ಶನಿವಾರ, ಮಾರ್ಚ್ 25, 2023
29 °C

ಕರುಳಿನ ಭಾಷೆ ಕನ್ನಡ: ಪ್ರೊ.ವಿರೇಶ ಬಡಿಗೇರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಮ್ಮ ಮಾತೃಭಾಷೆ ಕನ್ನಡ ನಮ್ಮ ಕರುಳಿನ ಭಾಷೆಯಾಗಿದೆ. ಕನ್ನಡ ನಾಡು-ನುಡಿಯ ಪ್ರಾಚೀನತೆ ಹಾಗೂ ಕನ್ನಡ ಪ್ರಜ್ಞೆಯನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗರೂಕರಾಗಬೇಕು. ಕನ್ನಡ ಭಾಷೆಯ ಮಹತ್ವವನ್ನು ಎತ್ತಿ ಹಿಡಿಯಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ವಿರೇಶ ಬಡಿಗೇರ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಕನ್ನಡ ಮತ್ತು ಕರ್ನಾಟಕ: ಅಸ್ಮಿತೆಯ ಪ್ರಶ್ನೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.

ಕ್ರಿ.ಶ.450ಕ್ಕಿಂತ ಹಿಂದಿನಿಂದಲೂ ಕನ್ನಡವು ಆಡಳಿತ ಭಾಷೆಯಾಗಿತ್ತು. ಕರ್ನಾಟಕವನ್ನು ಆಳಿದ ಕದಂಬರು, ರಾಷ್ಟ್ರಕೂಟರು ಬಾದಾಮಿ ಚಾಲುಕ್ಯರು, ವಿಜಯನಗರ ಅರಸರು, ಮೈಸೂರು ಒಡೆಯರ ವರೆಗೆ ಕನ್ನಡ ಭಾಷೆ ಆಡಳಿತದಲ್ಲಿತ್ತು. ಅನೇಕ ರಾಜಮನೆತನಗಳು ಕನ್ನಡ ಸಾಹಿತ್ಯಕ್ಕೆ ಪೋಷಣೆ ನೀಡಿ, ಕನ್ನಡ ಭಾಷೆಗೆ ಮಹತ್ವ ನೀಡಿದ್ದಾರೆ ಎಂದರು.

ಮಹಿಳಾ ವಿವಿಯ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಾತನಾಡಿ, ಭಾಷಾವಾರು ಪ್ರಾಂತಗಳು ಮತ್ತು ಏಕೀಕರಣ ಚಳುವಳಿ ಕುರಿತು ಮಾಹಿತಿ ನೀಡಿ, ಕನ್ನಡ - ಕರ್ನಾಟಕ- ಕನ್ನಡಿಗ ಇವುಗಳ ಕುರಿತು ವಿಶ್ಲೇಷಣೆ ನೀಡಿದರು.

ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಮಾತೃಭಾಷೆಯಲ್ಲಿ ಮಾತನಾಡುವುದು ವ್ಯವಹರಿಸುವುದು ಮಾನವನ ಹಕ್ಕು. ಕನ್ನಡವು ಆಡಳಿತ ಭಾಷೆ, ವ್ಯವಹಾರದ ಭಾಷೆ ಹಾಗೂ ಉದ್ಯೋಗದ ಭಾಷೆಯಾಗಬೇಕು ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿಯೂ ಕನ್ನಡದ ಬಳಕೆಯ ಅವಶ್ಯಕತೆಯನ್ನು ತಿಳಿಸಿದ ಅವರು, ರಾಜ್ಯ-ರಾಷ್ಟ್ರಮಟ್ಟದಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆಯ ಸ್ಥಾನಮಾನಗಳ ಬಗ್ಗೆ ವಿವರಿಸಿದರು.

ವಿವಿಯ ಆವರಣದಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಧ್ವಜಾರೋಹಣ ನೆರವೇರಿಸಿದ್ದರು. ಕುಲಸಚಿವೆ ಪ್ರೊ.ಆರ್.ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಕೆ. ಇದ್ದರು.

66ನೇ ರಾಜ್ಯೋತ್ಸವ ವಿಶೇಷ ಆಚರಣೆಯ ಪ್ರಯುಕ್ತ ವಿದ್ಯಾರ್ಥಿನಿಯರಿಗಾಗಿ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ಮತ್ತು ಹಾಡುಗಾರಿಕೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು. 

ಕಾರ್ಯಕ್ರಮ ಸಂಚಾಲಕ ಡಾ.ನಾರಾಯಣ, ಸಂಶೋಧನಾ ವಿದ್ಯಾರ್ಥಿನಿಯರಾದ ತ್ರಿವೇಣಿ ಬನಸೋಡೆ,  ಲಕ್ಷ್ಮೀ ಅಂಗಡಿ, ಕರಿಷ್ಮಾ ಕಪೂರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು