ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ತರುವ ಮಹಾದೇವನೆಂಬ ಪ್ರತೀತಿ: ಗೊಳಸಂಗಿಯಲ್ಲಿ ಜೋಕುಮಾರಸ್ವಾಮಿ ವೈಭವ

Published 29 ಸೆಪ್ಟೆಂಬರ್ 2023, 7:47 IST
Last Updated 29 ಸೆಪ್ಟೆಂಬರ್ 2023, 7:47 IST
ಅಕ್ಷರ ಗಾತ್ರ

ನಿಡಗುಂದಿ: ಭಾದ್ರಪದ ಮಾಸದ ಶುಕ್ಲಪಕ್ಷ ಗಣೇಶನ ನಿರ್ಗಮನವಾದೊಡನೆ ಬರುವ ಜೋಕುಮಾರಸ್ವಾಮಿಯನ್ನು ‘ಮಳೆಯ ದೇವರು’ ಎಂದೇ ಭಾವಿಸಿ ರೈತರು ಭಕ್ತಿಭಾವದಿಂದ ಪೂಜಿಸುವುದು ಉತ್ತರ ಕರ್ನಾಟಕದ ಭಾಗದ ವೈಶಿಷ್ಟ್ಯ.

ಜೋಕುಮಾರಸ್ವಾಮಿಯ ವೈಶಿಷ್ಟ್ಯ: ಜೋಕುಮಾರನ ಜನನ, ಬಾಲ್ಯ, ಯೌವನ, ಸಾವು ಎಲ್ಲವೂ ಏಳು ದಿನಗಳಲ್ಲಿ ಮುಗಿಯುತ್ತದೆ. ಅಲ್ಪಾಯುಷಿಯಾಗಿ ಏಳು ದಿನಗಳಲ್ಲಿ ಮೆರೆದು ಪುಂಡಾಟಿಕೆ ಮಾಡಿ ಸಾವನ್ನಪ್ಪಿದ ಜಾನಪದ ದೇವತೆ ಇವನಾಗಿದ್ದಾನೆ.

ಸಂಪ್ರದಾಯದಂತೆ ಭಾದ್ರಪದ ಮಾಸದ ಅಷ್ಟಮಿ ದಿನದಂದು ಸ್ಥಳೀಯ ಕುಂಬಾರರ ಮನೆಯಲ್ಲಿ ಜನಿಸಿದ ಈತ ಅನಂತನ ಹುಣ್ಣಿಮೆಯ ವರೆಗೆ ಕೋಲಕಾರರ (ಅಂಬಿಗೇರ) ಮನೆಯಲ್ಲಿ ಬೆಳೆಯುತ್ತಾನೆ. ಹುಣ್ಣಿಮೆ ರಾತ್ರಿ ಈತನ ಬದುಕಿನ ಕಥೆಯೂ ಅಂತ್ಯ ಕಾಣುತ್ತದೆ.

ಮುಂದೆ ಮೂರನೇ ದಿನ ಅಗಸರ ಮನೆಯಲ್ಲಿ ಈತನ ಪುಣ್ಯಾರಾಧನೆ ನಡೆಯುತ್ತಾ ಬಂದಿರುವುದು ಗ್ರಾಮದ ಇತಿಹಾಸ ಮತ್ತು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಜೋಕುಮಾರನ ಮೂರ್ತಿಯನ್ನು ಎಣ್ಣೆ ಮತ್ತು ಹುತ್ತದ ಮಣ್ಣಿನಿಂದ ತಯಾರಿಸಲಾಗುತ್ತದೆ. ಅದಕ್ಕೆ ಬೇವಿನ ಎಲೆಗಳ ಉಡುಗೆಯೊಂದಿಗೆ ಅಲಂಕರಿಸುತ್ತಾರೆ. ಬಾಯಿಗೆ ಬೆಣ್ಣೆಯನ್ನು ಒರಿಸಿ, ಹಣೆಗೆ ಕಪ್ಪು ಮಸಿಯನ್ನು ಹಚ್ಚಿರುತ್ತಾರೆ. ಅದನ್ನು ಬಿದರಿನ ಬುಟ್ಟಿಯೊಳಗೆ ಕುಳ್ಳಿರಿಸಿ ತಲೆಯ ಮೇಲೆ ಜೋಕುಮಾರನ ಬುಟ್ಟಿಯನ್ನು ಹೊತ್ತುಕೊಂಡು ಏಳು ದಿನಗಳ ಕಾಲ ಕಾಲ್ನಡಿಗೆಯಲ್ಲಿಯೇ ನಾನಾ ಕಡೆ ಸಂಚರಿಸಿ ಪೂಜೆ ಮಾಡಿ ಜೋಕುಮಾರನ ಮೇಲೆ ಹಾಡು ಹಾಡುತ್ತಾರೆ.

ಗೊಳಸಂಗಿಯ ಗೌರವ್ವ ಭೀಮಪ್ಪ ಕೋಲಕಾರ ದಂಪತಿ ಗ್ರಾಮದ ವಿವಿಧ ಬೀದಿಗಳಲ್ಲಿ ಜೋಕುಮಾರನನ್ನು ಹೊತ್ತುಕೊಂಡು ಪೂಜೆ ಮಾಡುತ್ತಾ, ದವಸ, ಧಾನ್ಯಗಳನ್ನು ಸಂಗ್ರಹಿಸುತ್ತಾ, ಆತನನ್ನು ಸಲಹುತ್ತಿದ್ದಾರೆ.

ಗೊಳಸಂಗಿ ಗ್ರಾಮದ ಜನತೆ ತಂತಮ್ಮ ಮನೆಗಳಿಂದ ದವಸ-ಧಾನ್ಯ, ನಗದು ರೂಪದ ಕಾಣಿಕೆ ತಂದು ಆತನಿಗೆ ಅರ್ಪಿಸಿ ಅನ್ನದಾತರ ಜತೆಗೆ ಜನ, ಜಾನುವಾರುಗಳು ನೆಮ್ಮದಿಯಿಂದ ಬಾಳಲು ಸಮರ್ಪಕ ಮಳೆಯನ್ನು ಕರುಣಿಸು ದೇವ ಎಂದು ಪ್ರಾರ್ಥನೆಗೈಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

‘ನಮ್ಮ ಪೂರ್ವಜರ ಕಾಲದಿಂದಲೂ ಜೋಕುಮಾರಸ್ವಾಮಿ ಮಳೆ ತರುವ ದೇವರು ಎಂದೇ ನಂಬಿ ಈ ಸಂಪ್ರದಾಯವನ್ನು ಪಾಲಿಸುತ್ತ ಬರಲಾಗಿದೆ. ಆದರೆ, ಇಂದಿನ ಯುವಕರು ಇದೊಂದು ಮೂಢನಂಬಿಕೆ ಎಂದು ತಿಳಿದಿರುವರೇನೋ ಗೊತ್ತಿಲ್ಲ. ಹಿಂದಿನಷ್ಟು ಭಕ್ತಿಭಾವ ಇಂದು ಕಂಡು ಬರುತ್ತಿಲ್ಲ. ಇದರಲ್ಲಿ ಗಳಿಕೆಯ ಯಾವುದೇ ಮೂಲ ಇಲ್ಲವಾದರೂ ಪೂರ್ವಜರು ಪಾಲಿಸಿಕೊಂಡು ಬಂದ ಸಂಪ್ರದಾಯಕ್ಕೆ ತೀಲಾಂಜಲಿ ಇಡಬಾರದೆಂದು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ’ ಎಂದು ಭೀಮಪ್ಪ ಕೋಲಕಾರ ಹೇಳಿದರು.

ಜೋಕುಮಾರಸ್ವಾಮಿಯ ಪ್ರತಿರೂಪ
ಜೋಕುಮಾರಸ್ವಾಮಿಯ ಪ್ರತಿರೂಪ
ಜೋಕುಮಾರನ ನಿರ್ಗಮನ ಇಂದು
ಸಿಂದಗಿ: ಪಟ್ಟಣದ ಕೋಳಿ ಸಮುದಾಯ ಮಹಿಳೆಯರು ಗುರುವಾರ ಜೋಕುಮಾರನ ಮೂರ್ತಿಯನ್ನು ಹೆಂಡೆಂಡಗಿ ಬುಟ್ಟಿಯಲ್ಲಿ ಕೂಡ್ರಿಸಿ ಸುತ್ತಲೂ ಬೇವಿನ ತಪ್ಪಲು ಇಟ್ಟುಕೊಂಡು  ಶಾಂತವೀರ ನಗರದಲ್ಲಿ ಮನೆ ಮನೆಗೆ ತೆರಳಿ 'ಹೋಳಿಗಿ ಬೇಡಿ ಹೊರಳಾಡಿ ಅಳತಾನ ಜೋಕುಮಾರ' ಎಂಬ ಜೊಕುಮಾರನ ಗುಣಗಾನದ ಹಾಡು ಹಾಡಿದರು. ನಂತರ ಮನೆಯವರು ಜೋಳ ಉಪ್ಪು ದಕ್ಷಿಣೆ ಹಣ ನೀಡಿ ಆಶೀರ್ವಾದ ಪಡೆದುಕೊಳ್ಳುವುದು ಕಂಡು ಬಂದಿತು. ಸೆಪ್ಟಂಬರ್ 29 ರಂದು ಅನಂತನ ಹುಣ್ಣಿಮೆ ದಿನ ಜೋಕುಮಾರನ ತಲೆ ಒಡೆಯುವ ಕಾರ್ಯ ನಡೆಯುತ್ತದೆ ಎಂದು ಜೋಕುಮಾರನ ಮೂರ್ತಿ ಹೊತ್ತುಕೊಂಡಿರುವ ಮಹಿಳೆ ನೀಲಗಂಗವ್ವ ಕಡಕೋಳ ಪ್ರತಿಕ್ರಿಯಿಸಿದರು. ನಾಗಮ್ಮ ಚಂದಾ ಶಾಂತವ್ವ ಕಡಕೋಳ ಸಾಬವ್ವ ಕಕ್ಕಳಮೇಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT