ಶನಿವಾರ, ಜೂನ್ 25, 2022
25 °C

ಕಾಂಗ್ರೆಸ್‌ ತೊರೆಯಲ್ಲ; ಉಡಾಫೆ ಮಾತಿಗೆ ಉತ್ತರಿಸಲ್ಲ- ಇಂಡಿ ಶಾಸಕ ಯಶವಂತರಾಯಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಕಾಂಗ್ರೆಸ್‌ ಜನಪರವಾದ ತತ್ವ, ಸಿದ್ಧಾಂತ ಇರುವ ಪಕ್ಷ. ನನಗೆ ಅಧಿಕಾರ, ಗೌರವ, ಮರ್ಯಾದೆ ಕೊಟ್ಟಿದೆ. ಇಂತಹ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸೇರುವಂತ ಸಂದರ್ಭವೂ ನನಗೆ ಬಂದಿಲ್ಲ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸ್ಪಷ್ಟಪಡಿಸಿದರು.

‌ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಇಬ್ಬರು ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಉಡಾಫೆಯಾಗಿ, ಆಧಾರ ರಹಿತವಾಗಿ ಮಾತನಾಡುವವರಿಗೆ ಉತ್ತರ ಕೊಡುವುದಿಲ್ಲ. ಅವರ ಮೆದುಳು ಮತ್ತು‌ ಬಾಯಿಗೆ ಲಿಂಕ್ ಇಲ್ಲ, ಮೂರು ವರ್ಷದಿಂದ ಅವರು ನೀಡುತ್ತಿರುವ ಹೇಳಿಕೆಗಳಲ್ಲಿ ಒಂದಾದರೂ ನಿಜವಾಗಿದೆಯಾ? ಎಂದು ಹೆಸರು ಪ್ರಸ್ತಾಪಿಸದೇ ಶಾಸಕ ಯತ್ನಾಳಗೆ ತಿರುಗೇಟು ನೀಡಿದರು.  

ಬೇರೊಬ್ಬರ ಅಭಿಪ್ರಾಯ ಬಿಜೆಪಿ ಶಾಸಕರ ಬಾಯಲ್ಲಿ ಪ್ರಕಟವಾಗುತ್ತಿದೆ ಎಂಬ ಬಲವಾದ ಅನುಮಾನ ನನಗಿದೆ. ಯಾರೋ ತಲೆಗೆ ತುರುಕಿದ ವಿಷಯವನ್ನು ಹೇಳುವುದು ಸರಿಯಲ್ಲ. ರಾಜಕಾರಣದಲ್ಲಿ ಯಾರೂ ಸಾಚಾ ಅಲ್ಲ. ಜಿಲ್ಲೆಯ ಜನತೆ ಪ್ರಜ್ಞಾವಂತರಿದ್ದಾರೆ. ಅದರಲ್ಲೂ ನಗರದ ಜನತೆ ಎಂಥವರನ್ನು ಆರಿಸಿ ಕಳುಹಿಸಿದ್ದೇವೆ ಎಂಬ ಭಾವನೆ ತಳೆದಿದ್ದಾರೆ ಎಂದು ಕಿಚಾಯಿಸಿದರು.

ನಗರ ಶಾಸಕರು ಈ ಹಿಂದೆ ದೇವೇಗೌಡರನ್ನು ಎಷ್ಟು ಹಾಡಿ, ಹೊಗಳಿ, ತೆಗಳಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಅತಿಯಾದ ಮಾತೇ ಅವರನ್ನು ಎತ್ತರಕ್ಕೆ ಏರದಂತೆ ಮಾಡಿದೆ ಎಂದು ಯತ್ನಾಳ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಬಾಬಾನಗರದ ಜನರ ಆಹ್ವಾನದ ಮೇರೆಗೆ ಅಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ನಾನೂ ಮತ್ತು ಶಾಸಕ ಶಿವಾನಂದ ಪಾಟೀಲರು ಭಾಗವಹಿಸಿದ್ದೆವು. ಶಿವಾನಂದ ಪಾಟೀಲರು ಆ ಕ್ಷೇತ್ರದ ಮಾಜಿ ಶಾಸಕರಿರುವುದರಿಂದ ಜನರಿಗೆ ಅವರ ಮೇಲೆ ವಿಶೇಷ ಅಭಿಮಾನ, ನನ್ನ ಮೇಲೆ ಪ್ರೀತಿ ಅವರಿಗಿದೆ. ಹೀಗಾಗಿ ಆಹ್ವಾನಿಸಿದ್ದರು. ನಾವಿಬ್ಬರೂ ಒಂದೇ ಪಕ್ಷದ ಶಾಸಕರಿರುವುದರಿಂದ ನಮ್ಮ ಭೇಟಿಗೆ ವಿಶೇಷ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಊಹಾಪೋಹದ ರಾಜಕಾರಣ ನಡೆದಿದೆ. ಇಂತಹ ಕನಿಷ್ಠಮಟ್ಟದ ರಾಜಕಾರಣ ನಾನು ಮಾಡಲು ಇಷ್ಟಪಡುವುದಿಲ್ಲ. ರಾಜಕಾರಣ ಕೇವಲ ಚುನಾವಣೆಗೆ ಸೀಮಿತವಾಗಿರಬೇಕು, ಉಳಿದಂತೆ ಜನರ ಆಶೋತ್ತರ ಈಡೇರಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಎಡವಿದ್ದೇವೆ: ಚುನಾವಣಾ ರಾಜಕೀಯದಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲೋ ಒಂದು ಕಡೆ ವಿಫಲವಾಗುತ್ತಿದೆ. ಹೀಗಾಗಿ ಪಕ್ಷದಲ್ಲಿ ಬದಲಾವಣೆಯಾಗಬೇಕಿದೆ. ಪಕ್ಷ ಕೆಲವರ ಸ್ವತ್ತು ಆಗಬಾರದು, ಜನರ ನಾಡಿಮಿಡಿತ ಅರಿತು, ಕಾರ್ಯಕರ್ತರ ಭಾವನೆಗೆ ಸ್ಪಂದಿಸುವ ಕೆಲಸ ಆಗಬೇಕಿದೆ ಎಂದರು.

ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲಿಯಾದರೂ ಕ್ರಿಯಾಶೀಲವಾಗಿದೆ ಎಂದಾದರೆ ಅದು ಕರ್ನಾಟಕದಲ್ಲಿ. ವಿರೋಧ ಪಕ್ಷವಾಗಿ ರಾಜ್ಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ಪಾತ್ರ ಅತಿ ಮುಖ್ಯವಾಗಿರುತ್ತದೆ. ಜನರ ಬಳಿ ಹೋಗಲು, ಅವರ ಧ್ವನಿಯಾಗಲು ವಿರೋಧ ಪಕ್ಷಕ್ಕೆ ಹೆಚ್ಚು ಅವಕಾಶ ಇರುತ್ತದೆ ಎಂದು ಹೇಳಿದರು.

‘ಯುಕೆಪಿ ರಾಷ್ಟ್ರೀಕರಣವಾಗಲಿ’

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಕರಣಗೊಳಿಸಲು ಕ್ರಮ ವಹಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಯಿಸಿದರು.

ಸಿಂದಗಿ, ಇಂಡಿ ವ್ಯಾಪ್ತಿಗೆ ನೀರಾವರಿ ಸೌಲಭ್ಯ ಒದಗಿಸಬೇಕು ಎಂದಾದರೆ ಕೆರೆ ತುಂಬುವ ಯೋಜನೆಗಳನ್ನು ಪೂರ್ಣಗೊಳಿಸಬೇಕು, ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸಬೇಕು ಎಂದರು. 

ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಭೀಮಾ ನದಿಯಿಂದ 15 ಟಿಎಂಸಿ ನೀರನ್ನು ರಾಜ್ಯಕ್ಕೆ ಒದಗಿಸಲು ಮಹಾರಾಷ್ಟ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದರು.

ಮುಂಗಾರು ವೇಳೆ ಜಿಲ್ಲೆಯ ಕೃಷ್ಣಾ, ಭೀಮಾ ನದಿ ತೀರದಲ್ಲಿ  ತಲೆದೋರಬಹುದಾದ ಪ್ರವಾಹ ನಿರ್ವಹಣೆಗೆ ರಾಜ್ಯ ಸರ್ಕಾರ ಈಗಲೇ ಅಗತ್ಯ ಕ್ರಮಕೈಗೊಳ್ಳಬೇಕು 

ಕರ್ನಾಟಕ- ಮಹಾರಾಷ್ಟ್ರ ಸರ್ಕಾರ ಜಂಟಿಯಾಗಿ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ತಡೆಗೆ ಶಾಶ್ವತ ಕ್ರಮ ವಹಿಸಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು