ಶುಕ್ರವಾರ, ಫೆಬ್ರವರಿ 3, 2023
15 °C
ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ದರ್ಶನಕ್ಕೆ ಸರದಿ ಸಾಲು

ಶ್ರೀಗಳ ನೆನಪು; ಮಿಡಿಯುತ್ತಿರುವ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ನಡೆದಾಡುವ ದೇವರು’ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗಿ ಮೂರು ದಿನಗಳಾದರೂ ಭಕ್ತರ ಮನದಲ್ಲಿ ಅಗಲಿಕೆ ನೋವು ಇನ್ನೂ ಮಡುಗಟ್ಟಿದೆ.

ಮನಸ್ಸಿಗೆ ಎಷ್ಟೇ ಸಮಾಧಾನ ತಂದುಕೊಳ್ಳಲು ಯತ್ನಿಸಿದರೂ ಶ್ರೀಗಳನ್ನು ಮರೆಯಲಾಗದೇ ಭಕ್ತರು ಚಡಪಡಿಸುತ್ತಿರುವುದು ಬುಧವಾರ ಆಶ್ರಮದ ಆವರಣದಲ್ಲಿ ಕಂಡುಬಂದಿತು.

ಮೂರ್ನಾಲ್ಕು ದಶಕಗಳಿಂದ ಶ್ರೀಗಳ ಪ್ರವಚನ ಆಲಿಸಿದ್ದ ಭಕ್ತರಿಗೆ ಈಗಲೂ ಶ್ರೀಗಳ ಅಗಲಿಕೆಯ ನೋವು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಶ್ರೀಗಳ ಪಾರ್ಥಿವ ಶರೀರದ ದರ್ಶನ ಮಾಡಿದ್ದರೂ ಸಹ ಮನಸ್ಸಿಗೆ ಸಮಾಧಾನವಾಗದೇ ಕೊನೆಯದಾಗಿ ಅವರ ಚಿತಾಭಸ್ಮಕ್ಕೆ ನಮಿಸಬೇಕೆಂದು ಬುಧವಾರ ದಿನವಿಡೀ ಸಹಸ್ರಾರು ಭಕ್ತರು ಆಶ್ರಮದತ್ತ ಬಂದು ಹೋಗುತ್ತಿರುವುದು ಭಕ್ತರ ಮತ್ತು ಶ್ರೀಗಳ ಅವಿನಾಭಾವ ಸಂಬಂಧವನ್ನು ಸಾಬೀತು ಪಡಿಸುತ್ತಿತ್ತು.

ಚಿತಾಭಸ್ಮಕ್ಕೆ ನಮಿಸಿ, ಆಶ್ರಮದ ಗಿಡಮರಗಳ ನೆರಳಲ್ಲಿ ಕುಳಿತು ಅವರ ನೆನಪುಗಳನ್ನು, ಪ್ರವಚನದ ಸಾರವನ್ನು ಮೆಲುಕು ಹಾಕಿ ನಿಟ್ಟುಸಿರು ಬಿಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆಶ್ರಮದ ಜ್ಞಾನ ಭಂಡಾರಕ್ಕೆ ಭೇಟಿ ನೀಡಿ ಶ್ರೀಗಳ ಅಮೂಲ್ಯ ಗ್ರಂಥಗಳನ್ನು, ಫೋಟೊಗಳನ್ನು ಖರೀದಿಸಿ ಅನೇಕರು ಮನೆಗೆ ತೆಗೆದುಕೊಂಡು ಹೋದರು.

ಶಾಸಕ ಎಂ.ಬಿ.ಪಾಟೀಲ, ಜಿಲ್ಲಾಧಿಕಾರಿ ವಿಜಯಮಹಾಂತೇಶ್‌ ಮತ್ತಿತರರು ಆಶ್ರಮಕ್ಕೆ ಭೇಟಿ ನೀಡಿ, ಬಸವಲಿಂಗ ಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಶ್ರೀಗಳ ಚಿತಾಭಸ್ಮ ವಿಸರ್ಜನೆ ಹಾಗೂ ಮುಂದಿನ ಕಾರ್ಯಗಳ ಬಗ್ಗೆ ಚರ್ಚಿಸಿದರು.

ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಶ್ರೀಗಳ ಅಂತಿಮ ವಿಧಿವಿಧಾನಗಳು ಅವರ ಆಶಯದಂತೆ ಗೌರವಪೂರ್ವಕವಾಗಿ ನೆರವೇರಿದೆ. ಸರ್ಕಾರ, ಜನಪ್ರತಿನಿಧಿಗಳು, ಮಠಾಧೀಶರು, ಸಾರ್ವಜನಿಕರು, ಸಂಘ, ಸಂಸ್ಥೆಗಳು ಅಂತಿಮ ಯಾತ್ರೆಯನ್ನು ಶಾಂತ, ಶಿಸ್ತುಬದ್ಧವಾಗಿ ನೆರವೇರುವಂತೆ ಮಾಡಿದ್ದಾರೆ ಎಂದರು.

ಶ್ರೀಗಳ ಆಶಯಕ್ಕೆ ತಕ್ಕಂತೆ ಮುಂದಿನ ಕಾರ್ಯಗಳು ನಡೆಯಬೇಕಿದೆ. ನಿರಂತರವಾಗಿ ಆಧ್ಯಾತ್ಮಿಕ ಕಾರ್ಯ, ಪ್ರವಚನ, ದಾಸೋಹ ಕಾರ್ಯ ಆಶ್ರಮದಲ್ಲಿ ಮುಂದುವರಿಯಬೇಕಿದೆ. ಈ ಬಗ್ಗೆ ಸುತ್ತೂರು ಶ್ರೀ, ಕನ್ಹೇರಿ ಮಠದ ಶ್ರೀಗಳು ನಿರ್ಧರಿಸಲಿದ್ದಾರೆ ಎಂದು ಹೇಳಿದರು.

***

ಜನತೆಗೆ ಜಿಲ್ಲಾಧಿಕಾರಿ ಕೃತಜ್ಞತೆ

ವಿಜಯಪುರ: ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನ, ಅಂತಿಮ ಯಾತ್ರೆ ಹಾಗೂ ಅಂತ್ಯಕ್ರಿಯೆ ಶಾಂತರೀತಿಯಲ್ಲಿ, ಭಕ್ತಿಮಯವಾಗಿ, ಯಶಸ್ವಿಯಾಗಿ ನೆರವೇರಿಸಲು ಸಹಕರಿಸಿದ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ  ವಿಜಯಮಹಾಂತೇಶ  ಕೃತಜ್ಞತೆ ಅರ್ಪಿಸಿದ್ದಾರೆ.

ಶ್ರೀಗಳ ಅಂತಿಮ ದರ್ಶನ, ಯಾತ್ರೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ  ಕೈಗೊಂಡಿದ್ದರೂ ಸಹ  ಶ್ರೀಗಳ ಮೇಲೆ ಇಟ್ಟಿರುವ ಅಪಾರ ಭಕ್ತಿಯಿಂದ 25 ಲಕ್ಷಕ್ಕಿಂತ ಹೆಚ್ಚಿನ ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ, ಅತ್ಯಂತ ಸೌಜನ್ಯದಿಂದ ತಾಳ್ಮೆಯಿಂದ ವರ್ತಿಸಿ ಸಹಕರಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಹೊರಗಿನಿಂದ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ, ಶ್ರೀಗಳ ಅಂತಿಮಯಾತ್ರೆ ಸಾಗಿ ಹೋಗುವ ವಿವಿಧ ರಸ್ತೆಗಳಲ್ಲಿ ರಂಗೋಲಿ, ಆರತಿ ಬೆಳಗುವಿಕೆ ಮೂಲಕ ಸಹಕರಿಸಿದ ರೀತಿ ಅಭಿನಂದನಾರ್ಹವಾಗಿದೆ ಎಂದಿದ್ದಾರೆ.

ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಮೂಲಕ ಶ್ರೀಗಳ ಆಶಯದಂತೆ ಅತ್ಯಂತ ಶಾಂತಿಯುತವಾಗಿ ನೆರವೇರಿಸಲು ಸಾಧ್ಯವಾಗಿರುವುದರಿಂದ ಎಲ್ಲ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದ್ದಾರೆ.

***

25 ವರ್ಷದಿಂದ ಆಶ್ರಮದ ಭಕ್ತರು. ಅವರ ಆಸರೆಯಲ್ಲಿ ಬೆಳೆದವರು. ಅಪ್ಪೋರು ಬಯಲಲ್ಲಿ ಬಯಲಾದರು. ಆದರೆ, ನಾವು ಕಳೆದುಕೊಂಡ ದುಃಖ ಕಡಿಮೆಯಾಗುತ್ತಿಲ್ಲ.

ಸುಮಂಗಲಾ ಬಿರಾದಾರ, ಆದರ್ಶನಗರ, ವಿಜಯಪುರ

***

ಅಪ್ಪೋರದು ಏನು ವಾಣಿ, ಏನ್ ಮಾತ್ರೀ. ಅವರ ನೋಡಿದ್ರೆ ಮನಸ್ಸಿಗೆ ಸಮಾಧಾನ ಆಗುತ್ತಿತ್ತು. ಅವರಿಲ್ಲದೇ ಮನಸ್ಸಿಗೆ ಕೆಟ್ಟ ಅನಿಸಿದೆ. ಮನೆಯಲ್ಲಿ ಕೂರಲು ಆಗ್ತಿಲ್ಲ.  

ಸಿದ್ದಮ್ಮ ದಳವಾಯಿ, ಗುಮಸ್ತ ಕಾಲೊನಿ, ವಿಜಯಪುರ

***

ಶ್ರೀಗಳ ಚಿತಾಭಸ್ಮಾವನ್ನು ಹಣೆಗೆ ಹಂಚಿಕೊಂಡು ಪಾವನ ಆಗಬೇಕು, ದುಃಖ ಕಡಿಮೆ ಮಾಡಿಕೊಳ್ಳಬೇಕು ಎಂದು ಬಂದಿದ್ದೇನೆ. ಅವರ ದರ್ಶನ, ಪ್ರವಚನವಿಲ್ಲದೇ ಬೇಸರವಾಗಿದೆ

–ಬೋರಮ್ಮ ಹಂಚಿನಾಳ, ಗುಮಾಸ್ತ ಕಾಲೊನಿ, ವಿಜಯಪುರ

***

ಶ್ರೀಗಳು ಅದೃಶ್ಯರಾದರೂ ಮರೆಯಲು ಸಾಧ್ಯವಾಗುತ್ತಿಲ್ಲ. ಸಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪೋರ ಚಿತಾಭಸ್ಮವನ್ನು ನೋಡಿ ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಬಂದಿದ್ದೇನೆ 

–ಗೀತಾ ಅಂಗಡಿ, ಅಕ್ಕಿ ಕಾಲೊನಿ, ವಿಜಯಪುರ

***

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು