಟದ ರಾಜಕೀಯದಿಂದ ಹಿಂದೆ ಸರಿಯಬೇಕು. ಅಹಿತಕರ ವಾತಾವಣ ಸೃಷ್ಟಿಯಾದರೆ ಅದಕ್ಕೆ ಅವರೇ ಹೊಣೆ

–ಸಂಗಮೇಶ ಬಬಲೇಶ್ವರ, ರಾಷ್ಟ್ರೀಯ ವಕ್ತಾರ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು