ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪತ್ರಿಕಾ ವಿತರಕರ ಜೀವನ ಹಸನಾಗಲಿ

ಪತ್ರಿಕಾ ವಿತರಕರ ದಿನಾಚರಣೆ; ಸಾಧಕರಿಗೆ ಸನ್ಮಾನ
Last Updated 4 ಸೆಪ್ಟೆಂಬರ್ 2022, 13:28 IST
ಅಕ್ಷರ ಗಾತ್ರ

ವಿಜಯಪುರ:ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಹೊಸ ಪತ್ರಿಕಾ ಭವನದಲ್ಲಿವಿಶ್ವ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು.

ಸಮಾರಂಭದಲ್ಲಿ ಬೃಹತ್ ಕೇಕ್ ಕತ್ತರಿಸಿ, 10ಕ್ಕೂ ಅಧಿಕ ಪತ್ರಿಕಾ ವಿತರಕರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಪತ್ರಿಕಾ ವಿತರಕರ ಕಾಯಕಕ್ಕೆ ಉತ್ತೇಜನ ನೀಡಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಪತ್ರಿಕಾ ವಿತರಕರು ದಿನ ಪತ್ರಿಕೆಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾದಂಥ ಸಂಕಷ್ಟ ಸಮಯದಲ್ಲೂ ಮನೆ, ಮನೆಗೂ ಪತ್ರಿಕೆಗಳನ್ನು ವಿತರಿಸುವ ಮೂಲಕ ಕೊರೊನಾ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಿರುವುದು ಅವಿಸ್ಮರಣೀಯವಾದುದು ಎಂದರು.

ಕೊರೆಯುವ ಚಳಿಯಿರಲಿ, ಸುರಿಯುವ ಮಳೆ ಇರಲಿ, ಮನೆಯಲ್ಲಿ ಕಹಿ-ಸಿಹಿ ಘಟನೆ ಇರಲಿ,ಇವರ ಕಾಯಕ ಮಾತ್ರ ನಿರಂತರ. ನೂರೆಂಟು ಕಷ್ಟಗಳಿದ್ದರೂ, ಹೊರಗೆ ತೋರ್ಪಡಿಸದೇ, ನಸುಕಿನಲ್ಲಿ ಎದ್ದು, ಪತ್ರಿಕೆ ವಿತರಿಸುವ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಅವರ ಭವಿಷ್ಯ ಸುಧಾರಣೆಯಾಗಲಿ ಎಂದು ಆಶಿಸಿದರು.

ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕೆ ವಿತರಕರು ಎದುರಿಸುತ್ತಿರುವ ತಾಪತ್ರಯಗಳಿಗೆ ಲೆಕ್ಕವಿಲ್ಲ. ವಿತರಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ನಿಟ್ಟಿನಲ್ಲಿ ವಿತರಕರೆಲ್ಲ ಸಂಘಟಿತರಾಗಿ, ತಮ್ಮ ಹಕ್ಕುಗಳಿಗೆ ಹೋರಾಟ ರೂಪಿಸಬೇಕು ಎಂದರು.

‘ಪ್ರಜಾವಾಣಿ‘ ಪ್ರಸಾರಂಗ ವಿಭಾಗದವ್ಯವಸ್ಥಾಪಕ ಬಸಪ್ಪ ಮಗದುಮ್‌, ವಿಜಯ ಕರ್ನಾಟಕ ಪತ್ರಿಕೆ ಪ್ರಸಾರಾಂಗ ವ್ಯವಸ್ಥಾಪಕರಮೇಶ ವಿಟ್ಲಾಪುರ, ವಿಜಯವಾಣಿ ಪತ್ರಿಕೆ ಪ್ರಸಾರಾಂಗ ವಿಭಾಗದ ಈರಣ್ಣ ಅವಟಿ, ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಬು ಮಂಗಾನವರ,ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತೆ ಕೌಶಲ್ಯಾ ಪನಾಳಕರ ಮಾತನಾಡಿದರು.

ಮೌನಾಚಾರಣೆ: ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗಷ್ಟೇ ಕೊನೆಯುಸಿರೆಳೆದ ಮುದ್ದೇಬಿಹಾಳ ಪಟ್ಟಣದ ಪತ್ರಿಕಾ ವಿತರಕ ಎಸ್.ಬಿ. ಕತ್ತಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿ ರಾಹುಲ ಆಪ್ಟೆ, ದೀಪಕ ಶಿಂತ್ರೆ, ಸಂಘದ ಸದಸ್ಯ ಸಂಜು ಅಕ್ಕಿ, ವಿತರಕರಾದ ಮಲ್ಲಿಕಾರ್ಜುನ ಹಳ್ಳದ, ಗಣೇಶ ರುದ್ರಘಂಟಿ, ದಯಾನಂದ ಶಿರಶ್ಯಾಡ, ಶಿವಾನಂದ ಹೂಗಾರ, ಸುರೇಶ ಬೂದಿಹಾಳ, ನಾಗರಾಜ ಅವಜಿ, ಭೀಮು ವಳಸಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT