ಭಾನುವಾರ, ಜನವರಿ 17, 2021
26 °C
ಹಕ್ಕಿಜ್ವರ ನಿಯಂತ್ರಣ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚನೆ

ವಿಜಯಪುರ: ಕೋಳಿ, ವಲಸೆ ಪಕ್ಷಿಗಳ ಮೇಲೆ ತೀವ್ರ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜಿಲ್ಲೆಯ ಕೆರೆ, ಕಟ್ಟೆಗಳು ಮತ್ತು ಅರಣ್ಯ ಪ್ರದೇಶಗಳ ಸುತ್ತಮುತ್ತ ವಲಸೆ ಪಕ್ಷಿಗಳು ಮತ್ತು ಇತರೆ ಪಕ್ಷಿಗಳು ಅಸ್ವಾಭಾವಿಕವಾಗಿ ಸಾವನಪ್ಪಿದರೆ ತಕ್ಷಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಕ್ಕಿಜ್ವರ ಕುರಿತು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೇರಳ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯದಿಂದ ಬರುವ ಕೋಳಿ ಮತ್ತು ಮೊಟ್ಟೆಯ ಮೇಲೆ ಸೂಕ್ತ ನಿಗಾ ಇರಿಸಬೇಕು. ವಲಸೆ ಬರುವ ಪಕ್ಷಿಗಳ ಚಲನವಲಯದ ಬಗ್ಗೆ ತೀವ್ರ ನಿಗಾ ಇಡಬೇಕು ಅವರು ಸೂಚನೆ ನೀಡಿದರು.

ಜಿಲ್ಲೆಯ ಗಡಿಭಾಗದ ಧೂಳ್‌ಖೇಡ್‍ನಲ್ಲಿ ಚೆಕ್‍ಪೋಸ್ಟ್ ಪ್ರಾರಂಭಿಸಲಾಗಿದ್ದು, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಂಡುಬಂದ ಬಗ್ಗೆ ದೃಢೀಕೃತ ವರದಿ ಬಂದ ನಂತರ ಶಿರಾಡೊಣ, ಸಿದ್ದಾಪುರ ಮತ್ತು ಕನಮಡಿ ಚೆಕ್‍ ಪೋಸ್ಟ್ ಪ್ರಾರಂಭಿಸಿದ್ದು, ಒಟ್ಟು 4 ಚೆಕ್‍ ಪೋಸ್ಟ್‌ಗಳನ್ನು ಸ್ಥಾಪಿಸಿ, ತೀವ್ರ ನಿಗಾ ಇಡಲಾಗಿದೆ. ಚೆಕ್‍ಪೋಸ್ಟ್‌ಗಳಲ್ಲಿ ಆರ್.ಟಿ.ಒ ಮತ್ತು ಪೊಲೀಸ್ ಅಧಿಕಾರಿ, ಸಿಬ್ಬಂದಿ, ಪಶುಸಂಗೋಪನಾ ಇಲಾಖೆಯವರಿಗೆ ಸಹಕಾರ ಸಹ ನೀಡುವಂತೆ ಅವರು ಸೂಚನೆ ನೀಡಿದರು.

ಕೋಳಿ ಮತ್ತು ಕೋಳಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳನ್ನು ಚೆಕ್‍ಪೋಸ್ಟ್‌ಗಳಲ್ಲಿ ಗುರುತಿಸಿ ಅವಶ್ಯಕ ಸ್ಯಾನಿಟೈಸರ್ ಮಾಡಲು ಸ್ಥಳೀಯ ಸಂಸ್ಥೆಗಳ ಮತ್ತು ಇತರೆ ಇಲಾಖೆಗಳ ಸಹಕಾರ, ಸಮನ್ವಯತೆ ಮತ್ತು ಸಹಯೋಗದೊಂದಿಗೆ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಕೋಳಿಗಳು ಸಾವನಪ್ಪಿದರೆ ಸೂಕ್ತ ನಿಗಾ ಸಹ ಇಡುವಂತೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಗಡಿಭಾಗದಲ್ಲಿ ಪಶು ವೈದ್ಯಾಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದು, ಬೇರೆ ರಾಜ್ಯಗಳಿಂದ ಬರುವ ಕೋಳಿ ಮತ್ತು ಮೊಟ್ಟೆಯ ಮೇಲೆ ತೀವ್ರ ನಿಗಾ ಇಡಬೇಕು ಎಂದು ತಿಳಿಸಿದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ್ ಜಹಗೀರದಾರ್‌, ಜಿಲ್ಲೆಯಲ್ಲಿ ಹಕ್ಕಿಜ್ವರ ಕುರಿತು ಪ್ರತಿ ತಿಂಗಳು ಸಮೀಕ್ಷಾ ಕಾರ್ಯ ಜಾರಿಯಲ್ಲಿದೆ.  ಕೋಳಿ ಹಿಕ್ಕಿ, ಕೋಳಿ ಆಹಾರ, ರೆಕ್ಕೆಪುಕ್ಕಗಳು ಮಾದರಿಗಳನ್ನು ಪ್ರತಿ ತಿಂಗಳು ಬೆಂಗಳೂರಿನ ಪ್ರಾಣಿ ಆರೋಗ್ಯ ಜೈವಿಕ ಸಂಸ್ಥೆ  ಲ್ಯಾಬ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಪ್ರತಿ ತಾಲ್ಲೂಕಿನಿಂದ ವಾರಕ್ಕೆ ಐದು ಮಾದರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ಕ್ಷೀಪ್ರ ಕಾರ್ಯಾಚರಣೆ ಪಡೆ (ರ‍್ಯಾಪಿಡ್ ರೆಸ್ಪಾನ್ಸ್ ಟೀಮ್) ಸನ್ನದ್ದುಗೊಳಿಸಿ, ತರಬೇತಿ ನೀಡಲಾಗಿದೆ. ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಎಲ್ಲ ಸಹಾಯಕ ನಿರ್ದೇಶಕರಿಗೆ, ಅಧಿಕಾರಿಗಳಿಗೆ ತಾಂತ್ರಿಕ ಮಾಹಿತಿ ನೀಡಲಾಗಿದೆ. ಕ್ಷೇತ್ರ ಮಟ್ಟದ ಎಲ್ಲ ಅಧಿಕಾರಿಗಳಿಗೆ ಕಾರ್ಯಾಗಾರ ಏರ್ಪಡಿಸಿ, ತಾಂತ್ರಿಕ ಮಾಹಿತಿ ಸಹ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 53 ಬ್ರಾಯ್ಲರ್‌ ಕೋಳಿ ಫಾರ್ಮ್‌ಗಳಿದ್ದು, ಒಂದು ಮೊಟ್ಟೆ ಕೋಳಿ ಫಾರ್ಮ್ ಇದೆ. 20 ಹಿತ್ತಲ ಕೋಳಿ ಸಾಕಿದ ಕುಟುಂಬಗಳ ಸಂಖ್ಯೆ ಇದೆ. ಇಲಾಖೆಯ ಕ್ಷೇತ್ರ ಸಿಬ್ಬಂದಿಗೆ ಪ್ರತಿದಿನ ಕೋಳಿ ಫಾರ್ಮ್‌ಗೆ ಭೇಟಿ ನೀಡಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ತಜ್ಞ ಪಶುವೈದ್ಯರನ್ನು ನಿಯೋಜಿಸಿದ್ದು, ಒಂದೇ ಒಂದು ಹಕ್ಕಿಜ್ವರದ ಪ್ರಕರಣಗಳು ಕಂಡುಬಂದಲ್ಲಿ ಆ ಪ್ರದೇಶವನ್ನು ಕ್ವಾರಂಟೈನ್ ಮಾದರಿಯಲ್ಲಿ ನಿಗಾ ಇಡಲು ಸೂಚಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ  ಹರ್ಷಾ ಶೆಟ್ಟಿ,  ಪಶು ಸಂಗೋಪನಾ, ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

***

ಕೋಳಿ ಮಾಂಸ, ಮೊಟ್ಟೆಗಳನ್ನು ಬೇಯಿಸಿ, ಆಹಾರ ಖಾದ್ಯ ಪದಾರ್ಥಗಳನ್ನು ಮಾಡಿ ತಿನ್ನುವುದರಿಂದ ಹಕ್ಕಿಜ್ವರ ಮನುಷ್ಯರಿಗೆ ಹರಡುವ ಸಂಭವವಿಲ್ಲ

- ಪ್ರಾಣೇಶ್ ಜಹಗೀರದಾರ್‌, ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು