ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ | ಬಿಸಿಲಾಘಾತ: ಸಾವಿರಾರು ಮೀನುಗಳು ಸಾವು

ಕೃಷಿ ಹೊಂಡದಲ್ಲಿ ಮೀನು ಕೃಷಿ ಮಾಡಿದ ರೈತಗೆ ಲಕ್ಷಾಂತರ ರೂಪಾಯಿ ನಷ್ಟ
Published 12 ಮೇ 2024, 4:31 IST
Last Updated 12 ಮೇ 2024, 4:31 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ರೈತರೊಬ್ಬರು ಕೃಷಿ ಹೊಂಡದಲ್ಲಿ ಸಾಕಿದ್ದ ಲಕ್ಷಾಂತರ ಮೌಲ್ಯದ ಮೀನುಗಳು ಬಿಸಿಲಾಘಾತಕ್ಕೆ ಸಾವನಪ್ಪಿದ್ದು, ಭಾರೀ ನಷ್ಠ ಸಂಭವಿಸಿದೆ.

ಹೌದು, ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿ(ಮದಭಾವಿ ತಾಂಡ)ಯ ಮೀನು ಕೃಷಿಕ ನರೇಂದ್ರ ಕವಟಗಿ ಅವರು ಬೃಹತ್‌ ಕೃಷಿ ಹೊಂಡದಲ್ಲಿ ಸಾಕಿದ್ದ ಹಾವು ಮೀನು (ಸ್ನೇಕ್‌ ಹೆಡ್‌ ಮರ್ಲ್‌)ಗಳನ್ನು ಇನ್ನೇನು ಹಿಡಿದು, ಮಾರುಕಟ್ಟೆಗೆ ಒಯ್ಯಬೇಕು ಎನ್ನುವಾಗಲೇ ಸತ್ತಿದ್ದು, ದಿಕ್ಕು ತೋಚದಂತಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ನರೇಂದ್ರ ಕವಟಗಿ, ‘ಕಳೆದ 15 ದಿನಗಳ ಈಚೆಗೆ ಜಿಲ್ಲೆಯಲ್ಲಿ 45–46 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾದ ಕಾರಣ ಆಮ್ಲಜನಕದ ಕೊರತೆಯಿಂದ ಮೀನುಗಳು ಏಕಾಏಕಿ ಸಾವಿಗೀಡಾಗಿವೆ. ಬೇರೆ ಯಾವುದೇ ಕಾಯಿಲೆಯಿಂದ ಮೀನುಗಳು ಸತ್ತಿಲ್ಲ’ ಎಂದು ತಿಳಿಸಿದರು. 

‘ಒಂದು ವರ್ಷದ ಹಿಂದೆ 17 ಸಾವಿರ ಮೀನು ಮರಿಗಳನ್ನು ಹೈದರಾಬಾದ್‌ನಿಂದ ತಂದು ಕೃಷಿ ಹೊಂಡದಲ್ಲಿ ಬಿಟ್ಟಿದ್ದೆವು. ಮೀನು ಕೃಷಿ, ಆಹಾರಕ್ಕೆ ಸುಮಾರು ₹19 ಲಕ್ಷ ಖರ್ಚು ಮಾಡಿದ್ದೆವು’ ಎಂದು ತಿಳಿಸಿದರು.

‘ಹೈದರಾಬಾದ್‌ನ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಈ ಮೀನಿಗೆ ಕೆ.ಜಿ.ಗೆ ₹350 ದರ ಇದೆ. ಚಿಲ್ಲರೇ ಮಾರುಕಟ್ಟೆಯಲ್ಲಿ ₹ 750ರಿಂದ ₹800 ಇದೆ. ಒಂದೊಂದು ಮೀನು ಸುಮಾರು 1 ರಿಂದ 1.5 ಕೆ.ಜಿ ತೂಗುತ್ತಿದ್ದವು. ಸುಮಾರು 12 ರಿಂದ 14 ಟನ್‌ ಇಳವರಿ ನಿರೀಕ್ಷೆ ಇತ್ತು. ಎಲ್ಲ ಮೀನುಗಳು ಸತ್ತಿರುವುದರಿಂದ ಸುಮಾರು ₹32 ಲಕ್ಷದಿಂದ ₹ 35 ಲಕ್ಷ ನಷ್ಠವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಹಿಂದೆ ಪ್ರಥಮ ಬಾರಿಗೆ ಒಮ್ಮೆ ಎಂಟು ಟನ್‌ ಮೀನು ಮಾರಾಟ ಮಾಡಿದ್ದೆವು. ಹೈದರಾಬಾದ್‌ನಲ್ಲಿ ಈ ಮೀನಿಗೆ ಉತ್ತಮ ಮಾರುಕಟ್ಟೆ, ಬೇಡಿಕೆ ಇದ್ದು, ಜೂನ್‌ ಸಾತ್‌ಗೆ (ಜೂನ್‌ 7) ಮೀನುಗಳನ್ನು ಕೊಂಡೊಯ್ದು ಮಾರಾಟ ಮಾಡಲು ಉದ್ದೇಶಿಸಲಾಗಿತ್ತು. ಅಷ್ಟರಲ್ಲೇ ದೊಡ್ಡ ಆಘಾತವಾಗಿದೆ’ ಎಂದು ಹೇಳಿದರು.

ಕೃಷಿ ಹೊಂಡದಲ್ಲಿ ಸಾಕಿದ್ದ ಮೀನಿಗೆ ವಿಮೆ ಮಾಡಿಸಿರಲಿಲ್ಲ. ಸರ್ಕಾರ ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕು ಸೂಕ್ತ ಪರಿಹಾರ ಕೊಟ್ಟರೇ ನಮಗೆ ಅನುಕೂಲವಾಗಲಿದೆ.
ನರೇಂದ್ರ ಕವಟಗಿ, ಮೀನು ಕೃಷಿಕ

‘ಮೀನುಗಳು ಸತ್ತು, ಕೊಳೆಯಲಾರಂಭಿಸಿದ್ದು, ದುರ್ವಾಸನೆ ಬೀರತೊಡಗಿದೆ. ಇದೀಗ ಇಡೀ ಕೃಷಿ ಹೊಂಡವನ್ನು ಪೂರ್ಣವಾಗಿ ಸ್ವಚ್ಛ ಮಾಡಬೇಕಾಗಿದೆ’ ಎಂದರು. 

‘ಮೀನು ಸಾಕುವುದರ ಜೊತೆಗೆ ಇತರೆ ರೈತರಿಗೂ ಮೀನು ಸಾಕಾಣಿಕೆ ಬಗ್ಗೆ ಪರಿಚಯ, ತರಬೇತಿ ನೀಡುತ್ತಿದ್ದೆವು. ವಿಜಯಪುರ ಜೊತೆಗೆ ರಾಯಚೂರು ಜಿಲ್ಲೆ ರೈತರಿಗೆ ಮೀನು ಸಾಕಾಣಿಕೆಗೆ ಮಾರ್ಗದರ್ಶನ ಮಾಡಿದ್ದೆವು. ಇದೀಗ ನಾವೇ ಸಮಸ್ಯೆಗೆ ಒಳಗಾಗಿರುವುದರಿಂದ ಇತರೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ’ ಎಂದು ಹೇಳಿದರು.

ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ  ಬಿಸಿಲಾಘಾತಕ್ಕೆ ಕೃಷಿ ಹೊಂಡದಲ್ಲೇ ಸತ್ತಿರುವ ಮೀನನ್ನು ತೋರಿಸಿದ ಮೀನು ಕೃಷಿಕ ನರೇಂದ್ರ ಕವಟಗಿ 
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ  ಬಿಸಿಲಾಘಾತಕ್ಕೆ ಕೃಷಿ ಹೊಂಡದಲ್ಲೇ ಸತ್ತಿರುವ ಮೀನನ್ನು ತೋರಿಸಿದ ಮೀನು ಕೃಷಿಕ ನರೇಂದ್ರ ಕವಟಗಿ 
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ ಮೀನು ಕೃಷಿಕ ನರೇಂದ್ರ ಕವಟಗಿ ಅವರ ಬೃಹತ್‌ ಕೃಷಿ ಹೊಂಡದಲ್ಲಿ ಬಿಸಿಲಾಘಾತಕ್ಕೆ ಸತ್ತು ತೇಲುತ್ತಿರುವ ಮೀನುಗಳು
ವಿಜಯಪುರ ತಾಲ್ಲೂಕಿನ ಕವಲಗಿ ಸಮೀಪದ ಅಹೇರಿಯಲ್ಲಿ ಮೀನು ಕೃಷಿಕ ನರೇಂದ್ರ ಕವಟಗಿ ಅವರ ಬೃಹತ್‌ ಕೃಷಿ ಹೊಂಡದಲ್ಲಿ ಬಿಸಿಲಾಘಾತಕ್ಕೆ ಸತ್ತು ತೇಲುತ್ತಿರುವ ಮೀನುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT