ಬುಧವಾರ, ಡಿಸೆಂಬರ್ 8, 2021
25 °C
ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅಭಿಮತ

ಬಸವರಾಜ ಬೊಮ್ಮಾಯಿಗೆ ಆಶೀರ್ವಾದ ಮಾಡಿದ್ದೇನೆ: ಎಚ್‌ಡಿ ದೇವೇಗೌಡ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ತಮ್ಮ ಇಳಿವಯಸ್ಸನ್ನು ಲೆಕ್ಕಿಸದೇ ಎರಡು ವಾರಗಳಿಂದ ಸಿಂದಗಿ ಉಪ ಚುನಾವಣಾ ಅಖಾಡದಲ್ಲೇ ಬೀಡುಬಿಟ್ಟು, ಪಕ್ಷದ ಅಭ್ಯರ್ಥಿ ಪರ ಹಳ್ಳಿ, ಹಳ್ಳಿ ತಿರುಗಿ ಮತಯಾಚಿಸುತ್ತಿದ್ದಾರೆ.

‘ನಾನು ಯಾವ ಚುನಾವಣೆಯನ್ನೂ ಸಿಂದಗಿ ಉಪ ಚುನಾವಣೆಯಷ್ಟು ಗಂಭೀರವಾಗಿ ಪ‍ರಿಗಣಿಸಿಲ್ಲ’ ಎನ್ನುತ್ತಲೇ ಮಾತಿಗಿಳಿದರು ದೇವೇಗೌಡರು. ಬಿಡುವಿಲ್ಲದ ಚುನಾವಣಾ ಪ್ರಚಾರದ ವೇಳೆ ‘ಪ್ರಜಾವಾಣಿ’ ಅವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣಪಾಠ ಇಂತಿದೆ.

l ಬಿಜೆಪಿ ಬಗ್ಗೆ ಮೃದು ಧೋರಣೆ ಏಕೆ?

–ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ನಮ್ಮ ಮನೆಗೆ ಬಂದಿದ್ದರು. ತಂದೆ, ತಾಯಿ ಯಾರೂ ಇಲ್ಲ. ನೀವೇ ನನಗೆ ತಂದೆ, ತಾಯಿ ಆಶೀರ್ವದಿಸಿ ಎಂದು ನನ್ನ ಹಾಗೂ ನನ್ನ ಹೆಂಡತಿ ಕಾಲಿಗೆ ನಮಸ್ಕರಿಸಿದರು. ನಿನ್ನನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪ, ಅವರನ್ನು ಜೊತೆಗೆ ಇಟ್ಟುಕೊಂಡು, ಹೈಕಮಾಂಡ್‌ಗೆ ವಿಧೇಯನಾಗಿ ನಡೆ, ಎರಡು ವರ್ಷ ಪೂರ್ಣಗೊಳಿಸು. ನನ್ನಿಂದ ಏನೂ ತೊಂದರೆ ಇಲ್ಲ ಎಂದು ಹೇಳಿ ಆಶೀರ್ವದಿಸಿದ್ದೇನೆ. ನನಗೆ ಪಕ್ಷ ಕಟ್ಟಲು ಸಮಯ ಬೇಕು, 2023ರವರೆಗೆ ಬಿಜೆಪಿ ಟಚ್‌ ಮಾಡಲ್ಲ. ಒಳಗೊಂದು, ಹೊರಗೊಂದು ಮಾತನಾಡಲ್ಲ.

l ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಮ್ಮ ಟಾರ್ಗೆಟ್‌ ಆಗಿದೆಯಲ್ಲ ಏಕೆ?

–ಕಾಂಗ್ರೆಸ್‌ನವರು ನನ್ನನ್ನು ಬಿಜೆಪಿ ಏಜೆಂಟ್‌ ಎಂದು ಕರೆದಿದ್ದಾರೆ. ಜೆಡಿಎಸ್‌ ಪಕ್ಷವನ್ನು ಬಿಜೆಪಿ ‘ಬಿ’ ಟೀಂ, ಅಲ್ಪಸಂಖ್ಯಾತ ಅಭ್ಯರ್ಥಿ ನಿಲ್ಲಿಸಿದ್ದು ಬಿಜೆಪಿ ಗೆಲ್ಲಿಸಲು ಎಂದು ಆರೋಪಿಸುತ್ತಿದ್ದಾರೆ. ಇದೆಲ್ಲ ಮನಸ್ಸಿಗೆ ತುಂಬಾ ಬೇಸರ ಉಂಟು ಮಾಡಿದೆ. ಎಂ.ಸಿ. ಮನಗೂಳಿ ಯನ್ನು ರಾಜಕೀಯಕ್ಕೆ ತಂದು, ಎರಡು ಬಾರಿ ಶಾಸಕ, ಸಚಿವನನ್ನಾಗಿ ಮಾಡಿದ್ದು ನಾನೇ. ಇಡೀ ಕ್ಷೇತ್ರವನ್ನು ನೀರಾವರಿ ಮಾಡಿದ್ದೇನೆ. ಕ್ಷೇತ್ರಕ್ಕೆ ಇಷ್ಟೆಲ್ಲ ಉಪಕಾರ ಮಾಡಿದರೂ ಮನಗೂಳಿ ಮಗ ಮೋಸ ಮಾಡಿದರಲ್ಲ ಎಂಬ ನೋವು ಕಾಡುತ್ತಿದೆ. ಹೀಗಾಗಿ ಈ ಕ್ಷೇತ್ರದ ಉಪ ಚುನಾವಣೆ ಜವಾಬ್ದಾರಿ ನಾನೇ ವಹಿಸಿಕೊಂಡಿದ್ದೇನೆ. 

l ಸಿಂದಗಿ ಕ್ಷೇತ್ರದಲ್ಲಿ ಮತದಾರರ ಪ್ರತಿಕ್ರಿಯೆ ಹೇಗಿದೆ?

–ಕೆಲವೆಡೆ 15–20 ಜನ ಬಂದು ಬರೀ ಹಾರ ಹಾಕಿ ಕಳುಹಿಸಿದ್ದಾರೆ. ಇನ್ನೂ ಕೆಲವೆಡೆ ಉತ್ಸಾಹದಿಂದ ಊರೊಳಗೆ ಕರೆದುಕೊಂಡು ಹೋಗಿ ನೂರಾರು ಜನ ಸೇರಿ ತೋರಿಸುವ ಗೌರವ ನನಗೆ ಸಮಾಧಾನ ನೀಡಿದೆ. ಪಕ್ಷ ನಿಶ್ಚಿತ ಉತ್ತಮ ಸಾಧನೆ ಮಾಡಲಿದೆ ಎಂಬ ವಿಶ್ವಾಸವಿದೆ.

l ಚುನಾವಣೆ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಲಿದೆಯೇ? 

–ಬೆಲೆ ಏರಿಕೆ ಹೊಸದೇನಲ್ಲ. ಕಾಂಗ್ರೆಸ್‌ ಕಾಲದಲ್ಲೂ ಬೆಲೆ ಏರಿಕೆ ಆಗಿದೆ. ನಾಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾ ಇಂದಿರಾಗಾಂಧಿ ಅವರು ‘ಒಂದು ಹೊತ್ತು ಊಟ ಬಿಡಿ’ ಎಂದು ಹೇಳಿದ್ದರು. ಜನ ವೇದಿಕೆ ಮೇಲೆ ನುಗ್ಗಿ ‘ನಾವು ಇದಕ್ಕಾ ವೋಟ್‌ ಕೊಟ್ಟಿದ್ದು?’ ಎಂದು ದೊಡ್ಡ ಗಲಾಟೆ ಮಾಡಿದ್ದರು. ಸದ್ಯ ಬೆಲೆ ಏರಿಕೆಯಿಂದ ಜನರ ಮೇಲೆ ದೊಡ್ಡ ಭಾರ ಬಿದ್ದಿದೆ .

l ಜೆಡಿಎಸ್‌ ‘ಜಾತ್ಯತೀತ’ ಪಕ್ಷವಲ್ಲ ಎಂಬ ಆರೋಪಕ್ಕೇನು ಹೇಳಬಯಸುತ್ತೀರಿ?

ಸಿದ್ದರಾಮಯ್ಯ ಇರುವ ಇದೇ ಕಾಂಗ್ರೆಸ್‌ ತಮಿಳುನಾಡಿನಲ್ಲಿ ಈ ಹಿಂದೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪಕ್ಷದ ಜೊತೆ ಸೇರಿ ಆಡಳಿತ ನಡೆಸಲಿಲ್ಲವೇ? ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸಂಬಂಧ ಮಾಡಿದ್ದಾರಲ್ಲ. ಬಿಹಾರದಲ್ಲಿ ನಿತೀಶ್‌ ಕುಮಾರ್‌ ಸರ್ಕಾರದ ಜೊತೆ ಭಾಗಿಯಾಗಿಲ್ಲವೇ? ಸಿದ್ದರಾಮಯ್ಯ ಇದಕ್ಕೆ ಏನು ಉತ್ತರ ಹೇಳುತ್ತಾರೆ? ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಪಾಠ ಕೇಳುವ ಅಗತ್ಯ ನನಗಿಲ್ಲ. ಸದ್ಯ ದೇಶದಲ್ಲಿ ಏನು ನಡೆಯುತ್ತಿದೆ? ಪಶ್ಚಿಮ ಬಂಗಾಳ, ಕೇರಳ, ಗೋವಾ, ಗುಜರಾತ್‌, ಛತ್ತೀಸಗಡದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ? ಕಾಂಗ್ರೆಸ್‌ 2024ರವರೆಗೆ ಏನೇನಾಗುತ್ತದೆ ಕಾದು ನೋಡೋಣ. ಪ್ರಾದೇಶಿಕ ಪಕ್ಷಗಳನ್ನು ಬಿಟ್ಟು ಕಾಂಗ್ರೆಸ್‌ಗೆ ಏನೂ ಮಾಡಲು ಸಾಧ್ಯವಿಲ್ಲ.

 l ಮತದಾರರಲ್ಲಿ ನಿಮ್ಮ ಮನವಿ ಏನು?

–ಬದುಕಿನ ಕೊನೇ ಘಟ್ಟದಲ್ಲಿ ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಪ್ರಾದೇಶಿಕ ಪಕ್ಷವನ್ನು ಉಳಿಸಿ, ಕಡೆಗಣಿಸಬೇಡಿ ಎಂದು ಕೇಳಿಕೊಳ್ಳುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು