ವಿಜಯಪುರ: ಕಾಂಗ್ರೆಸ್‌ನ ಸುಳ್ಳು, ಬೋಗಸ್ ಭರವಸೆಗಳ ಗ್ಯಾರಂಟಿ ಕಾರ್ಡ್‌ನ್ನು ಜನ ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ನಾಲತವಾಡದ ಶ್ರೀ ಶರಣ ವೀರೇಶ್ವರ ಮಹಾವಿದ್ಯಾಲಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನಾವು ಸುಳ್ಳು ಮಾತನಾಡಲ್ಲ, ಸುಳ್ಳು ಭರವಸೆ ನೀಡಲ್ಲ, ನಾವು ಮೋಸ ಮಾಡಲ್ಲ, ನಮ್ಮ ಕೆಲಸವೇ ನಮ್ಮ ಗ್ಯಾರಂಟಿ ಎಂದು ಹೇಳಿದರು.
ಡಾ.ನಂಜುಂಡಪ್ಪ ವರದಿ ಬಗ್ಗೆ ಈ ಹಿಂದಿನ ಸರ್ಕಾರದ ಪ್ರತಿನಿಧಿಗಳು ಕೇವಲ ಭಾಷಣ ಮಾಡಿದ್ದರು. ಆದರೆ, ನಮ್ಮ ಸರ್ಕಾರ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಿದೆ. ಚಿಮ್ಮಲಗಿ, ಮುಖವಾಡ ಏತ ನೀರಾವರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಒಂಬತ್ತು ಏತ ನೀರಾವರಿ ಯೋಜನೆಗಳು ‘ಬಿ’ ಸ್ಕೀಮ್ ನಲ್ಲಿವೆ ಎಂದು ಹೇಳಿ ಅನುಷ್ಠಾನಕ್ಕೆ ಅಧಿಕಾರಿಗಳು ತಡೆಯಾಗಿದ್ದರು. ಆ ಅಡೆತಡೆಯನ್ನು ನಿವಾರಣೆ ಮಾಡಿ, ಯೋಜನೆಗಳ ಅನುಷ್ಠಾನಕ್ಕೆ ನಾನು ಆದ್ಯತೆ ನೀಡಿದೆ ಎಂದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದವರು ಯಾರು ಎಂದು ಕಾಂಗ್ರೆಸ್ ಈಗ ಉತ್ತರ ನೀಡಬೇಕಿದೆ, ಐವತ್ತು ವರ್ಷಗಳ ಕಾಲ ಈ ಭಾಗದ ಅಭಿವೃದ್ಧಿ ನಿರ್ಲಕ್ಷ್ಯ ಏಕೆ ಮಾಡಿದ್ದರು ಎಂದು ಹೇಳಬೇಕು ಎಂದು ಪ್ರಶ್ನಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಐದು ವರ್ಷದಲ್ಲಿ ₹ 50 ಸಾವಿರ ಕೋಟಿ ಅನುದಾನ ನೀಡುತ್ತೇವೆ ಎಂದು ಕೃಷ್ಣೆಯ ಮೇಲೆ ಆಣೆ ಮಾಡಿ ಕೇವಲ ₹ 6 ಸಾವಿರ ಕೋಟಿ ಯುಕೆಪಿಗೆ ನೀಡಿದ್ದಾರೆ. ಐದು ವರ್ಷದ ಆಡಳತಾವಧಿಯಲ್ಲಿ ಸಂತ್ರಸ್ತ ರೈತರ ಭೂಮಿಗೆ ದರ ನಿಗದಿ ಮಾಡಲು ಆಗದವರಿಗೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕ ಭಾಗ ಸಂಪೂರ್ಣ ನೀರಾವರಿ ಆಗುವವರಿಗೆ ವಿಶ್ರಮಿಸುವುದಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಸದಾ ಕಾಲ ಮಾತನಾಡುವವರು ಏನೂ ಮಾಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಎಂ.ಎಸ್.ರುದ್ರಗೌಡ, ಎಂ.ಎಸ್.ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ ಇದ್ದರು.
ಮುಖ್ಯಮಂತ್ರಿ ಬೊಮ್ಮಾಯಿ ಫಲಾನುಭವಿಗಳಿಗೆ ಮನೆ ಹಕ್ಕುಪತ್ರ ವಿವರಿಸಿದರು.
ಶಾಸಕ ನಡಹಳ್ಳಿ ಮತ್ತು ಅವರ ಪುತ್ರ ಭರತ್ ನಡಹಳ್ಳಿ ಬೊಮ್ಮಾಯಿ ಅವರಿಗೆ ಹಸುವಿನ ಪ್ರತಿಕೃತಿ ನೀಡಿ ಸನ್ಮಾನಿಸಿದರು. ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕುಡಿಯುವ ನೀರಿಗಾಗಿ ಬರಿಗಾಲಲ್ಲಿ ನಾಲ್ಕು ದಶಕದಿಂದ ಪ್ರತಿಭಟನೆ ನಡೆಸಿದ್ದ ಬಸವರಾಜ ನಂದಿಕೇಶ್ವರಮಠ ಅವರನ್ನು ಸಿಎಂ ಸನ್ಮಾನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.