ಸೋಮವಾರ, ಜನವರಿ 25, 2021
26 °C
ಎಕ್ಸಲಂಟ್ ಕಾಲೇಜು ಪ್ರಾರಂಭೋತ್ಸವದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ಅಭಿಮತ

ಶೈಕ್ಷಣಿಕ ಬದುಕಿನ ಮುಖ್ಯ ಘಟ್ಟ ಪಿಯುಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ದ್ವಿತೀಯ ಪಿ.ಯು.ಸಿ ಶೈಕ್ಷಣಿಕ ಬದುಕಿನ ಮುಖ್ಯ ಘಟ್ಟವಾಗಿದ್ದು, ಹಿಂದಿನ ನಷ್ಟವನ್ನು ಮುಂದಿನ ನಾಲ್ಕಾರು ತಿಂಗಳ ಕಲಿಕೆಯಿಂದ ತುಂಬಿಕೊಳ್ಳಬೇಕು. ಉಳಿದಿರುವ ಸಮಯವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಾಂಧಿಚೌಕಿ ಸಿಪಿಐ ರವೀಂದ್ರ ನಾಯ್ಕೋಡಿ ಹೇಳಿದರು. ‌ 

ಇಲ್ಲಿನ ಅಥಣಿ ರಸ್ತೆಯಲ್ಲಿರುವ ಎಕ್ಸಲಂಟ್ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರಾರಂಭಿಸಲಾದ ಪ್ರಸಕ್ತ ಸಾಲಿನ ಪಿ. ಯು.ಸಿ. ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್‌ನಿಂದಾಗಿ ಒಂಬತ್ತು ತಿಂಗಳಿನಿಂದ ಶಾಲಾ –ಕಾಲೇಜಗಳು ಮುಚ್ಚಿ ಹೋಗಿದ್ದವು. ಆನ್‍ಲೈನ್ ತರಗತಿಗಳು ಗ್ರಾಮೀಣ ಭಾಗದ ಮಕ್ಕಳಿಗೆ ಸರಿಯಾಗಿ ತಲುಪದೆ ಕಲಿಕೆ ಅಸ್ತವ್ಯವಸ್ಥೆವಾಗಿತ್ತು ಎಂದರು.

ಅಮ್ಮನ ಮಡಿಲು ಚಾರಟೇಬಲ್ ಟ್ರಸ್ಟ್ ಹಾಗೂ ಆಕ್ಸಫರ್ಡ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ  ಸಂಗಮೇಶ ಬಬಲೇಶ್ವರ,  ಕೊರೊನಾ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ, ಈ ವೈರಸ್‍ನ ಜೊತೆಗೆ ಬದುಕಿ ಎಲ್ಲರೂ ಯಶಸ್ವಿಯಾಗಬೇಕಿದೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುವುದರಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಬೇಕು ಎಂದರು.

ಕೊರೊನಾ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಪಾಠ ಕಲಿಸಿದ್ದು, ಮನೆಯಲ್ಲಿಯ ಹಿರಿಯ ವಯೋಮಾನದವರನ್ನು ಕಾಳಜಿಯಿಂದ ನಾವೆಲ್ಲ ಕಾಣಬೇಕು. ಅದರೊಟ್ಟಿಗೆ ಶಿಕ್ಷಣದಲ್ಲಿ ಉತ್ತಮ  ಸಾಧನೆಗೈದು ಪಾಠ ಕಲಿಸಿದ ಗುರುಗಳಿಗೆ, ಪಾಲಕರಿಗೆ ಹಾಗೂ ಸಂಸ್ಥೆಗೆ ಗೌರವ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಎಕ್ಸಲಂಟ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಚೇರ್ಮನ್ ಬಸವರಾಜ ಕೌಲಗಿ ಮಾತನಾಡಿ, ಸರ್ಕಾರದ ಕೋವಿಡ್‌ ಮಾರ್ಗದರ್ಶಿ ನಿಯಮಗಳಂತೆ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಲೇಜು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕ, ಭಯಪಡದೆ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಾಗಯ್ಯ ಶಾಸ್ತ್ರಿ ಹಿರೇಮಠ ಅವರು ಸರಸ್ವತಿಯ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಕಾಲೇಜು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.

ಪ್ರಾಚಾರ್ಯ ಡಿ.ಎಲ್.ಬನಸೋಡೆ, ಶ್ರದ್ಧಾ ಜಾಧವ, ಉಪನ್ಯಾಸಕ ರವಿ ಕಲ್ಲೂರಮಠ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕೌಲಗಿ, ಕಾಲೇಜಿನ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.