ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣು ಭಾರತೀಯ ಸಂಸ್ಕೃತಿಯ ಪ್ರತೀಕ’

ಶಿಕ್ಷಣ ತಜ್ಞೆ ಇಂದೂಮತಿ ಕಾಡದೊರೆ ಅಭಿಮತ
Last Updated 25 ಡಿಸೆಂಬರ್ 2018, 13:37 IST
ಅಕ್ಷರ ಗಾತ್ರ

ಕಗ್ಗೋಡ:‘ಮಾತೃ ಸಂಗಮ’ದಲ್ಲಿ ಮಹಿಳಾ ಪರ ಚಿಂತಕಿಯರು ಮಹಿಳಾ ಶಕ್ತಿ, ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಮಹಿಳಾ ಸಬಲೀಕರಣ ಇನ್ನಿತರೆ ವಿಚಾರಗಳ ಕುರಿತು ಬೆಳಕು ಚೆಲ್ಲಿದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಖಂಡಿಮಠ, ‘ಮಹಿಳೆ ಧರಿಸುವ ಪ್ರತಿಯೊಂದು ವಸ್ತುವಿನಲ್ಲಿಯೂ ಮೌಲ್ಯಯುತವಾದ ಅರ್ಥವಿದ್ದು, ಮೌಢ್ಯ ಎಂಬುದನ್ನು ಬಿಟ್ಟು, ತಾಳ್ಮೆಯಿಂದ ಇರಲು ತಾಳಿ, ಎಚ್ಚರದಿಂದ ಇರಲು ಕುಂಕುಮ, ಮನೆಯ ತುಂಬಾ ಸಂತೋಷದ ಅಲೆ ಇರಲು ಬಳೆ, ಹೀಗೆ ಸ್ತ್ರೀಗೆ ಅವಶ್ಯಕವಿರುವ ಲಾಂಛನಗಳ ಹಿಂದೆ ಅರ್ಥಪೂರ್ಣವಾದ ಸಂದೇಶಗಳ ಕುರಿತು ಪ್ರತಿಯೊಬ್ಬರು ಅರಿತುಕೊಳ್ಳಬೇಕು’ ಎಂದು ಹಲವು ವಿಚಾರವನ್ನು ಪ್ರಸ್ತುತ ಪಡಿಸಿದರು.

‘ಮನುಷ್ಯರ ಕ್ರೌರ್ಯವನ್ನು ಅಡಗಿಸಿ, ಕ್ರೌರ್ಯವನ್ನು ತಣ್ಣಗೆ ಮಾಡಿ ಆ ಕ್ರೌರ್ಯವನ್ನೇ ಶೌರ್ಯವಾಗಿ ಪುಟಿದೇಳುವಂತಹ ಶಕ್ತಿ ಪ್ರತಿಯೊಬ್ಬ ಸ್ತ್ರೀಯರಲ್ಲಿ ಅಡಗಿದೆ. ಕುಟುಂಬದ ಅಸ್ಥಿರತೆ, ಮೌಲ್ಯಗಳಿಂದ ವಿಮುಖರಾಗಿರುವುದರಿಂದಾಗಿಯೇ ನಮ್ಮ ದೇಶದಲ್ಲಿ ವಿಚ್ಚೇದನಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಇದೇ ಸಂದರ್ಭ ಕಳವಳ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞೆ ಇಂದೂಮತಿ ಕಾಡದೊರೆ ಮಾತನಾಡಿ ‘ಗೃಹಿಣಿಯರ ಬಗ್ಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯನೀಯ ಸ್ಥಾನವಿದೆ. ಹೆಣ್ಣು ಭಾರತೀಯ ಸಂಸ್ಕೃತಿಯ ಪ್ರತೀಕ. ಭುವನೇಶ್ವರಿಯ ಸ್ವರೂಪಿ. ಗೃಹಿಣಿ ಇಲ್ಲದ ಮನೆಯನ್ನು ಭಯಂಕರವಾದ ಕಾನನ ಎಂದೇ ಕರೆಯಲಾಗಿದೆ. ಆ ಮೂಲಕ ಗೃಹಿಣಿಯಿಂದಲೇ `ಮನೆ’ ಸಂಪೂರ್ಣವಾಗುತ್ತದೆ. ಅವಳು ಮನಸ್ಸು ಮಾಡಿದರೆ ಎಂತಹ ಕಷ್ಟದ ಕಾರ್ಯವನ್ನು ಸುಲಭವಾಗಿ ಮಾಡಬಲ್ಲಳು’ ಎಂದರು.

‘ವಸಿಷ್ಠ ಮುನಿಗಳು ಶ್ರೀಕೃಷ್ಣನಿಗೆ ಕ್ರೋಧ ತರಿಸುವ ಉದ್ದೇಶದಿಂದ ದ್ವಾರಕಾಗೆ ಪ್ರಯಾಣ ಬೆಳೆಸುತ್ತಾರೆ, ಆ ಸಂದರ್ಭದಲ್ಲಿ ಅನೇಕ ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗುತ್ತಾರೆ, ಆ ಸಂದರ್ಭದಲ್ಲಿ ವಸಿಷ್ಠ ಮುನಿಗಳು ಶ್ರೀಕೃಷ್ಣನಿಗೆ ವರದಾನ ಕೇಳು ಎಂದು ಕೇಳಿಕೊಳ್ಳುತ್ತಾರೆ, ಆಗ ಭಗವಾನ್ ಕೃಷ್ಣನೇ ‘ಮಾತೃ ಹಸ್ತ ಭೋಜನಂ’ ಎಂದು ತಾನು ಇರುವವರೆಗೂ ಮಾತೃವಿನ ಕೈತುತ್ತು ತಿನ್ನುವ ವರದಾನ ಕಲ್ಪಿಸಿ ಎಂದು ಕೇಳಿಕೊಳ್ಳುತ್ತಾನೆ. ಈ ಸಂಗತಿಯ ಮೂಲಕ ಮಾತೃವಿನ ಕೈ ತುತ್ತಿನಲ್ಲಿ ಎಂತಹ ಶಕ್ತಿ ಅಡಗಿದೆ’ ಎಂಬುದನ್ನು ತಿಳಿಸಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭಾಲ್ಕಿ ಹಿರೇಮಠದ ಚೆನ್ನಬಸವ ಪಟ್ಟದೇವರು, ಬೀದರ್‌ನ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ, ಬುರಣಾಪುರ ಆರೂಢಾಶ್ರಮದ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.

ಅಕ್ಕಮಹಾದೇವಿ ಮಹಿಳಾ ವಿ.ವಿ.ಯ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ, ವಾರಾಣಾಸಿಯ ಸುರಭಿ ಶೋಧ ಸಂಸ್ಥಾನದ ಸೂರ್ಯಕಾಂತ ಜಾಲಾನಾ ಇದ್ದರು. ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿ ಸಂರಕ್ಷಕ, ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT