ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳನಳಿಸುತ್ತಿದೆ ‘ಕಲ್ಯಾಣ ಸಾರಿಗೆ’ ಕೈತೋಟ

ಬಸ್‌ ಚಾಲಕ, ನಿರ್ವಾಹಕರ, ಸಿಬ್ಬಂದಿ ಶ್ರಮದಾನ; ಬೆಳೆದು ನಿಂತ ಹಣ್ಣಿನ ಗಿಡ, ಮರಗಳು
Last Updated 9 ಜುಲೈ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಕಲ್ಯಾಣ ಕರ್ನಾಟಕ(ಈಶಾನ್ಯ) ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ(ವರ್ಕ್‌ಶಾಪ್‌) ಮತ್ತು ಮೂರು ಬಸ್‌ ಡಿಪೊಗಳ ಆವರಣದಲ್ಲಿ ಬಗೆಬಗೆಯ ಹಣ್ಣಿನ ಗಿಡ, ಮರಗಳು ಬೆಳೆದು ನಿಂತಿದ್ದು, ನೋಡಲು ತೋಟದಂತೆ ಕಂಗೊಳಿಸುತ್ತಿವೆ.

ಗುಮ್ಮಟನಗರಿಯ ಸೆಟಲೈಟ್‌ ಬಸ್‌ ನಿಲ್ದಾಣದ ಬಳಿ ಇರುವ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಆವರಣ ಹಾಗೂ ಮೂರು ಬಸ್‌ ಡಿಪೊಗಳ ಆವರಣದ ಖಾಲಿ ಜಾಗ, ಕಂಪೌಂಡ್‌ ಪಕ್ಕದಲ್ಲಿ ಬಾಳೆ, ತೆಂಗು, ಮಾವು, ಪಪ್ಪಾಯಿ, ಚಿಕ್ಕು, ನೇರಲೆ, ಲಿಂಬೆ, ಡ್ರ್ಯಾಗನ್‌ ಪ್ರೂಟ್‌, ಪೇರಲ, ಸಾಗುವಾನಿ, ಶ್ರೀಗಂಧ, ರಕ್ತ ಚಂದನ, ಹೆಬ್ಬೇವು, ಬಗೆಬಗೆಯ ಆಲಂಕೃತ ಬಳ್ಳಿಗಳು, ಹೂವಿನ ಗಿಡಗಳು ತಲೆ ಎತ್ತಿ ನಿಂತಿದ್ದು, ಇಡೀ ವಾತಾವರಣ ಹಸಿರುಮಯವಾಗಿದೆ.

ಕರ್ಕಶ ಶಬ್ಧ ಮಾಡುವ ಬಸ್‌ಗಳು ಹಾಗೂ ಅವುಗಳ ಸುಟ್ಟ ಆಯಿಲ್‌, ಪೆಟ್ರೋಲ್‌, ಬಿಡಿಭಾಗಗಳಿಂದ ತುಂಬಿರಬೇಕಾಗಿದ್ದ ಡಿಪೊ ಮತ್ತು ಕಾರ್ಯಾಗಾರ(ವರ್ಕ್‌ಶಾಪ್‌)ದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಎಲ್ಲಿಯೂ ಗ್ಯಾರೇಜ್‌ ವಾತಾವರಣ ಕಂಡುಬರುತ್ತಿಲ್ಲ. ಬದಲಿಗೆ ತಂಪಾದ ಗಾಳಿ, ಮರಗಿಡಗಳ ನೆರಳಿನ ಆಸರೆ ಆವರಿಸಿರುವುದು ವಿಶೇಷ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಚಾಲಕ, ನಿರ್ವಾಹಕರು ಮತ್ತು ಸಿಬ್ಬಂದಿ ತಮ್ಮ ಬಿಡುವಿನ ವೇಳೆಯಲ್ಲಿ ಸ್ವಇಚ್ಛೆಯಿಂದ ಶ್ರಮದಾನ ಮಾಡಿ ಗಿಡಮರಗಳನ್ನು ಬೆಳೆಸುತ್ತಿದ್ದಾರೆ ಎಂದು ಹೇಳಿದರು.

ಡಿಪೋ ಮತ್ತು ಗ್ಯಾರೇಜ್‌ನಲ್ಲಿ ನಾಲ್ಕು ಕೊಳವೆಬಾವಿಗಳಿವೆ. ಬಸ್‌ಗಳನ್ನು ಸ್ವಚ್ಛ ಮಾಡಿದ ತ್ಯಾಜ್ಯ ನೀರನ್ನು ಬಳಸಿಕೊಂಡು ಗಿಡಮರಗಳನ್ನು ಬೆಳೆಸುತ್ತಿದ್ದೇವೆ. ಆವರಣದಲ್ಲಿ ತ್ಯಾಜ್ಯವನ್ನೇ ಗೊಬ್ಬರವಾಗಿ ಗಿಡಮರಗಳ ಬುಡಕ್ಕೆ ಹಾಕುತ್ತೇವೆ ಎಂದುವಿಜಯಪುರ ಘಟಕ 1ರ ಹಿರಿಯ ಘಟಕ ವ್ಯವಸ್ಥಾಪಕ ಎಂ.ಎಸ್‌.ಹಿರೇಮಠ ತಿಳಿಸಿದರು.

ಗಿಡಮರಗಳ ಅಡಿಯಲ್ಲಿಡಿಪೋ ಮತ್ತು ವರ್ಕ್‌ಶಾಪ್‌ನಲ್ಲಿ ಚಾಲಕ, ನಿರ್ವಾಹಕರು, ಸಿಬ್ಬಂದಿ ಕುಳಿತು ವಿಶ್ರಾಂತಿ ಪಡೆಯುತ್ತಾರೆ, ಊಟ ಮಾಡುತ್ತಾರೆ. ನೂರಾರು ಪಕ್ಷಿಗಳು ಇಲ್ಲಿ ಆಶ್ರಯ ಪಡೆದುಕೊಂಡಿವೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರಿನ ಘಟಕ:ಅಲ್ಲದೇ, ಚಾಲಕ, ನಿರ್ವಾಹಕರ ಅನುಕೂಲಕ್ಕಾಗಿಡಿಪೊದಲ್ಲಿ ಶುದ್ಧ ನೀರಿನ ಘಟಕವನ್ನು ಮಾಡಲಾಗಿದ್ದು, ಹೆಚ್ಚುವರಿ ನೀರನ್ನು ಸುತ್ತಲಿನ ಬಡಾವಣೆಯ ಜನರು ಕೊಂಡೊಯ್ಯುತ್ತಾರೆ. ₹ 5ಕ್ಕೆ 20 ಲೀಟರ್‌ನಂತೆ ದರ ನಿಗದಿ ಮಾಡಲಾಗಿದೆ. ಈ ಹಣವನ್ನು ಕೊಳವೆಬಾವಿ, ಶುದ್ಧನೀರಿನ ಘಟಕದ ನಿರ್ವಹಣೆಗೆ ಬಳಸುತ್ತೇವೆ ಎಂದುನಾರಾಯಣಪ್ಪ ಕುರುಬರ ಹೇಳಿದರು.

***

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಸಿಬ್ಬಂದಿ ಮನೆಯಲ್ಲಿ ಸುಮ್ಮನೇ ಕೂರವ ಬದಲು ಬುತ್ತಿ ಕಟ್ಟಿಕೊಂಡು ಬಂದು ಗಿಡ,ಮರಗಳ ಬೆಳೆಸಿರುವುದು ಅಭಿನಂದನೀಯ

–ನಾರಾಯಣಪ್ಪ ಕುರುಬರ,ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ

***

ಚಾಲಕ, ನಿರ್ವಾಹಕ, ಸಿಬ್ಬಂದಿ ಡಿಪೋ, ವರ್ಕ್‌ಶಾಪ್‌ ಆವರಣವನ್ನು ತಮ್ಮ ಮನೆಯಂತೆ ತಿಳಿದು ಶ್ರಮದಾನ ಮಾಡಿ, ಗಿಡಮರಗಳನ್ನು ಬೆಳೆಸಿ,ಕಾಳಜಿ ಮಾಡುತ್ತಿದ್ದಾರೆ.

–ಎಂ.ಎಸ್‌.ಹಿರೇಮಠ,ಹಿರಿಯ ಘಟಕ ವ್ಯವಸ್ಥಾಪಕ, ವಿಜಯಪುರ ಘಟಕ 1

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT