ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರದ ವಿಜಯಪುರ ಲೋಕಸಭಾ ಕಣ

ಚುನಾವಣಾ ಪ್ರಚಾರಕ್ಕೆ ದುಮುಕದ ಸಚಿವರು, ಶಾಸಕರು
Published 20 ಮಾರ್ಚ್ 2024, 7:41 IST
Last Updated 20 ಮಾರ್ಚ್ 2024, 7:41 IST
ಅಕ್ಷರ ಗಾತ್ರ

ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರಕ್ಕೆ ಈಗಾಗಲೇ ಚುನಾವಣೆ ದಿನಾಂಕದ ಜೊತೆಗೆ ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರೂ ಘೋಷಣೆಯಾಗಿದೆ. ಆದರೆ, ಪ್ರಚಾರ ಮಾತ್ರ ಇನ್ನೂ ಕಾವು ಪಡೆದಿಲ್ಲ.

ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಂದ ಇದುವರೆಗೆ ಅಧಿಕೃತ ಚುನಾವಣಾ ಪ್ರಚಾರ ಸಭೆ, ಸಮಾರಂಭಗಳು ನಡೆದಿಲ್ಲ. ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಲೋಕಸಭಾ ಚುನಾವಣಾ ಕಣಕ್ಕೆ ಇನ್ನೂ ಮುಖ ಮಾಡಿಲ್ಲ, ಆಸಕ್ತಿಯನ್ನೂ ತೋರಿಸುತ್ತಿಲ್ಲ.

ಬಿಜೆಪಿಯಲ್ಲಿ ಮಾತ್ರ ಮುಖಂಡರು, ಪದಾಧಿಕಾರಿಗಳ ಸಭೆಗಳು ಜಿಲ್ಲೆಯಾದ್ಯಂತ ಕೆಲವು ಕಡೆಗಳಲ್ಲಿ ನಡೆದಿವೆ. ಚುನಾವಣೆ ಘೊಷಣೆಗೂ ಮುನ್ನಾ ಕಾಂಗ್ರೆಸ್‌ನಿಂದ ಗ್ಯಾರಂಟಿ ಸಮಾವೇಶಗಳು ನಡೆದಿವೆ. ಇದನ್ನು ಹೊರತು ಪಡಿಸಿ, ರಾಜ್ಯ, ರಾಷ್ಟ್ರೀಯ ನಾಯಕರ ಆಗಮನ ಜಿಲ್ಲೆಗೆ ಇದುವರೆಗೂ ಆಗಿಲ್ಲ. ಹೀಗಾಗಿ ಚುನಾವಣೆ ಕಣ ಇನ್ನೂ ರಂಗೇರಿಲ್ಲ.

ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಪಕ್ಷದ ಮಾಜಿ ಶಾಸಕರು, ಮುಖಂಡರೊಂದಿಗೆ ಜಿಲ್ಲೆಯಾದ್ಯಂತ ಒಂದು ಸುತ್ತು ಹಾಕಿ, ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಿ ಪ್ರಾಥಮಿಕ ಸಿದ್ಧತೆ ನಡೆಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಅವರು ದೇವಸ್ಥಾನ, ಜಾತ್ರೆಗಳಿಗೆ ಭೇಟಿ ನೀಡಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ಶಾಸಕರು, ಸಚಿವರು ಇನ್ನೂ ಇವರಿಗೆ ಸಾಥ್‌ ನೀಡಿಲ್ಲ.

ಬಿಜೆಪಿಯೊಂದಿಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರೂ ಜಿಲ್ಲೆಯಲ್ಲಿ ಇದುವರೆಗೆ ಎರಡೂ ಪಕ್ಷಗಳ ಮುಖಂಡರು  ಪರಸ್ಪರ ಒಂದು ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ, ಸಭೆಗಳನ್ನು ನಡೆಸಿಲ್ಲ. ಮೈತ್ರಿ ಎಂಬುದು ರಾಜ್ಯಮಟ್ಟಕ್ಕೆ ಸೀಮಿತವಾಗಿದೆ. ಅಲ್ಲದೇ, ಚುನಾವಣೆಯ ಹೊಸ್ತಿಲಿನಲ್ಲಿ ಜೆಡಿಎಸ್‌ ಸ್ಥಳೀಯ ಮುಖಂಡರು ಜಿಲ್ಲೆಯಲ್ಲಿ ಒಂದು ಸಭೆಯನ್ನೂ ನಡೆಸಿಲ್ಲ.

ವಿಜಯಪುರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್‌ 12ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಮೇ 7ರಂದು ಮತದಾನ ನಡೆಯಲಿದ್ದು, ಈ ನಡುವೆ ಸಾಕಷ್ಟು ಸಮಯ ಇರುವುದರಿಂದ ಚುನಾವಣೆ ಕಾವು ಪಡೆದಿಲ್ಲ. ಬಹುತೇಕ ಹೋಳಿ ಹಬ್ಬದ ಬಳಿಕ ಪ್ರಚಾರ ಭರಾಟೆ ಜೋರಾಗುವ ನಿರೀಕ್ಷೆ ಇದೆ.

ಮತದಾನಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇರುವುದರಿಂದ ಈಗಿನಿಂದಲೇ ಪ್ರಚಾರ ಆರಂಭಿಸಿದರೆ ಅಭ್ಯರ್ಥಿಗಳ ಖರ್ಚು–ವೆಚ್ಚವೂ ನಿರೀಕ್ಷೆ ಮೀರುವ ಸಾಧ್ಯತೆ ಇರುವುದರಿಂದ ಹಿಂದೇಟು ಹಾಕುತ್ತಿರುವಂತೆ ಬಾಸವಾಗುತ್ತಿದೆ. ಜೊತೆಗೆ ಬಿಸಿಲ ಆರ್ಭಟವೂ ಅಧಿಕ ಇರುವುದರಿಂದ ಚುನಾವಣೆ ಕಾವು ಪಡೆದುಕೊಂಡಿಲ್ಲ.

ಅಲ್ಲದೇ, ವಿಜಯಪುರ ಲೋಕಸಭಾ ಕ್ಷೇತ್ರವು ‘ಮೀಸಲು’ ಕ್ಷೇತ್ರವಾಗಿರುವುದರಿಂದ ವಿಧಾನಸಭೆ ಚುನಾವಣೆಯಲ್ಲಿ ಕಂಡುಬರುವಂತೆ ಗೌಡರು, ಪಾಟೀಲರ ಗೌಜು–ಗದ್ದಲ ಇಲ್ಲದಿರುವುರಿಂದ ಕಣ ರಂಗು ಪಡೆದಿಲ್ಲ. ಒಂದು ವೇಳೆ ಸಾಮಾನ್ಯ ಕ್ಷೇತ್ರವಾಗಿದ್ದರೆ ಸ್ಪರ್ಧೆ ಅದಾಗಲೇ ಮೈಸೂರು, ಮಂಡ್ಯ, ಶಿವಮೊಗ್ಗದಂತೆ ರಂಗೇರುತ್ತಿತ್ತು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕಣದಲ್ಲಿ ಇರುವ  ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಇಬ್ಬರೂ ಸೌಮ್ಯ ಸ್ವಭಾವದವರು. ವೈಯಕ್ತಿಕ ನೆಲೆ ಗಟ್ಟಿನಲ್ಲಿ ಟೀಕೆ, ಟಿಪ್ಪಣಿ ಇವರ ನಡುವೆ ಕಾಣುವುದು ಕಷ್ಟ. ಇಬ್ಬರೂ ಚುನಾವಣೆ ಜಿದ್ದಿಗೆ ಬೀಳದೇ ಶಾಂತವಾಗಿ ಪ್ರಚಾರ ನಡೆಸತೊಡಗಿದ್ದಾರೆ. ಬಹುತೇಕ ಏಪ್ರಿಲ್‌ನಲ್ಲಿ ಕಣ ರಂಗೇರುವ ನಿರೀಕ್ಷೆ ಇದೆ.

ರಾಜು ಆಲಗೂರ
ರಾಜು ಆಲಗೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT