ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೀಘ್ರ ಎಲ್ಲ ಕಾಮಗಾರಿ ಪೂರ್ಣಗೊಳಿಸಿ’

ಕಾಳಗಿ: ತಾ.ಪಂ ಅಧ್ಯಕ್ಷೆ ಪುಷ್ಪಾ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ
Last Updated 5 ಜನವರಿ 2021, 7:29 IST
ಅಕ್ಷರ ಗಾತ್ರ

ಕಾಳಗಿ: ‘ಏನೇ ಸಮಸ್ಯೆ ಇದ್ದರೂ ತಕ್ಷಣವೇ ಬಗೆಹರಿಸಿಕೊಂಡು ಫೆಬ್ರವರಿ ಅಂತ್ಯದೊಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಚವಾಣ್ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಇಲ್ಲಿನ ಸರ್ಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ಜರುಗಿದ ತಾಲ್ಲೂಕು ಪಂಚಾಯಿತಿ ತಿಂಗಳ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಬೆಡಸೂರ ಗ್ರಾಮ ಪಂಚಾಯಿತಿ ಸ್ವಂತ ಕಟ್ಟಡ ಪೂರ್ಣಗೊಂಡಿಲ್ಲ. ಕಾಮಗಾರಿ ಬೇಗನೆ ಮುಗಿಸಬೇಕು. ಬೆಡಸೂರ ಕೆ. ತಾಂಡಾದ ರಸ್ತೆ ತೀರಾ ಕಳಪೆ ಮಟ್ಟದಾಗಿದೆ. ಬಿಲ್ ತಡೆಹಿಡಿದು ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಿ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಅಕ್ಕನಾಗಮ್ಮ ನಾಗಣ್ಣಾ ಶೀಲವಂತ ಮಾತನಾಡಿ, ‘ಹೆಬ್ಬಾಳ ಸೇರಿದಂತೆ ವಿವಿಧ ತಾಂಡಾಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉಪಯೋಗಕ್ಕೆ ಬರುತ್ತಿಲ್ಲ. ಜನರು ದೂರದ ಊರುಗಳಿಂದ ಶುದ್ಧ ನೀರು ತರುವುದರಲ್ಲಿ ಹೈರಾಣಾಗುತ್ತಿದ್ದಾರೆ. ಕೂಡಲೇ ಎಲ್ಲ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಹೆಬ್ಬಾಳ ಒಳಗೊಂಡು ಆಯಾ ಪ್ರದೇಶದಲ್ಲೇ ಶುದ್ಧ ನೀರು ಸಿಗುವಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘7ರಸ್ತೆ ಕಾಮಗಾರಿಗಳಲ್ಲಿ 1 ಪೂರ್ಣಗೊಂಡು 6 ಪ್ರಗತಿಯಲ್ಲಿವೆ. ಬೆಡಸೂರ ಕೆ. ತಾಂಡಾ ಕಳಪೆ ರಸ್ತೆ ಕಾಮಗಾರಿ ಗುತ್ತಿಗೆದಾರರ ಮೇಲೆ ಖಂಡಿತ ಕ್ರಮ ಜರುಗಿಸಲಾಗುವುದು’ ಎಮದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ರಾಮ ದಂಡಗುಲಕರ್ ಭರವಸೆ ನೀಡಿದರು.

‘ಕಾಳಗಿ ಬಸ್ ನಿಲ್ದಾಣ ಬಳಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗದ ಸಮಸ್ಯೆ ಉಂಟಾಗಿದ್ದರಿಂದ ಅದನ್ನು ಬೇರೆಕಡೆ ನಿರ್ಮಿಸಲಾಗುತ್ತಿದೆ’ ಎಂದು ಪಂಚಾಯತ್ ರಾಜ್ ಇಲಾಖೆಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೀರೇಂದ್ರಕುಮಾರ ಹೇಳಿದರು.

‘ಇಲ್ಲಿ ಮಾಹಿತಿ ನೀಡುವಾಗ ಇಲಾಖೆಯವರು ಕಾಳಗಿ ತಾಲ್ಲೂಕಿಗೆ ಸಂಬಂಧಪಟ್ಟಂತೆ ಮಾತ್ರ ಮಾಹಿತಿ ನೀಡಬೇಕು. ಅದನ್ನು ಬಿಟ್ಟು ಚಿಂಚೋಳಿ ಅಥವಾ ಚಿತ್ತಾಪುರ ಸೇರಿಸುವುದು ಸರಿಯಲ್ಲ. ಇನ್ನುಮುಂದೆ ‘ಕಾಳಗಿ’ಯದ್ದೆ ಪ್ರತ್ಯೇಕ ವರದಿ ತಯಾರಿಸಿಕೊಂಡು ಬನ್ನಿ’ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೋಡ ತಾಕೀತು ಮಾಡಿದರು.

ಚಿತ್ತಾಪುರ ಬಿಇಒ ಸಿದ್ಧವೀರಯ್ಯ ರುದ್ನೂರ, ಸಿಡಿಪಿಒ ರಾಜಕುಮಾರ ರಾಠೋಡ, ತೋಟಗಾರಿಕೆ ಇಲಾಖೆ ಎಡಿ ಸಿದ್ದು ಪಾಟೀಲ, ಅಕ್ಷರದಾಸೋಹ ಅಧಿಕಾರಿ ಪ್ರಕಾಶ ನಾಯಿಕೋಡಿ, ಜೆಸ್ಕಾಂ ಎಇಇ ವಿವೇಕಾನಂದ ಕುಲಕರ್ಣಿ, ಪಶು ವೈದ್ಯ ಡಾ.ಗೌತಮ ಕಾಂಬಳೆ, ಸಮುದಾಯ ಆರೋಗ್ಯ ಕೇಂದ್ರದ ಡಾ.ಅಮರೇಶ ಎಮ್.ಎಚ್., ಬಸ್ ಘಟಕದ ವ್ಯವಸ್ಥಾಪಕ ಯಶವಂತ ಯಾತನೂರ, ಚಿಂಚೋಳಿ ಬಿಇಒ ದತ್ತಪ್ಪ ತಳವಾರ, ಸಿಡಿಪಿಒ ಗುರುಪ್ರಸಾದ, ಬಿಎಚ್ಇಒ ಮಹೇಶ ಮೋರೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವರದಿ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT