ರಮೇಶ ನಾಯಿಕ
ಸೋಲಾಪುರ: ದಕ್ಷಿಣ ಸೋಲಾಪುರ ತಾಲ್ಲೂಕಿನಲ್ಲಿ ಭೀಮಾ-ಸೀನಾ ನದಿಗಳ ಸಂಗಮದಲ್ಲಿರುವ ಹತ್ತರಸಂಗ - ಕೂಡಲದಲ್ಲಿರುವ ಸಂಗಮೇಶ್ವರ ಹಾಗೂ ಹರಿಹರೇಶ್ವರ ದೇವಸ್ಥಾನಗಳು ಪ್ರಾಚೀನ ದೇವಾಲಯಗಳು.
ವಾಸ್ತುಶಿಲ್ಪ, ಶಿಲ್ಪಕಲೆ ಸೌಂದರ್ಯ, ಬಹುಮುಖಿ ಶಿವಲಿಂಗ ಗಮನ ಸೆಳೆಯುತ್ತವೆ. ಶೈವ ಮತ್ತು ವೈಷ್ಣವ ಎರಡೂ ಪಂಗಡಗಳ ಸಮ್ಮಿಲನದ ಅಪರೂಪದ ತಾಣವಾಗಿದೆ. ಭೀಮಾ- ಸೀನಾ ನದಿಗಳ ಅದ್ಭುತ ಸಂಗಮ ಸ್ಥಳವೂ ಆಗಿದೆ. ಮರಾಠಿ ಭಾಷೆಯ ಮೊದಲ ಶಾಸನ ಲಭಿಸಿರುವುದು ಇಲ್ಲಿಯೇ.
ಹತ್ತರಸಂಗ - ಕೂಡಲ ಧಾರ್ಮಿಕ ಪ್ರವಾಸೋದ್ಯಮ ಮತ್ತು ಪ್ರಕೃತಿ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ಜೊತೆಗೆ ಸಂಗಮೇಶ್ವರ ದೇವಸ್ಥಾನ ಮತ್ತು ಹರಿಹರೇಶ್ವರ ದೇವಸ್ಥಾನಗಳು ಚಾಲುಕ್ಯರ ಕಾಲದ್ದಾಗಿವೆ.
ಹರಿಹರೇಶ್ವರ ದೇವಸ್ಥಾನವು 1995ರ ಮೊದಲು ಮಣ್ಣಿನಲ್ಲಿ ಹೂತು ಹೋಗಿತ್ತು. ಸೋಲಾಪುರದ ದಯಾನಂದ ಕಾಲೇಜಿನ ಪ್ರೊ. ಗಜಾನನ ಭೀಡೆ ಗ್ರಾಮಸ್ಥರ ಸಹಾಯದಿಂದ ಇದನ್ನು ಉತ್ಖನನ ಮಾಡಿ ಹರಿಹರೇಶ್ವರ ದೇವಸ್ಥಾನವನ್ನು ಬೆಳಕಿಗೆ ತಂದರು.
ಸ್ವರ್ಗ ಮಂಟಪ ಮತ್ತು ಮುಖ ಮಂಟಪ ಎಂಬ ಎರಡು ಗರ್ಭಗುಡಿಗಳಿವೆ. ಎಡ ಗರ್ಭಗುಡಿಯಲ್ಲಿ ಶಿವಲಿಂಗವಿದೆ ಮತ್ತು ಬಲ ಗರ್ಭಗುಡಿಯಲ್ಲಿ ಮುರಳೀಧರ ಕೃಷ್ಣನ ಚಿತ್ರವಿದೆ. ಎರಡು ಗರ್ಭಗುಡಿಗಳ ನಡುವೆ ದೇವ ಕೋಷ್ಟಕದಲ್ಲಿ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅದು ಅದ್ಬುತ ಮತ್ತು ಆಕರ್ಷಕ ಶಿಲ್ಪಗಳನ್ನು ಹೊಂದಿದೆ. ಸ್ವರ್ಗ ಮಂಟಪದಲ್ಲಿಯೇ ಕಾಲಭೈರವನಾಥನ ರೂಪದಲ್ಲಿ ಭವ್ಯವಾದ ಶಿವನ ವಿಗ್ರಹವಿದೆ.
ಹರಿಹರೇಶ್ವರ ದೇವಸ್ಥಾನದ ಮುಖಮಂಟಪದ ಚಾವಣಿಯು ಒಂದು ಮುಖ ಮತ್ತು ಐದು ದೇಹಗಳ ಅಪರೂಪದ ಶಿಲ್ಪವನ್ನು ಹೊಂದಿದೆ. ಇದು ಕೃಷ್ಣ ಮತ್ತು ಗೋಪಿಕಾ ಶಿಲ್ಪಗಳನ್ನು ಎರಡೂ ಬದಿಗಳಲ್ಲಿ ಚಾವಣಿಯ ಮೇಲೆ ಜೋಡಿಸಲಾಗಿದೆ. ಮುಖ ಮಂಟಪದ ಚಾವಣಿಯ ಮೇಲೆ ಆರೋಹಿತವಾದ ಭಗವಾನ್ ಕೃಷ್ಣನ ಅದ್ಭುತ ಶಿಲ್ಪವಿದೆ.
ಬಹುಮುಖಿ ಶಿವಲಿಂಗದ ವಿಶಿಷ್ಟ ಶಿಲ್ಪವೂ ಹರಿಹರೇಶ್ವರ ದೇವಾಲಯದ ಉತ್ಖನನದಲ್ಲಿ ಪತ್ತೆಯಾಗಿದೆ.
ಶಿವನ 359 ಚಿತ್ರಗಳನ್ನು ಕೆತ್ತಲಾಗಿದೆ. ಶಿವನ ಮುಖಗಳು ಕುಳಿತಿರುವ ಮತ್ತು ಕೆಲವು ನಿಂತಿರುವ ಚಿತ್ರಗಳನ್ನು ಕೆತ್ತಲಾಗಿದೆ. ಈ ಶಿವಲಿಂಗವನ್ನು ವಿಶ್ವರೂಪ ಶಿವ ದರ್ಶನವೆಂದು ಕರೆಯುತ್ತಾರೆ. ಇದು ವಿಶ್ವದ ಏಕೈಕ ಶಿವಲಿಂಗವಾಗಿದೆ.
ಮುಖ್ಯ ಶಿವಲಿಂಗ ಮತ್ತು 359 ಚಿತ್ರಗಳು ಹಾಗೂ ಪಂಚಮಹಾಭೂತಗಳಿಂದ ರಚಿತವಾದ ಮಾನವ ದೇಹವು ಐಕ್ಯವಾಗಿದ್ದು, ವರ್ಷಕ್ಕೊಮ್ಮೆ ಅಭಿಷೇಕ ಅಥವಾ ನಮಸ್ಕಾರ ಮಾಡಿದರೆ ಒಂದು ವರ್ಷದವರೆಗೆ ಅಭಿಷೇಕ ಮಾಡಿದ ಪುಣ್ಯವೂ ಸಿಗುತ್ತದೆ ಎಂಬುದು ಇದರ ಹಿಂದಿನ ಪರಿಕಲ್ಪನೆ ಆಗಿದೆ ಎಂಬುದು ಇದು ಭಕ್ತರ ನಂಬಿಕೆ.
ಹತ್ತರಸಂಗ - ಕೂಡಲದಲ್ಲಿ ಪ್ರತಿ ವರ್ಷ ಮಹಾಶಿವರಾತ್ರಿ , ಶ್ರಾವಣ ಮಾಸ, ಮಕರ ಸಂಕ್ರಾಂತಿಯ ಸಮಯದಲ್ಲಿ ಜಾತ್ರೆಗಳು ನಡೆಯುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.