ಬುಧವಾರ, ಅಕ್ಟೋಬರ್ 20, 2021
29 °C
ಗ್ರಾಮೀಣ, ಬಡ ವರ್ಗದ ವಿದ್ಯಾರ್ಥಿಗಳ ಕಲಿಕೆಗೆ ತೊಡಕು

ವಿಜಯಪುರ: ಹೆಚ್ಚಿದ ವಿದ್ಯಾರ್ಥಿಗಳು; ಸಾಲುತ್ತಿಲ್ಲ ವಸತಿ ನಿಲಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಸೇರಿದ 191ಕ್ಕೂ ಅಧಿಕ ವಸತಿ ನಿಲಯಗಳು ಇವೆಯಾದರೂ ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಬಯಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗಳಿಗೆ ತಕ್ಕಷ್ಟು ಈಗಿರುವ ವಸತಿ ನಿಲಯಗಳು ಸಾಲುತ್ತಿಲ್ಲ. ಪರಿಣಾಮ, ಶಾಲಾ–ಕಾಲೇಜುಗಳಿಂದ ದೂರವಿರುವ ಗ್ರಾಮೀಣ ಮತ್ತು ಆರ್ಥಿಕವಾಗಿ ಬಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲೆ ವರೆಗಿನ ಶೇ 90ರಷ್ಟು ವಿದ್ಯಾರ್ಥಿಗಳು ತಮ್ಮ ಊರುಗಳಲ್ಲೇ ಇರುವ ಶಾಲೆಗಳಲ್ಲಿ ಕಲಿಯುವುದರಿಂದ ಈ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಅಗತ್ಯತೆ ಅಷ್ಟಾಗಿ ಇರುವುದಿಲ್ಲ. ಆದರೆ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸ್‌ ವಿದ್ಯಾರ್ಥಿಗಳು ಅನಿವಾರ್ಯವಾಗಿ ಸಮೀಪದ ಪಟ್ಟಣ, ನಗರ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿರುವ ಕಾಲೇಜುಗಳಿಗೆ ತೆರಳಬೇಕಿರುವುದರಿಂದ ಹಾಸ್ಟೆಲ್‌ಗಳಿಗೆ ಬೇಡಿಕೆ ಸಹಜವಾಗಿ ಹೆಚ್ಚಿರುತ್ತದೆ. ಆದರೂ ಇರುವ ವಸತಿನಿಲಯಗಳಲ್ಲಿ ಹಾಗೂ ಬಾಡಿಗೆ ಕಟ್ಟಡಗಳಲ್ಲಿ ವ್ಯವಸ್ಥೆ ಕಲ್ಪಿಸುವ ಮೂಲಕ ಆಯಾ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ 72 ವಸತಿ ನಿಲಯಗಳಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಇದೆ. ಆದರೆ, ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸುವುದು ಇಲಾಖೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 101 ವಸತಿ ನಿಲಯಗಳಲ್ಲಿ 7 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶವಿದೆ. ಆದರೆ, 25 ಸಾವಿರಕ್ಕೂ ಅಧಿಕ ಬೇಡಿಕೆ ಇದೆ. ಅದೇ ರೀತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 17 ವಸತಿ ನಿಲಯಗಳಲ್ಲಿ 725 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಇದೆಯಾದರೂ ಮೂರ್ನಾಲ್ಕು ಪಟ್ಟು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿ ವರ್ಷ ಆಯ್ಕೆ ಬಯಸಿ ಅರ್ಜಿ ಸಲ್ಲಿಸುತ್ತಾರೆ.

ಬಾಡಿಗೆ ಕಟ್ಟಡ:

ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಷ್ಟು ಕಟ್ಟಡಗಳು ಇಲ್ಲದ ಕಾರಣ ಇಲಾಖೆ ಅಧಿಕಾರಿಗಳು ಬಾಡಿಗೆ ಕಟ್ಟಡಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ, ಈ ಕಟ್ಟಡಗಳು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಥಳದಲ್ಲಿ ಲಭಿಸುವುದು ಕಷ್ಟವಾಗಿದೆ. ಎಲ್ಲ ಸೌಕರ್ಯಗಳಿರುವ ಬಾಡಿಗೆ ಕಟ್ಟಡಗಳು ಬೇಕಾದ ಸ್ಥಳಗಳಲ್ಲಿ ಲಭಿಸುವುದಿಲ್ಲ. ಹೀಗಾಗಿ ಬಾಡಿಗೆ ಕಟ್ಟಡಗಳಲ್ಲಿ ಅಲ್ಪಸ್ವಲ್ಪ ಮೂಲಸೌಲಭ್ಯಗಳ ಕೊರತೆ ಇವೆ. 

ವಿದ್ಯಾರ್ಥಿ ಅನುದಾನ:

ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ, ವಸತಿ ಸೌಲಭ್ಯ, ಪುಸ್ತಕ, ಕ್ರೀಡಾ ಸಾಮಗ್ರಿ, ಟ್ಯೂಷನ್‌, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಆದರೆ,  ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ಆರೇಳು ವರ್ಷದ ಹಿಂದಿನ ಖರ್ಚು–ವೆಚ್ಚದ ಮೆನು ಚಾರ್ಟ್‌ ಇದೆ. ಅಂದರೆ, ಒಬ್ಬ ವಿದ್ಯಾರ್ಥಿಗೆ ₹ 1600 ಅನುದಾನ ಇದೆ. ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ವಿದ್ಯಾರ್ಥಿವಾರು ನೀಡುತ್ತಿರುವ ಅನುದಾನ ಸಾಲದಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಮಿತಿ ರಚನೆ:

ಹಾಸ್ಟೆಲ್‌ ಆವರಣದಲ್ಲಿ ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿಗಳು ಹೊರತು ಪಡಿಸಿ ಹೊರಗಿನವರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲು ಹಾಗೂ  ಅವರಿಂದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮತ್ತು ಹಾಸ್ಟೆಲ್‌ಗಳಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವ ಸಂಬಂಧ ಜಿಲ್ಲಾಧಿಕಾರಿ ಅವರು, ಉಪ ವಿಭಾಗಾಧಿಕಾರಿಗಳು, ಡಿವೈಎಸ್‌ಪಿ ಹಾಗೂ ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಿದ್ದಾರೆ.

ಶಾಲೆಯಿಂದ ಹೊರಗುಳಿಯುವವರ ಸಂಖ್ಯೆ ಇಳಿಕೆ

ವಿಜಯಪುರ: ಜಿಲ್ಲೆಯಲ್ಲಿ  ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರ ಸೇರಿದಂತೆ ಒಟ್ಟು 12 ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳು ಇವೆ. ಇವುಗಳಲ್ಲಿ 725 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ ಎನ್ನುತ್ತಾರೆ  ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೋಕರೆ.

ರಾಜ್ಯದಲ್ಲಿ ಅತಿ ಹೆಚ್ಚು ಮುಸ್ಲಿಮರಿರುವ ಜಿಲ್ಲೆಗಳಲ್ಲಿ ವಿಜಯಪುರವೂ ಆರನೇ ಸ್ಥಾನದಲ್ಲಿದೆ. ಹೀಗಾಗಿ ಹಾಸ್ಟೆಲ್‌ಗಳಿಗೆ ಬೇಡಿಕೆ ಬಹಳ ಇದೆ. ಆದರೆ, ಬೇಡಿಕೆಗೆ ತಕ್ಕಷ್ಟು ಹಾಸ್ಟೆಲ್‌ ಸೌಲಭ್ಯಗಳಿಲ್ಲ. ಅದರಲ್ಲೂ ಮೆಟ್ರಿಕ್‌ ನಂತರದ ವೃತ್ತಿಪರ ಕೋರ್ಸ್‌ಗಳ ಹಾಸ್ಟೆಲ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಅವರು.

ವೈದ್ಯಕೀಯ, ಎಂಜಿನಿಯರಿಂಗ್‌, ಐಟಿಐ, ಡಿಪ್ಲೊಮಾ, ಬಿಇಡಿ, ಡಿಇಡಿ ಕಲಿಕೆಗೆ ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಈ ಕಾರಣಕ್ಕಾಗಿ ಕನಿಷ್ಠ ನಾಲ್ಕು ಅಲ್ಪಸಂಖ್ಯಾತರ ವೃತ್ತಿಪರ ಹಾಸ್ಟೆಲ್‌ಗಳ ತುರ್ತು ಅಗತ್ಯವಿದೆ. ಸದ್ಯ ಎರಡು ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಹಾಸ್ಟೆಲ್‌, ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಒದಗಿಸಲಾಗುತ್ತಿದೆ. ವಸತಿ ನಿಲಯಗಳು ಮಕ್ಕಳ ಭವಿಷ್ಯ ರೂಪಿಸಲು ಸಹಾಯಕವಾಗಿವೆ. ಈ ಶಾಲೆಗಳು ಆರಂಭವಾದ ಬಳಿಕ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶೇ 100ಕ್ಕೆ 100ರಷ್ಟು ಫಲಿತಾಂಶ ಲಭಿಸುತ್ತಿದೆ ಎನ್ನುತ್ತಾರೆ ಸುರೇಶ ಕೋಕರೆ.

ವಿಜಯಪುರದಲ್ಲಿವೆ 101 ಬಿಸಿಎಂ ಹಾಸ್ಟೆಲ್‌ 

ವಿಜಯಪುರ: ಜಿಲ್ಲೆಯಲ್ಲಿ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯ 52 ಮತ್ತು ಮೆಟ್ರಿಕ್‌ ಪೂರ್ವ ಬಾಲಕಿಯರ ವಸತಿ ನಿಲಯ 12 ಹಾಗೂ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ 13 ಮತ್ತು ಮೆಟ್ರಿಕ್‌ ನಂತರದ ಬಾಲಕಿಯರ ವಸತಿ ನಿಲಯ 24 ಸೇರಿದಂತೆ ಒಟ್ಟು 101 ವಸತಿ ನಿಲಯಗಳು ಇದ್ದು, 7835 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಪ್ಪ ಆಶಾಪುರ.

101 ಹಾಸ್ಟೆಲ್‌ಗಳಲ್ಲಿ 59 ಸ್ವಂತ ಕಟ್ಟಡ ಹಾಗೂ 39 ಬಾಡಿಗೆ ಕಟ್ಟಡ ಮತ್ತು ಮೂರು ಸರ್ಕಾರಿ ಕಟ್ಟಡಗಳಲ್ಲಿ(ಉಚಿತ) ಕಾರ್ಯನಿರ್ವಹಿಸುತ್ತಿವೆ.  ಬಾಡಿಗೆ ಕಟ್ಟಡದಲ್ಲಿ ಇರುವ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಸಂಬಂಧ ಈಗಾಗಲೇ ನಿವೇಶನ ಲಭಿಸಿದೆ. ಇದರಲ್ಲಿ ಆರು ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮತ್ತೆ ಮೂರು ಕಟ್ಟಡಗಳ ನಿರ್ಮಾಣಕ್ಕೆ ಅನುಮೋದನೆ ಲಭಿಸಿದೆ ಎನ್ನುತ್ತಾರೆ ಅವರು.

ಬಿಸಿಎಂ ಹಾಸ್ಟೆಲ್‌ಗಳಲ್ಲಿ ಲಭ್ಯ ಇರುವ ಸೀಟುಗಳ ಸಂಖ್ಯೆ 7 ಸಾವಿರ. ಆದರೆ, ಪ್ರವೇಶ ಬಯಸಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳು 25 ಸಾವಿರಕ್ಕೂ ಅಧಿಕ. ಇದರಲ್ಲಿ ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಹಾಸ್ಟೆಲ್‌ ಲಭಿಸದ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 15 ಸಾವಿರ ವಿದ್ಯಾಸಿರಿ ಯೋಜನೆಯಡಿ ಸ್ಕಾಲರ್‌ ಶಿಫ್‌ ನೀಡಲಾಗುತ್ತದೆ. ಅರ್ಜಿ ಹಾಕಿದ ಎಲ್ಲ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜು ಶುಲ್ಕ ರಿಯಾಯಿತಿ ಲಭಿಸಲಿದೆ ಎನ್ನುತ್ತಾರೆ ಈರಪ್ಪ ಆಶಾಪುರ.

10 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ

ವಿಜಯಪುರ: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 74 ವಸತಿ ನಿಲಯಗಳಿವೆ. ಇವುಗಳಲ್ಲಿ 5396 ಮೆಟ್ರಿಕ್‌ ಪೂರ್ವ ಮತ್ತು 2359 ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳ ಸದ್ಯ ಅವಕಾಶ ಕಲ್ಪಿಸಿಕೊಡಲಾಗಿದೆ. ಪ್ರತಿ ವರ್ಷ ಸುಮಾರು 10 ಸಾವಿರ ವಿದ್ಯಾರ್ಥಿಗಳು ಇಲಾಖೆಯ ವಸತಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳುತ್ತಾರೆ ಎನ್ನುತ್ತಾರೆ ಇಲಾಖೆಯ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ.

ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬ ಸರ್ಕಾರದ ಆದೇಶ ಇರುವುದರಿಂದ ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 11 ಬಾಡಿಗೆ ಕಟ್ಟಡಗಳಲ್ಲಿವೆ. ಸ್ವಂತ ಕಟ್ಟಡಗಳಿಗಾಗಿ ಬೇಡಿಕೆ ಸಲ್ಲಿಸಿದ್ದು, ಅನೇಕ ಕಡೆ ನಿರ್ಮಾಣ ಹಂತದಲ್ಲಿವೆ ಎನ್ನುತ್ತಾರೆ ಅವರು.

ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಸೌಂದರ್ಯೀಕರಣಕ್ಕೆ ಮತ್ತು ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಹಾಸ್ಟೆಲ್‌ಗಳ ಆವರಣದಲ್ಲಿ 3500ಕ್ಕೂ ಅಧಿಕ ಸಸಿಗಳನ್ನು ನಡೆಲಾಗಿದೆ. ₹25 ಲಕ್ಷ ಮೊತ್ತದಲ್ಲಿ ಪುಸ್ತಕಗಳು ಹಾಗೂ ₹15 ಲಕ್ಷ ಮೊತ್ತದ ಕ್ರೀಡಾ ಸಲಕರಣೆಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎನ್ನುತ್ತಾರೆ ಕನ್ನೊಳ್ಳಿ.

ತಿಕೋಟಾ ತಾಲ್ಲೂಕಿನ ಬಾಬಾನಗರ ಮತ್ತು ಬಿಜ್ಜರಗಿಯಲ್ಲಿ ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌ಗಳನ್ನು ಜಿಲ್ಲೆಗೆ ಮಾದರಿ ಹಾಸ್ಟೆಲ್‌ಗಳಾಗಿ ರೂಪಿಸಲಾಗಿದೆ. ಹಾಸ್ಟೆಲ್‌ ಗೋಡೆಗಳನ್ನು ಚಿತ್ರಗಳಿಂದ ಆಲಂಕರಿಸಲಾಗಿದೆ. ಹಾಸ್ಟೆಲ್‌ ಆವರಣದಲ್ಲಿ ಗಿಡ–ಮರಗಳನ್ನು ಬೆಳೆಸಲಾಗಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಎ.ಸಿ.ಪಾಟೀಲ, ಮಹಾಂತೇಶ ವಿ. ನೂಲಿನವರ, ಬಸವರಾಜ ಉಳ್ಳಾಗಡ್ಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.